6 ತಿಂಗಳಿಗೇ ಕಿತ್ತು ಬಂದ 1.58 ಕೋಟಿಯ 2 ಕಿ.ಮೀ ರಸ್ತೆ!

Public TV
1 Min Read
RAICHUR ROAD 1

ರಾಯಚೂರು: ನಗರದ ಹೊರವಲಯದಿಂದ ಆಶಾಪುರ ಗ್ರಾಮಕ್ಕೆ (Ashapura Village) ತೆರಳುವ ಸಿಸಿ ರಸ್ತೆ ದೂರದಿಂದ ನೋಡುವವರಿಗೆ ವ್ಹಾವ್ ಎಷ್ಟು ಚೆನ್ನಾಗಿದೆ ಅನ್ನಿಸದೇ ಇರಲ್ಲಾ. ಆದರೆ ರಸ್ತೆಗೆ ಇಳಿದಾಗಲೇ ಗೊತ್ತಾಗುವುದು ಅದರ ಅಸಲಿಯತ್ತು.

RAICHUR ROAD 2

6 ತಿಂಗಳ ಹಿಂದೆ 1 ಕೋಟಿ 58 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಎರಡು ಕಿ.ಮೀ ರಸ್ತೆ ಎರಡು ಬದಿಯಲ್ಲೂ ದೊಡ್ಡಮಟ್ಟದಲ್ಲಿ ಬಿರುಕು ಬಿಟ್ಟಿದ್ದು ಅಪಘಾತಗಳಿಗೆ ಆಹ್ವಾನಿಸುತ್ತಿದೆ. 10ಕ್ಕೂ ಹೆಚ್ಚು ಗ್ರಾಮಗಳ ಜನ ಪ್ರತಿಯೊಂದಕ್ಕೂ ಇದೇ ರಸ್ತೆಯ ಮೂಲಕ ರಾಯಚೂರು ನಗರಕ್ಕೆ ಬರಬೇಕಾಗಿದೆ. ರಸ್ತೆಯ ಬಿರುಕುಗಳಲ್ಲಿ ಬೈಕ್‍ಗಳ ಟೈಯರ್ ಗಳು ಸಿಲುಕಿ ಅಪಘಾತಗಳು ಸಹ ನಡೆದಿವೆ. ಹೀಗಾಗಿ ಸಿಸಿ ರಸ್ತೆ ಅಂತ ಒಂದು ಕ್ಷಣವೂ ಮೈಮರೆಯದೆ ಜನ ಓಡಾಡಬೇಕಿದೆ. ಆದ್ರೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾತ್ರ ರಸ್ತೆ ಹಾಳಾಗಿದ್ರು ಇದುವರೆಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.

ರಸ್ತೆ ಹಾಳಾಗಿ ಜನ ಹಿಡಿ ಶಾಪ ಹಾಕುತ್ತಿದ್ದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾತ್ರ ರಸ್ತೆ ಸರಿಪಡಿಸಲು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಅಂತ ಕೂಲಾಗಿ ಹೇಳುತ್ತಿದ್ದಾರೆ. ಅಕ್ಕಪಕ್ಕದಲ್ಲಿ ಲೇಔಟ್ ಗಳ ನಿರ್ಮಾಣ ಹಿನ್ನೆಲೆ ಭಾರದ ವಾಹನಗಳು ಓಡಾಡಿ ರಸ್ತೆ ಬಿರುಕು ಬಿಟ್ಟಿದೆ. ಕ್ವಾಲಿಟಿ ಕಂಟ್ರೋಲ್ ತಜ್ಞರೊಂದಿಗೆ ತಪಾಸಣೆ ಮಾಡಿಸಿ ಒಂದೆರಡು ತಿಂಗಳಲ್ಲಿ ರಸ್ತೆ ಸರಿಪಡಿಸುತ್ತೇವೆ ಅಂತೆ ಪಿಡಬ್ಲ್ಯೂಡಿ ಕಾರ್ಯನಿರ್ವಾಹಕ ಇಂಜಿನಿಯರ್ ಕೆ.ಶಂಕರ್ ಹೇಳಿದ್ದಾರೆ.

RAICHUR ROAD

ಒಟ್ಟಿನಲ್ಲಿ ಕೋಟ್ಯಂತರ ರೂಪಾಯಿ ಅನುದಾನದಲ್ಲಿ ನಿರ್ಮಿಸಿದ ರಸ್ತೆ ಗುಣಮಟ್ಟ ಬಿರುಕುಗಳ ಮೂಲಕ ಬಯಲಾಗಿದೆ. ರಸ್ತೆ ಸಂಪೂರ್ಣ ಹಾಳಾಗುವ ಮುನ್ನವೇ ಸಂಬಂಧಪಟ್ಟವರು ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ.

Share This Article