LatestLeading NewsMain PostNational

ರಾಹುಲ್‌ ಮದುವೆಯಲ್ಲಿ ಭಾಗವಹಿಸಿದ್ರೆ ಸಂಘಿಗಳಿಗೆ ಭಯ ಯಾಕೆ: ಕಾಂಗ್ರೆಸ್‌ ಪ್ರಶ್ನೆ

ನವದೆಹಲಿ: ರಾಹುಲ್‌ ಗಾಂಧಿ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾದರೆ ಸಂಘಿಗಳಿಗೆ ಭಯ ಯಾಕೆ ಎಂದು ಕಾಂಗ್ರೆಸ್ ಸಂಸದ ಮಾಣಿಕ್ಕಂ ಟ್ಯಾಗೋರ್ ಬಿಜೆಪಿ ನಾಯಕರನ್ನು ಪ್ರಶ್ನೆ ಮಾಡಿದ್ದಾರೆ.

ಸಾಮಾನ್ಯ ವ್ಯಕ್ತಿಯಂತೆ ಖಾಸಗಿ ಮದುವೆಯ ಆರತಕ್ಷತೆಯಲ್ಲಿ ಭಾಗವಹಿಸಿದರೆ ತಪ್ಪೇನು? ಸಂಘಿಗಳು ಏಕೆ ಸುಳ್ಳನ್ನು ಹಬ್ಬಿಸುತ್ತಿದ್ದಾರೆ? ನಾವೆಲ್ಲರೂ ಖಾಸಗಿ ಕಾರ್ಯಕ್ರಮಗಳಿಗೆ ಹಾಜರಾಗುತ್ತೇವೆ ಎಂದು ಟ್ವೀಟ್‌ ಮಾಡಿ ತಿರುಗೇಟು ನೀಡಿದ್ದಾರೆ.

ರಾಹುಲ್‌ ಗಾಂಧಿ ನೈಟ್‌ ಕ್ಲಬ್‌ನಲ್ಲಿರುವ ವೀಡಿಯೋ ವೈರಲ್‌ ಆಗುತ್ತಿದ್ದು ಬಿಜೆಪಿ ನಾಯಕರ ಟೀಕೆಗೆ ಕಾಂಗ್ರೆಸ್‌ ವಕ್ತಾರ ರಂದೀಪ್‌ ಸುರ್ಜೇವಾಲಾ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದರು.

ರಾಹುಲ್ ಗಾಂಧಿ ಅವರು ಕಠ್ಮಂಡುವಿನಲ್ಲಿರುವ ಸ್ನೇಹಿತನ ಮದುವೆಯಲ್ಲಿ ಭಾಗಿಯಾಗಿದ್ದರು. ವಿನಾಕಾರಣ ಕಾಂಗ್ರೆಸ್ ನಾಯಕರ ಹಿಂದೆ ಹೋಗುವ ಬದಲು ಬಿಜೆಪಿ ದೇಶದ ಸಮಸ್ಯೆಗಳ ಬಗ್ಗೆ ಮಾತನಾಡಬೇಕು ಎಂದು ಕುಟುಕಿದರು.

ರಾಹುಲ್‌ ಗಾಂಧಿ ವೈಯಕ್ತಿಕ ಭೇಟಿಯಲ್ಲಿದ್ದಾರೆ. ಬಿಜೆಪಿಯವರು ವಿದ್ಯುತ್‌ ಸಮಸ್ಯೆ, ಹಣದುಬ್ಬರಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ. ಆದರೆ ರಾಹುಲ್‌ ಗಾಂಧಿ ಅವರ ಬಗ್ಗೆ ಮಾತನಾಡಲು ಸಮಯವಿದೆ ಎಂದು ಕಿಡಿಕಾರಿದರು.

ಮದುವೆ ಮತ್ತು ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗವಹಿಸುವುದು ನಮ್ಮ ಸಂಸ್ಕೃತಿ ಮತ್ತು ನಾಗರಿಕತೆಯ ವಿಷಯವಾಗಿದೆ. ಮದುವೆಯಾಗುವುದು, ಯಾರೊಂದಿಗಾದರೂ ಸ್ನೇಹಿತರಾಗುವುದು ಅಥವಾ ಅವರ ಮದುವೆಯಲ್ಲಿ ಪಾಲ್ಗೊಳ್ಳುವುದು ಈ ದೇಶದಲ್ಲಿ ಅಪರಾಧವೇ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ತನಗಿಂತ 28 ವರ್ಷ ಚಿಕ್ಕವಳ ಕೈಹಿಡಿದ ಮಾಜಿ ಕ್ರಿಕೆಟಿಗ ಅರುಣ್ ಲಾಲ್

ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಸುರ್ಜೇವಾಲಾ, ಪಾಕಿಸ್ತಾನಕ್ಕೆ ಪ್ರಧಾನಿ ಮೋದಿ ಹೋದಂತೆ ರಾಹುಲ್ ಗಾಂಧಿ ಆಹ್ವಾನಿಸದ ಅತಿಥಿಯಾಗಿ ತೆರಳಲಿಲ್ಲ. ಸ್ನೇಹಿತರ ಖಾಸಗಿ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ನೇಪಾಳಕ್ಕೆ ತೆರಳಿದ್ದರು ಎಂದು ಹೇಳಿದರು. ಇದನ್ನೂ ಓದಿ: ನೈಟ್‌ಕ್ಲಬ್ ಪಾರ್ಟಿಯಲ್ಲಿ ರಾಹುಲ್ – ವೀಡಿಯೋ ಫುಲ್ ವೈರಲ್

ಮಾಣಿಕ್ಕಂ ಟ್ಯಾಗೋರ್ ಅವರು ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು ಕಾರ್ಯಕ್ರಮವೊಂದರಲ್ಲಿ ಶಾಂಪೇನ್ ಚಿಮ್ಮಿಸುತ್ತಿರುವ ಚಿತ್ರಗಳನ್ನು ಹಂಚಿಕೊಂಡು ತಿರುಗೇಟು ನೀಡಿದ್ದಾರೆ.

Leave a Reply

Your email address will not be published.

Back to top button