ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇವತ್ತು ಶೃಂಗೇರಿ ಶಾರದಾ ಪೀಠಕ್ಕೆ ಭೇಟಿ ನೀಡುತ್ತಿದ್ದು ಇದು ಐತಿಹಾಸಿಕ ಹಾಗೂ ಮಹತ್ವದ ಭೇಟಿ ಎನಿಸಿಕೊಳ್ಳಲಿದೆ.
ಶೃಂಗೇರಿ ಶಾರದಾ ಪೀಠಕ್ಕೂ ಗಾಂಧಿ ಕುಟುಂಬಕ್ಕೆ ಅವಿನಾಭಾವ ಸಂಬಂಧ ಇದೆ. ರಾಷ್ಟ್ರಾದ್ಯಂತ ಕಾಂಗ್ರೆಸ್ ನೆಲಕಚ್ಚಿದ್ದ ಸಂದರ್ಭದಲ್ಲಿ ಇಂದಿರಾಗಾಂಧಿ ಚಿಕ್ಕಮಗಳೂರಿನಿಂದ ಲೋಕಸಭೆಗೆ ಸ್ಪರ್ಧಿಸಿ ಗೆದ್ದಿದ್ದರು. ಚುನಾವಣೆಗೆ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಶೃಂಗೇರಿಗೆ ಭೇಟಿ ನೀಡಿದ್ದ ಇಂದಿರಾಗಾಂಧಿ ಶಕ್ತಿ ದೇವತೆ ಶಾರದಾಂಬೆಯ ದರ್ಶನ ಮಾಡಿ ಗೆಲುವಿನ ಆಶಿರ್ವಾದ ಬೇಡಿದ್ದರು. ಗೆದ್ದ ನಂತರವು ಶೃಂಗೇರಿಗೆ ಭೇಟಿ ನೀಡಿ ಶಾರದಾಂಬೆ ದರ್ಶನ ಪಡೆದಿದ್ದರು. ಶೃಂಗೇರಿ ಮಠದ ಜೊತೆ ಇಂದಿರಾಗಾಂಧಿ ನಿಕಟ ಸಂಪರ್ಕ ಹೊಂದಿದ್ದರು. ಇದಾದ ಬಳಿಕ ರಾಜೀವ್ ಗಾಂಧಿ ಸಹ ಹಲವು ಬಾರಿ ಶೃಂಗೇರಿಗೆ ಭೇಟಿ ನೀಡಿದ್ದರು.
- Advertisement 2-
ಈಗ ಗಾಂಧಿ ಕುಟುಂಬದ ನಾಲ್ಕನೆಯ ಕುಡಿ ಶೃಂಗೇರಿಗೆ ಭೇಟಿ ನೀಡುತ್ತಿರುವುದು ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಇಂದಿರಾಗಾಂಧಿಗೆ ರಾಜಕೀಯ ಪುನರ್ಜನ್ಮ ನೀಡಿದ್ದ ಚಿಕ್ಕಮಗಳೂರಿನ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಲಿರುವ ರಾಹುಲ್ ಗಾಂಧಿ ಈ ಹಿಂದೆ ತಮ್ಮ ಅಜ್ಜಿ ಭಾಷಣ ಮಾಡಿದ್ದ ಮೈದಾನದಲ್ಲೇ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
- Advertisement 3-
ಚಿಕ್ಕಮಗಳೂರು ಭೇಟಿ ಬಳಿಕ ಹಾಸನದಲ್ಲಿ ಬೃಹತ್ ಸಮಾವೇಶದಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ತವರಲ್ಲಿ ರಾಹುಲ್ ಗಾಂಧಿ ಭಾಷಣ ಏನಿರಬಹುದು ಎನ್ನುವ ಕುತೂಹಲಕ್ಕೆ ಕಾರಣವಾಗಿದೆ. ಸಿಎಂ ಸಿದ್ದರಾಮಯ್ಯ ಮಾದರಿಯಲ್ಲಿ ದೇವೇಗೌಡರ ವಿರುದ್ದ ವಾಗ್ದಾಳಿ ಮಾಡ್ತಾರಾ? ಅಥವಾ ಮುಂದಿನ ರಾಜಕೀಯ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಸಾಫ್ಟ್ ಕಾರ್ನರ್ ನ ದಾಳ ಉರುಳಿಸ್ತಾರಾ ಎನ್ನುವ ಕುತೂಹಲ ಹೆಚ್ಚಾಗಿದೆ.