ರಾಯಚೂರು: ವೈದ್ಯರ ನಿರ್ಲಕ್ಷ್ಯಕ್ಕೆ ಬಾಲಕನೊಬ್ಬ ಸಾವನ್ನಪ್ಪಿದ್ದಾನೆ ಎಂದು ಪೋಷಕರು ಆರೋಪಿಸಿ ಆಸ್ಪತ್ರೆಯಲ್ಲಿ ಮಗುವಿನ ಶವವಿಟ್ಟು ಪ್ರತಿಭಟನೆ ಮಾಡಿದ ಘಟನೆ ನಗರದಲ್ಲಿ ನಡೆದಿದೆ.
ಇಲ್ಲಿನ ಶಕ್ತಿನಗರದ ನಿವಾಸಿ ಆರ್ ಟಿಪಿಎಸ್‍ನ ಸಿಬ್ಬಂದಿ ಸತೀಶ್ ಅವರ ಪುತ್ರ ಶ್ರೀಹರ್ಷ (6) ವೈದ್ಯರ ನಿರ್ಲಕ್ಷಕ್ಕೆ ಬಲಿಯಾದ ಬಾಲಕ. ಕೆಪಿಸಿ ಆಸ್ಪತ್ರೆಯಲ್ಲಿ ಬಾಲಕನ ಪೋಷಕರು ಇಂದು ಪ್ರತಿಭಟನೆ ನಡೆಸಿದರು.
ಆಗಿದ್ದೇನು?:
ಬಾಲಕ ಶ್ರೀಹರ್ಷ ಮೂಗಿನ ಸಮಸ್ಯೆಯಿಂದ ಬಳಲುತ್ತಿದ್ದ. ಹೀಗಾಗಿ ಸತೀಶ್ ಅವರು ಮಗನಿಗೆ ಚಿಕಿತ್ಸೆ ಕೊಡಿಸಲು ಕೆಪಿಸಿ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿನ ವೈದ್ಯರ ಸಲಹೆಯಂತೆ ಶ್ರೀಹರ್ಷನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಶಸ್ತ್ರಚಿಕಿತ್ಸೆ ವೇಳೆ ವೈದ್ಯರು ಯಡವಟ್ಟು ಮಾಡಿದ್ದಾರೆ. ಕೂಡಲೇ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಮಗುವನ್ನು ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.
ಕಿಡ್ನಿ, ಹೃದಯ, ಮೆದುಳಿನ ಸಮಸ್ಯೆಯಾಗಿ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಇಂದು ಮೃತಪಟ್ಟಿದ್ದಾನೆ. ಇದರಿಂದಾಗಿ ಕೆಪಿಸಿ ಆಸ್ಪತ್ರೆಯ ವೈದ್ಯರ ವಿರುದ್ಧ ಅಸಮಾಧಾನ ಹೊರ ಹಾಕಿದ ಪೋಷಕರು, ಮಗುವಿನ ಶವವಿಟ್ಟು ಪ್ರತಿಭಟನೆ ನಡೆಸಿದರು.