ರಾಹುಲ್‌ ಹೆಲಿಕಾಪ್ಟರ್‌ ಟೇಕ್ ಆಫ್‌ಗೆ ಅನುಮತಿ ವಿಳಂಬ – ಎಟಿಸಿ ವಿರುದ್ಧ ಕಾಂಗ್ರೆಸ್‌ ಕಿಡಿ

Public TV
1 Min Read
Rahul Gandhi 2

ರಾಂಚಿ: ಹೆಲಿಕಾಪ್ಟರ್‌ ಟೇಕ್ ಆಫ್‌ಗೆ ಏರ್ ಟ್ರಾಫಿಕ್ ಕಂಟ್ರೋಲ್ (Air Traffic Control) ತಡವಾಗಿ ಅನುಮತಿ ನೀಡಿದ ಪರಿಣಾಮ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು (Rahul Gandhi) 45 ನಿಮಿಷಗಳ ಕಾಲ ಹೆಲಿಕಾಪ್ಟರ್‌ನಲ್ಲೇ ಕಾದು ಕುಳಿತ ಘಟನೆ ಜಾರ್ಖಂಡ್‌ನ (Jharkhand) ಗೊಡ್ಡಾದಲ್ಲಿ ನಡೆದಿದೆ.

ರಾಜ್ಯದ ವಿಧಾನಸಭಾ ಚುನಾವಣೆಯ ಅಂತಿಮ ಹಂತದ ಪ್ರಚಾರಕ್ಕೆ ಅವರು ತೆರಳಿದ್ದರು. ಈ ವೇಳೆ ಅವರ ಹೆಲಿಕಾಪ್ಟರ್‌ ಟೇಕ್ ಆಫ್‌ಗೆ ತಡವಾಗಿ ಅನುಮತಿ ನೀಡಲಾಗಿದೆ. ಇದರಿಂದ ಸುಮಾರು 45 ನಿಮಿಷಗಳ ಕಾಲ ರಾಹುಲ್‌ ಹೆಲಿಕಾಪ್ಟರ್‌ನಲ್ಲೇ ಕಾದು ಕುಳಿತಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ (Congress), ರಾಹುಲ್‌ ಗಾಂಧಿ ಪ್ರಚಾರಕ್ಕೆ ಸಮಸ್ಯೆ ಉಂಟು ಮಾಡುವ ಉದ್ದೇಶದಿಂದ ಹೀಗೆ ಮಾಡಲಾಗಿದೆ. ಗೊಡ್ಡಾದಿಂದ ಸುಮಾರು 150 ಕಿಲೋಮೀಟರ್‌ಗಳಷ್ಟು ದೂರದಲ್ಲಿರುವ ಚಕೈಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ರ‍್ಯಾಲಿ ಇತ್ತು. ಅವರ ಕಾರ್ಯಕ್ರಮಕ್ಕೆ ಎಟಿಸಿ ಆದ್ಯತೆ ನೀಡಿದೆ ಎಂದು ಆರೋಪಿಸಿದೆ.

ಶಾಸಕಿ ಮತ್ತು ಮಹಾಗಾಮಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದೀಪಿಕಾ ಪಾಂಡೆ ಸಿಂಗ್ ಪ್ರತಿಕ್ರಿಯಿಸಿ, ಪ್ರಧಾನಿ ದಿಯೋಗಢ್‌ನಲ್ಲಿ ಇದ್ದಿದ್ದರಿಂದ ರಾಹುಲ್ ಗಾಂಧಿಗೆ ಆ ಪ್ರದೇಶವನ್ನು ದಾಟಲು ಅವಕಾಶ ನೀಡಲಿಲ್ಲ. ಕಾಂಗ್ರೆಸ್ 70 ವರ್ಷಗಳ ಕಾಲ ದೇಶವನ್ನು ಆಳಿತ್ತು. ಆಗ ಯಾವ ವಿರೋಧ ಪಕ್ಷದ ನಾಯಕರ ವಿರುದ್ಧವೂ ಈ ರೀತಿ ನಡೆದುಕೊಂಡಿಲ್ಲ. ಈ ನಡೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.

Share This Article