ಮದ್ಯವರ್ಜನ ಶಿಬಿರದಿಂದ ಕುಡಿತ ಬಿಟ್ಟ 44 ಜನ ವ್ಯಸನಿಗಳು

Public TV
1 Min Read
rcr 8

ರಾಯಚೂರು: ಮದ್ಯವ್ಯಸನ ಮುಕ್ತ ಸಮಾಜಕ್ಕಾಗಿ ರಾಯಚೂರಿನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದಲ್ಲಿ 1,450ನೇ ಮದ್ಯವರ್ಜನ ಶಿಬಿರದ ಕುಟುಂಬ ದಿನದ ಮುಕ್ತಾಯ ಸಮಾರಂಭವನ್ನು ನಗರದ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಳೆದ ಒಂದು ವಾರದಿಂದ ಮದ್ಯ ವರ್ಜನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಮದುವೆ ಮನೆಯಂತೆ ಶೃಂಗಾರಗೊಂಡಿದ್ದ ಕಾರ್ಯಕ್ರಮದಲ್ಲಿ ಆರತಿ ಬೆಳಗುವ ಮೂಲಕ ಕಾರ್ಯಕ್ರಮದ ಕೊನೆಯ ದಿನಕ್ಕೆ ಮಹಿಳೆಯರು ಚಾಲನೆ ನೀಡಿದರು. ಕಾರ್ಯಕ್ರಮದಿಂದ 44 ಜನ ಮದ್ಯ ವ್ಯಸನಿಗಳು ಮದ್ಯ ಬಿಡುವಲ್ಲಿ ಯಶಸ್ವಿಯಾಗಿದ್ದಾರೆ. ಮದ್ಯ ವರ್ಜನೆ ಮಾಡಿದ ಕುಟುಂಬಸ್ಥರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

rcr 3 3

8 ದಿನಗಳ ಕಾಲ ನಡೆದ ಯಶಸ್ವಿ ಶಿಬಿರದಲ್ಲಿ ಮದ್ಯ ಬಿಟ್ಟ ಪುರುಷರು ಮದುಮಗನಂತೆ ಕಂಗೊಳಿಸ್ತಿದ್ರು. ಅವರೊಂದಿಗೆ ಬಂದಿದ್ದ ಕುಟುಂಬಸ್ಥರು ನಮ್ಮವರು ಕುಡಿತ ಬಿಟ್ಟರು ಎನ್ನುವ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಗಂಡಂದಿರು ಹೆಂಡತಿಗೆ ಮಲ್ಲಿಗೆ ಮುಡಿಸಿದ್ರೆ, ಹೆಂಡತಿಯರು ಗಂಡನ ಆಶೀರ್ವಾದ ಪಡೆದರು. ತಾಯಿ-ಮಗ ಹಾಗೂ ಅಣ್ಣ-ತಂಗಿ ಇದ್ರೆ, ಕುಡಿತ ಬಿಟ್ಟವರು ತಾಯಿ ಹಾಗೂ ಅಕ್ಕ, ತಂಗಿಯ ಆಶೀರ್ವಾದ ಪಡೆದಿದ್ದು ಹಾಗೂ ಕೊನೆಯಲ್ಲಿ ಸಭೆಯಲ್ಲಿ ಸೇರಿದವರೆಲ್ಲ ಅಕ್ಷತೆ ಹಾಕಿ ಚಪ್ಪಾಳೆ ತಟ್ಟಿದ್ದು ವಿಶೇಷವಾಗಿತ್ತು.

rcr 2 4

ಕಳೆದ ನಾಲ್ಕು ವರ್ಷಗಳಿಂದ ಕುಡಿತದ ಚಟಕ್ಕೆ ಒಳಗಾಗಿ ಬದುಕು ಹಾಳುಮಾಡಿಕೊಂಡಿದ್ದೆ ಆದರೆ ಈಗ ಉತ್ತಮ ಜೀವನ ನಡೆಸುವ ಭರವಸೆ ಬಂದಿದೆ ಎಂದು ಶಿಬಿರದಿಂದ ಕುಡಿತದ ಚಟ ಬಿಟ್ಟಿರುವ ರಾಯಚೂರಿನ ಉರುಕುಂದಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶಿಬಿರದಲ್ಲಿ ರಾಯಚೂರು ಮಾತ್ರವಲ್ಲದೆ ಕಲಬುರ್ಗಿ ಸೇರಿ ವಿವಿಧೆಡೆಯವರು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *