Connect with us

ಮೋದಿ ಭೇಟಿ ಬಳಿಕ ರಾಜ್ಯಕ್ಕೆ ರಾಹುಲ್ ಗಾಂಧಿ ಎಂಟ್ರಿ-ಹೀಗಿದೆ ಕಾಂಗ್ರೆಸ್ ಅಧ್ಯಕ್ಷರ ವೇಳಾಪಟ್ಟಿ

ಮೋದಿ ಭೇಟಿ ಬಳಿಕ ರಾಜ್ಯಕ್ಕೆ ರಾಹುಲ್ ಗಾಂಧಿ ಎಂಟ್ರಿ-ಹೀಗಿದೆ ಕಾಂಗ್ರೆಸ್ ಅಧ್ಯಕ್ಷರ ವೇಳಾಪಟ್ಟಿ

ಬೆಂಗಳೂರು: ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ ಬಳಿಕ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ. ಫೆಬ್ರವರಿ 10ರಂದು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿ ನಡೆಯುವ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

ಹೊಸಪೇಟೆ ಸಮಾವೇಶದ ಬಳಿಕ ಬಸ್ ಮೂಲಕ ಕೊಪ್ಪಳದ ಮುನಿರಾಬಾದ್ ಗೆ ತೆರಳಲಿದ್ದಾರೆ. ಮಾರ್ಗ ಮಧ್ಯೆಯೇ ಹುಲಿಗೆಮ್ಮ ಮತ್ತು ಗವಿ ಸಿದ್ದೇಶ್ವರ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆಯಲಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ದೇವರ ದರ್ಶನದ ಬಳಿಕ ಸಂಜೆ 6 ಗಂಟೆಗೆ ಕುಕನೂರಿನಲ್ಲಿ ಸಾರ್ವಜನಿಕ ಸಭೆ ನಡೆಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ ಅಂತಾ ಎನ್ನಲಾಗಿದೆ.

ಫೆಬ್ರವರಿ 11ಕ್ಕೆ ಬೆಳಗ್ಗೆ ರಸ್ತೆ ಮಾರ್ಗವಾಗಿ ಕೊಪ್ಪಳ ಜಿಲ್ಲೆಯ ಕುಷ್ಟಗಿ, ಕಾರಟಗಿ, ಗಂಗಾವತಿ ಮತ್ತು ಕನಕಗಿರಿ ಪಟ್ಟಣಗಳಿಗೆ ಭೇಟಿ ನೀಡಲಿದ್ದಾರೆ. ಇದೇ ಕಾರಟಗಿಯಲ್ಲಿ ಬೃಹತ್ ಸಾರ್ವಜನಿಕರ ಸಭೆ ನಡೆಸಿ, ಮುಂದೆ ಹಂಚಿನಾಳ ಕ್ಯಾಂಪ್ ನಿವಾಸಿಗಳನ್ನು ರಾಹುಲ್ ಗಾಂಧಿ ಭೇಟಿ ಆಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸಿಂಧನೂರು ಪಟ್ಟಣದಲ್ಲಿ ಸ್ಥಳೀಯ ರೈತರೊಂದಿಗೆ ಚರ್ಚೆ ನಡೆಸಿ, ರಾಯಚೂರ ನಗರಕ್ಕೆ ತೆರಳಿ ವಿಶ್ರಾಂತಿ ಪಡೆಯಲಿದ್ದಾರೆ.

ಫೆಬ್ರವರಿ 12ರಂದು ರಾಯಚೂರಿನ ಕಲ್ಮಲಕ್ಕೆ ಭೇಟಿ ನೀಡಿ, ದೇವದುರ್ಗ, ಜೇವರ್ಗಿಯಲ್ಲಿಯೂ ಕಾರ್ಯಕರ್ತರನ್ನು ಮತ್ತು ಸ್ಥಳೀಯ ನಿವಾಸಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಜೇವರ್ಗಿ ಪಟ್ಟಣದಿಂದ ನೇರವಾಗಿ ಕಲಬುರ್ಗಿ ನಗರಕ್ಕೆ ತೆರಳಿ ಖಾಜಾ ಬಂದೇನವಾಜ್ ದರ್ಗಾ ವೀಕ್ಷಣೆ ಮಾಡಲಿದ್ದಾರೆ. ಫೆಬ್ರವರಿ 12ರಂದು ಕಲಬುರ್ಗಿಯಲ್ಲಿಯೇ ವಾಸ್ತವ್ಯ ಮಾಡಲಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಫೆಬ್ರವರಿ 13ರಂದು ಕಾಂಗ್ರೆಸ್ ಹಿರಿಯ ನಾಯಕ ದಿ. ಖಮರುಲ್ ಇಸ್ಲಾಂ ನಿವಾಸಕ್ಕೆ ತೆರಳಿ ಕುಟುಂಬಸ್ಥರನ್ನು ಭೇಟಿ ಮಾಡಲಿದ್ದಾರೆ. ನಂತರ ಹೆಚ್.ಕೆ.ಸೊಸೈಟಿಯಲ್ಲಿ ಉದ್ಯಮಿಗಳೊಂದಿಗೆ ಚರ್ಚೆ ನಡೆಸಿ, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಬೀದರ್ ಜಿಲ್ಲೆಯ ಬಸವ ಕಲ್ಯಾಣಕ್ಕೆ ತೆರಳಿ ಮುಂದೆ ಹೈದರಾಬಾದ್ ಗೆ ತೆರಳಲಿದ್ದಾರೆ. ಮತ್ತೆ ಚುನಾವಣೆಗೂ ಮುನ್ನ ರಾಹುಲ್ ಗಾಂಧಿ ರಾಜ್ಯಕ್ಕೆ ಮೂರು ಭಾರಿ ಭೇಟಿ ನೀಡುವ ಸಾಧ್ಯತೆಗಳಿವೆ.