ರಾಯಚೂರು: ಕಳೆದ ಒಂದು ತಿಂಗಳಲ್ಲಿ ಜಿಲ್ಲೆಯ 113 ಜನರಿಗೆ ಹೃದಯಾಘಾತವಾಗಿದ್ದು (Heart Attack), ಚಿಕಿತ್ಸೆ ಪಡೆದ ಎಲ್ಲರೂ ಗುಣಮುಖರಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುರೇಂದ್ರ ಬಾಬು ಸ್ಪಷ್ಟನೆ ನೀಡಿದ್ದಾರೆ.
ಜಿಲ್ಲೆಯ ಮಸ್ಕಿಯಲ್ಲಿ ಹೃದಯಾಘಾತದಿಂದ ವ್ಯಕ್ತಿ ಸಾವನ್ನಪ್ಪಿದ ಪ್ರಕರಣದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಕ್ಕಿಲ್ಲ ಎನ್ನುವ ಆರೋಪದ ಹಿನ್ನೆಲೆ ಮಾತನಾಡಿದ ಅವರು, ಮ್ಯಾಸಿವ್ ಹಾರ್ಟ್ ಅಟ್ಯಾಕ್ ಆಗಿದ್ದರಿಂದ ಪಗಡದಿನ್ನಿ ಕ್ಯಾಂಪ್‌ನ 35 ವರ್ಷದ ಶರಣಬಸವನನ್ನ ಉಳಿಸಿಕೊಳ್ಳಲು ಆಗಿಲ್ಲ. ಇದರಲ್ಲಿ ನಮ್ಮ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ನಿರ್ಲಕ್ಷ್ಯ ಇಲ್ಲ ಎಂದರು.ಇದನ್ನೂ ಓದಿ: ಭಾರತದಲ್ಲಿ ಪ್ರೆಸ್ ಸೆನ್ಸಾರ್‌ಶಿಪ್ ಎಂದು ಎಕ್ಸ್ ಆರೋಪ – ಖಾತೆಗಳನ್ನು ನಿಷೇಧಿಸಲು ಆದೇಶ ಹೊರಡಿಸಿಲ್ಲ: ಕೇಂದ್ರ ಸ್ಪಷ್ಟನೆ
ಬೈಕ್‌ನಲ್ಲಿ ರೋಗಿಯನ್ನ ಕರೆತರಲಾಗಿತ್ತು. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದ ಕೂಡಲೇ ಸಿಪಿಆರ್ ಮಾಡಲಾಗಿದೆ. ಕೂಡಲೇ ಐವಿ ಲೈನ್ ಹಾಕಿ, ಆಕ್ಸಿಜನ್ ಕೊಡಲಾಗಿದೆ. ರೋಗಿಯ ಸ್ಯಾಚುರೇಷನ್ ಶೇ.20ರಷ್ಟು ಕಡಿಮೆಯಾಗಿತ್ತು. ರಕ್ತದೊತ್ತಡ, ಪಲ್ಸ್ ರೇಟ್ ಹೆಚ್ಚಾಗಿತ್ತು. ಸಂಜೆ 6:30ಕ್ಕೆ ವೈದ್ಯರು ಡೆಲಿವರಿಯೊಂದನ್ನು ಮಾಡಿ ತೆರಳಿದ್ದರು. ಹೀಗಾಗಿ ಎಮರ್ಜೆನ್ಸಿ ಇದ್ದಿದ್ದರಿಂದ ನಮ್ಮದೇ ಅಂಬುಲೆನ್ಸ್ನಲ್ಲಿ ಸಿಂಧನೂರು ತಾಲೂಕು ಆಸ್ಪತ್ರೆಗೆ ಕಳುಹಿಸಿದ್ದಾರೆ. ಆದ್ರೆ ತೀವ್ರ ಹೃದಯಾಘಾತದಿಂದ ರೋಗಿ ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ.
ಇನ್ನೂ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಲ್ಲಿ 113 ಜನರಿಗೆ ಹೃದಯಾಘಾತವಾಗಿದೆ. ಇದರಲ್ಲಿ ನಾಲ್ಕು ಕ್ರಿಟಿಕಲ್ ಪ್ರಕರಣ ದಾಖಲಾಗಿದ್ದವು. ಚಿಕಿತ್ಸೆ ಪಡೆದ ಎಲ್ಲರೂ ಗುಣಮುಖರಾಗಿದ್ದಾರೆ. ಮಸ್ಕಿಯ ಪ್ರಕರಣದಲ್ಲಿ ಮಾತ್ರ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ನಯನತಾರಾಗೆ ನೋಟಿಸ್ : 5 ಕೋಟಿ ರೂಪಾಯಿಗೆ ಡಿಮಾಂಡ್