ನನ್ನ, ಕುಟುಂಬವನ್ನು ರಕ್ಷಿಸಲು ದಣಿವರಿಯದೆ ಕೆಲಸ ಮಾಡಿದ್ದಕ್ಕೆ ಧನ್ಯವಾದ- ರಾಹುಲ್ ಗಾಂಧಿ

Public TV
2 Min Read
rahul gandhi

ನವದೆಹಲಿ: ಗಾಂಧಿ ಕುಟುಂಬಕ್ಕೆ ನೀಡಿದ್ದ ಎಸ್‍ಪಿಜಿ(ವಿಶೇಷ ಭದ್ರತಾ ಪಡೆ)ಯನ್ನು ಹಿಂಪಡೆಯಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಸ್‍ಪಿಜಿಗೆ ಧನ್ಯವಾದ ತಿಳಿಸಿದ್ದಾರೆ.

ಈ ಬಗ್ಗೆ ಭಾವನಾತ್ಮಕವಾಗಿ ಟ್ವೀಟ್ ಮಾಡಿರುವ ರಾಹುಲ್, ”ಎಸ್‍ಪಿಜಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನನ್ನ ಎಲ್ಲಾ ಸಹೋದರ, ಸಹೋದರಿಯರಿಗೆ ನನ್ನ ಕಡೆಯಿಂದ ಧನ್ಯವಾದಗಳು. ಕಳೆದ 28 ವರ್ಷಗಳಿಂದ ನನ್ನ ಹಾಗೂ ನನ್ನ ಕುಟುಂಬವನ್ನು ರಕ್ಷಿಸಲು ದಣಿವರಿಯದೇ ಕೆಲಸ ಮಾಡಿದ್ದೀರಿ. ನಿಮ್ಮ ಈ ನಿಸ್ವಾರ್ಥ ಸೇವೆಗೆ ಚಿರಋಣಿ. ಅಲ್ಲದೆ ನಿಮ್ಮ ನಿರಂತರ ಬೆಂಬಲ ಹಾಗೂ ವಾತ್ಸಲ್ಯದಿಂದ ತುಂಬಿದ್ದ ಪ್ರಯಾಣಕ್ಕೆ ಧನ್ಯವಾದಗಳು. ನಿಮ್ಮ ಮುಂದಿನ ಭವಿಷ್ಯಕ್ಕೆ ಶುಭವಾಗಲಿ” ಎಂದು ಬರೆದುಕೊಂಡಿದ್ದಾರೆ.

sonia rahugandhi priyanka gandhi

1991ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಬಳಿಕ ಇಡೀ ಗಾಂಧಿ ಕುಟುಂಬಕ್ಕೆ ವಿಶೇಷ ಭದ್ರತೆಯನ್ನು ಒದಗಿಸಲಾಗಿತ್ತು. ಗಾಂಧಿ ಕುಟುಂಬದ ರಕ್ಷಣೆಗೆ ಯಾವುದೇ ಧಕ್ಕೆ ಇಲ್ಲ. ಅಲ್ಲದೆ ಇತ್ತೀಚೆಗೆ ನೇರ ಬೆದರಿಕೆಗಳು ಕೂಡ ಇಲ್ಲದಿರುವ ಕಾರಣಕ್ಕೆ ಕುಟುಂಬಕ್ಕೆ ನೀಡಲಾಗಿದ್ದ ಎಸ್‍ಪಿಜಿ ಭದ್ರತೆಯನ್ನು ಹಿಂಪಡೆಯಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಇತ್ತ ಕಾಂಗ್ರೆಸ್, ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸುತ್ತಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಚಕಾರ ಎತ್ತದ ರಾಹುಲ್ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಬಿಜೆಪಿಯವರು ಸೋನಿಯಾ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಜೀವನದಲ್ಲಿ ಆಟವಾಡುತ್ತಿದ್ದಾರೆ. ಯಾವ ಆಧಾರದ ಮೇಲೆ ಅವರು ಭದ್ರತೆಯನ್ನು ಹಿಂಪಡೆಯುತ್ತಿದ್ದಾರೆ. ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ವೈಯಕ್ತಿಕವಾಗಿ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಕಿಡಿಕಾರಿದ್ದಾರೆ.

ಆಯ್ದ ಕೆಲವರಿಗೆ ಮಾತ್ರ ಒದಗಿಸಲಾಗಿರುವ ಎಸ್‍ಪಿಜಿ ಭದ್ರತೆಯ ವಾರ್ಷಿಕ ಬದಲಾವಣೆಯ ಭಾಗವಾಗಿ ಈ ಮೊದಲು ಮನಮೋಹನ್ ಸಿಂಗ್ ಅವರಿಗೆ ನೀಡಲಾಗಿದ್ದ ಎಸ್‍ಪಿಜಿ ಭದ್ರತೆಯನ್ನು ವಾಪಸ್ ಪಡೆಯಲಾಗಿತ್ತು.

ದೇಶದ ಅತ್ಯಂತ ಪ್ರಮುಖ ರಾಜಕಾರಣಿಗಳು ಹಾಗೂ ಗಣ್ಯರಿಗೆ ಮಾತ್ರ ಎಸ್‍ಪಿಜಿ ಭದ್ರತೆ ಒದಗಿಸಲಾಗುತ್ತದೆ. ಮನಮೋಹನ್ ಸಿಂಗ್ ಬಳಿಕ ಇಲ್ಲಿಯವರೆಗೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಮಕ್ಕಳಾದ ರಾಹುಲ್ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಈ ನಾಲ್ವರಿಗೆ ಮಾತ್ರ ಎಸ್‍ಪಿಜಿ ಭದ್ರತೆ ಒದಗಿಸಲಾಗಿದೆ.

SPG

ಈ ಹಿಂದೆ ಎಸ್‍ಪಿಜಿ ಭದ್ರತೆಯ ಬದಲಾವಣೆಯ ವಿಮರ್ಶೆಯೂ ಕಾಲಕಾಲಕ್ಕೆ ನಡೆಯುತ್ತದೆ. ಅಲ್ಲದೆ, ಭದ್ರತಾ ಏಜೆನ್ಸಿಗಳ ವೃತ್ತಿಪರ ಮೌಲ್ಯಮಾಪನವನ್ನು ಆಧರಿಸಿದೆ. ಹೀಗಾಗಿ ಯಾರಿಗೆ ಯಾವ ರೀತಿ ಭದ್ರತೆ ನೀಡಬೇಕೆಂದು ಭದ್ರತಾ ಏಜೆನ್ಸಿಗಳು ಚರ್ಚಿಸಿ ತೀರ್ಮಾನಿಸುತ್ತವೆ. ಡಾ.ಮನಮೋಹನ್ ಸಿಂಗ್ ಅವರಿಗೆ ಝಡ್ ಪ್ಲಸ್ ಭದ್ರತೆಯನ್ನು ಮುಂದುವರಿಸಲಾಗಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದರು.

ಇದೇ ರೀತಿ ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡ ಮತ್ತು ವಿಪಿ ಸಿಂಗ್ ಅವರಿಗೆ ನೀಡಲಾಗಿದ್ದ ಭದ್ರತೆಯನ್ನು ಹಿಂಪಡೆಯಲಾಗಿತ್ತು. ಅನಾರೋಗ್ಯಕ್ಕೆ ತುತ್ತಾಗಿ ಕಳೆದ ಕೆಲವು ವರ್ಷಗಳಿಂದ ಸಾರ್ವಜನಿಕವಾಗಿ ಕಾಣಿಸದಿದ್ದರೂ ಸಹ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಮೃತಪಡುವರೆಗೂ ಎಸ್‍ಪಿಜಿ ಭದ್ರತೆ ನೀಡಲಾಗಿತ್ತು.

manmohan singh 2

ಎಸ್‍ಪಿಜಿಯಲ್ಲಿ 3 ಸಾವಿರಕ್ಕೂ ಅಧಿಕ ಸಿಬ್ಬಂದಿ ಇದ್ದಾರೆ. ಬೆದರಿಕೆ ಕರೆಗಳನ್ನು ಆಧರಿಸಿ ಪ್ರಧಾನಿ, ಮಾಜಿ ಪ್ರಧಾನಿ ಹಾಗೂ ಅವರ ಕುಟುಂಬದವರಿಗೆ ಈ ಭದ್ರತೆಯನ್ನು ನೀಡಲಾಗುತ್ತದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಅವರ ಭದ್ರತಾ ಸಿಬ್ಬಂದಿ ಹತ್ಯೆ ಮಾಡಿದ ನಂತರ ಎಸ್‍ಪಿಜಿಯನ್ನು 1985ರಲ್ಲಿ ಸ್ಥಾಪಿಸಲಾಗಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ನಂತರ 1991ರಲ್ಲಿ ಎಸ್‍ಪಿಜಿ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಮಾಜಿ ಪ್ರಧಾನಿಗಳು ಹಾಗೂ ಅವರ ಕುಟುಂಬಕ್ಕೆ 10 ವರ್ಷಗಳ ಕಾಲ ಭದ್ರತೆ ನೀಡುವಂತೆ ನಿಯಮ ರೂಪಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *