ಶ್ರೀನಗರ: ಪಾಕಿಸ್ತಾನದ ಶೆಲ್ ದಾಳಿಗೆ ಒಳಗಾಗಿದ್ದ ಪ್ರಮುಖ ಧಾರ್ಮಿಕ ಸ್ಥಳ ಪೂಂಚ್ (Poonch) ಜಿಲ್ಲೆಯ ಗುರುದ್ವಾರಕ್ಕೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಶನಿವಾರ ಭೇಟಿ ನೀಡಿದ್ದಾರೆ.
ಇಂದು ಸಂಜೆ ಜಮ್ಮು & ಕಾಶ್ಮೀರದ ಪೂಂಚ್ ಜಿಲ್ಲೆಯ ಗುರುದ್ವಾರ ಶ್ರೀ ಗುರು ಸಿಂಗ್ ಸಭಾಗೆ ರಾಹುಲ್ ಗಾಂಧಿ ಭೇಟಿಕೊಟ್ಟರು. ಭಾರತದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿತ್ತು. ಈ ವೇಳೆ ಭಾರತದ ಪ್ರಮುಖ ಧಾರ್ಮಿಕ ಸ್ಥಳವಾದ ಗುರುದ್ವಾರವನ್ನು ಟಾರ್ಗೆಟ್ ಮಾಡಿ ಪಾಕಿಸ್ತಾನ ಶೆಲ್ ದಾಳಿ ನಡೆಸಿತ್ತು. ಇದನ್ನೂ ಓದಿ: ಟ್ರಂಪ್ 25% ಸುಂಕ ಹೇರಿದ್ರೂ ಭಾರತದ ಐಫೋನ್ ಚೀಪ್ – ಅಮೆರಿಕದ್ದು ದುಬಾರಿ
ಪೂಂಚ್‌ನಲ್ಲಿ ಪಾಕಿಸ್ತಾನಿ ದಾಳಿಗೆ ಒಳಗಾಗಿದ್ದ ದೇವಾಲಯ, ಗುರುದ್ವಾರ ಮತ್ತು ಮದರಸಾಗಳಿಗೆ ಇಂದು ಭೇಟಿ ನೀಡಿದ್ದೇನೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಆ ಪ್ರದೇಶಕ್ಕೆ ಭೇಟಿ ನೀಡಿದ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಶನಿವಾರ ಬೆಳಗ್ಗೆ ಜಮ್ಮು ವಿಮಾನ ನಿಲ್ದಾಣಕ್ಕೆ ಬಂದು ಹೆಲಿಕಾಪ್ಟರ್‌ನಲ್ಲಿ ಪೂಂಚ್‌ಗೆ ತೆರಳಿದರು. ಪಾಕಿಸ್ತಾನಿ ಶೆಲ್ ದಾಳಿಯಿಂದ ತೀವ್ರವಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ದುಃಖತಪ್ತ ಕುಟುಂಬಗಳನ್ನು ಭೇಟಿ ಮಾಡಿದರು. ಮೇ 7 ರಂದು ಪೂಂಚ್ ಪಟ್ಟಣದಲ್ಲಿ ಪಾಕಿಸ್ತಾನಿ ಶೆಲ್ ದಾಳಿಯಲ್ಲಿ ತಮ್ಮ ಇಬ್ಬರು ಸ್ನೇಹಿತರಾದ ಜೈನ್ ಅಲಿ ಮತ್ತು ಉರ್ವಾ ಫಾತಿಮಾ ಅವರನ್ನು ಕಳೆದುಕೊಂಡ ಶಾಲಾ ವಿದ್ಯಾರ್ಥಿಗಳನ್ನು ಸಹ ಇದೇ ವೇಳೆ ಭೇಟಿಯಾದರು. ಇದನ್ನೂ ಓದಿ: ಮೋದಿ ನೇತೃತ್ವದ ನೀತಿ ಆಯೋಗದ ಸಭೆಗೆ ಸಿದ್ದರಾಮಯ್ಯ ಗೈರು
ಮೇ 7 ಮತ್ತು 10 ರ ನಡುವೆ ಪಾಕಿಸ್ತಾನದ ಶೆಲ್ ದಾಳಿಯಿಂದ ಅತಿ ಹೆಚ್ಚು ಹಾನಿಗೊಳಗಾದ ಪೂಂಚ್ ಜಿಲ್ಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಹದಿಮೂರು ನಾಗರಿಕರು ಸಾವನ್ನಪ್ಪಿದ್ದರು.
ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ನಂತರ ರಾಹುಲ್ ಗಾಂಧಿಯವರು ಕೇಂದ್ರಾಡಳಿತ ಪ್ರದೇಶಕ್ಕೆ ಎರಡನೇ ಬಾರಿಗೆ ಭೇಟಿ ನೀಡಿದ್ದಾರೆ. ಇದಕ್ಕೂ ಮೊದಲು, ಏಪ್ರಿಲ್ 25 ರಂದು ಶ್ರೀನಗರಕ್ಕೆ ಭೇಟಿ ನೀಡಿ ಭಯೋತ್ಪಾದಕ ದಾಳಿಯ ಸಮಯದಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಿದ್ದರು.