– ರಾಯಚೂರು ರೈತರಿಗೆ ಕೂಲಿಕಾರರಿಲ್ಲದೆ ಎದುರಾಗಿದೆ ಸಂಕಷ್ಟ
ರಾಯಚೂರು: ಪ್ರತಿ ವರ್ಷ ಅತೀವೃಷ್ಠಿ ಅನಾವೃಷ್ಠಿಗಳಿಗೆ ತುತ್ತಾಗಿ ಒದ್ದಾಡುತ್ತಿದ್ದ ಬಿಸಿಲನಾಡು ರಾಯಚೂರಿನ ರೈತರು ಈ ಬಾರಿ ಹೊಸ ಸಮಸ್ಯೆಗೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿ ಈ ಬಾರಿ ಮಳೆ ಉತ್ತಮವಾಗಿರುವ ಪರಿಣಾಮ ಹತ್ತಿ ಇಳುವರಿ ಭರ್ಜರಿಯಾಗಿದೆ. ಮೆಣಸಿನಕಾಯಿ, ಜೋಳ ಕೂಡ ಉತ್ತಮವಾಗಿದೆ. ಆದರೆ ಬೆಳೆ ಕಟಾವಿಗೆ ಬಂದು ನಿಂತಿದ್ದು ಬೆಳೆಯನ್ನ ಬಿಡಿಸಿಕೊಳ್ಳಲು ರೈತರಿಗೆ ಕಷ್ಟವಾಗುತ್ತಿದೆ. ಕಾರಣ ಕೃಷಿ ಕೂಲಿಕಾರರ ಸಮಸ್ಯೆ. ಸ್ಥಳೀಯವಾಗಿ ಕೂಲಿಕಾರರು ಸಿಗದೆ ರೈತರು ಕಂಗಾಲಾಗಿದ್ದಾರೆ. ಇನ್ನೂ ಸ್ವಲ್ಪ ದಿನ ಕಳೆದರೆ ಜಮೀನಿನಲ್ಲೇ ಬೆಳೆಗಳು ಹಾಳಾಗುವ ಭೀತಿ ಎದುರಾಗಿದೆ.
ಇಲ್ಲಿ ಹತ್ತಿ ಬಿಡಿಸಲು ಕೂಲಿಯಾಳು ಸಿಗದೆ ರೈತರು ಪರದಾಡುತ್ತಿದ್ದರೆ, ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ರೈತರು ಇಲ್ಲಿನ ಕೂಲಿಕಾರರನ್ನು ದುಬಾರಿ ಕೂಲಿ ಹಣ ಕೊಟ್ಟು ತಮ್ಮತ್ತ ಸೆಳೆಯುತ್ತಿದ್ದಾರೆ. ಕಡಿ ಪ್ರದೇಶದಲ್ಲಿ ದಿನಕ್ಕೆ 150 ರೂ. ಕೂಲಿ ನೀಡುತ್ತಿದ್ದರೆ ಆಂಧ್ರ, ತೆಲಂಗಾಣದಲ್ಲಿ 250 ರೂ. ನೀಡಲಾಗುತ್ತಿದೆ. ಅದರ ಜೊತೆಗೆ ಕರೆದೊಯ್ಯಲು ಪ್ರತಿ ವ್ಯಕ್ತಿಗೆ 50 ರೂ. ಆಟೋ ವೆಚ್ಚ ನೀಡಲಾಗುತ್ತಿದೆ. ಈಗ ಆಂಧ್ರ, ತೆಲಂಗಾಣದಲ್ಲಿ ಬೇಸಿಗೆ ಬೆಳೆಗೆ ನಾಟಿ ಕಾರ್ಯ ಶುರುವಾಗಿದ್ದು ಕೂಲಿಕಾರರಿಗೆ ಎಲ್ಲಿಲ್ಲದ ಬೇಡಿಕೆ ಇದೆ.
Advertisement
Advertisement
ಜಿಲ್ಲೆಯಲ್ಲಿ 74,654 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗಿದೆ. ಕೇಳಿದಷ್ಟು ಹಣ ಕೊಡುತ್ತೇವೆಂದರೂ ಹತ್ತಿ ಬಿಡಿಸಲು ಕೂಲಿಕಾರರು ಸಿಗುತ್ತಿಲ್ಲ. ಮೊದಲೆಲ್ಲ ಹತ್ತಿ ಬಿಡಿಸಲು ದಿನಕ್ಕೆ ಇಂತಿಷ್ಟು ಎಂದು ಕೂಲಿ ನೀಡಲಾಗುತ್ತಿತ್ತು. ಆದರೆ ಈಗ ಒಬ್ಬ ವ್ಯಕ್ತಿ ದಿನಕ್ಕೆ ಎಷ್ಟು ಹತ್ತಿ ಬೇಕಾದರೂ ಬಿಡಿಸಲಿ. ಕೆಜಿಗೆ 8 ರೂ. ನೀಡುತ್ತಿದ್ದೇವೆ ಎನ್ನುತ್ತಾರೆ ರೈತರು. ಹೀಗಾಗಿ ಒಬ್ಬ ಮಹಿಳೆ 50-60 ಕೆಜಿ ಹತ್ತಿ ಬಿಡಿಸುತ್ತಾಳೆ. ಇದು ರೈತರಿಗೆ ಹೊರೆಯಾದರೂ ಬೇರೆ ದಾರಿ ಕಾಣದಾಗಿದೆ. 30-40 ಕಿಮೀ ದೂರದವರೆಗೂ ಹೋಗಿ ಕರೆ ತರುವ ಸ್ಥಿತಿ ಇದೆ. ಬೆಳಗ್ಗೆ ಕರೆದುಕೊಂಡು ಹೋಗಿ ಸಂಜೆ ಕರೆ ತರಬೇಕೀದೆ. ಇದಕ್ಕೆಲ್ಲಾ ಸರ್ಕಾರವೇ ಹೊಣೆ ಅಂತ ರೈತ ಮುಖಂಡ ಲಕ್ಷ್ಮಣ ಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
Advertisement
Advertisement
ಈಗಾಗಲೇ ಮಾರುಕಟ್ಟೆ ನಾನಾ ಭಾಗಗಳಿಂದ ಹತ್ತಿ ಲಗ್ಗೆ ಇಡುತ್ತಿದೆ. ಇದರಿಂದ 4,400ರಿಂದ 5,250 ರೂ.ವರೆಗೆ ದರ ಇದೆ. ಹತ್ತಿ ಖರೀದಿ ಕೇಂದ್ರಗಳಲ್ಲಿ 5,550 ರೂ.ಗೆ ಒಬ್ಬ ರೈತರಿಂದ 40 ಕ್ವಿಂಟಲ್ ಖರೀದಿಸಲಾಗುತ್ತಿದೆ. ಸರ್ಕಾರ ತನ್ನ ಖರೀದಿ ಮಿತಿ ಮುಗಿದ ಬಳಿಕ ಯಾವಾಗ ಬೇಕಾದರೂ ಕೇಂದ್ರ ಸ್ಥಗಿತ ಮಾಡಬಹುದು ಎಂಬ ಆತಂಕ ರೈತರನ್ನ ಕಾಡುತ್ತಿದೆ.