ನವದೆಹಲಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಅವರು 2019 ಮತ್ತು 2024ರಲ್ಲಿ ಗೆಲುವು ಸಾಧಿಸಿದ್ದ ಕೇರಳದ ವಯನಾಡು ಕ್ಷೇತ್ರವನ್ನು ಬಿಟ್ಟು ಉತ್ತರ ಪ್ರದೇಶದ (Uttar Pradesh) ರಾಯ್ ಬರೇಲಿ ಕ್ಷೇತ್ರವನ್ನು ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆ. ರಾಗಾ ಸಹೋದರಿ ಪ್ರಿಯಾಂಕಾ ಗಾಂಧಿ (Priyanka Gandhi) ಅವರು ಉಪ ಚುನಾವಣೆಯಲ್ಲಿ ವಯನಾಡಿನಿಂದ ಕಣಕ್ಕಿಳಿಯಲಿದ್ದಾರೆ.
ಸೋಮವಾರ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ, ರಾಹುಲ್ ಗಾಂಧಿ ಹಾಗೂ ಕೆ.ಸಿ ವೇಣುಗೋಪಾಲ್ ಅವರ ಸಮ್ಮುಖದಲ್ಲಿ ನಡೆದ ಉನ್ನತ ಮಟ್ಟದ ಸಭೆ ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ರಾಹುಲ್ ಗಾಂಧಿ ನಿರ್ಧಾರದ ಬಗ್ಗೆ ಘೋಷಣೆ ಮಾಡಿದ್ದಾರೆ. ಅವರು ವಯನಾಡ್ ಕ್ಷೇತ್ರವನ್ನು (Wayanad Constituency) ಬಿಟ್ಟು ರಾಯ್ ಬರೇಲಿ (Raebareli) ಕ್ಷೇತ್ರವನ್ನು ಉಳಿಸಿಳ್ಳಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
- Advertisement
ಪ್ರಸಕ್ತ ವರ್ಷದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಿಂದಲೂ ಭರ್ಜರಿ ವಿಜಯ ಸಾಧಿಸಿದ್ದರು. ಉತ್ತರ ಪ್ರದೇಶದ (Uttar Pradesh) ರಾಯ್‌ಬರೇಲಿ ಕ್ಷೇತ್ರದಲ್ಲಿ 6,87,649 ಮತಗಳನ್ನು ಪಡೆಯುವ ಮೂಲಕ 3,90,030 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದರೆ, ವಯನಾಡ್ ಕ್ಷೇತ್ರದಲ್ಲಿ (Wayanad Constituency) 6,47,445 ಮತಗಳನ್ನು ಪಡೆದು ಗೆಲುವು ಸಾಧಿಸಿರುವ ರಾಹುಲ್ 3,64,422 ಮತಗಳ ಅಂತರದಿಂದ ಗೆದ್ದು ಬೀಗಿದ್ದರು.
- Advertisement
ಗಾಂಧಿ ಕುಟುಂಬಕ್ಕುಂಟು ರಾಯ್ ಬರೇಲಿ ನಂಟು:
ರಾಯ್‌ಬರೇಲಿ ಲೋಕಸಭೆ ಚುನಾವಣಾ ಇತಿಹಾಸ ಸಾಕಷ್ಟು ಕುತೂಹಲಕಾರಿ ಘಟ್ಟಗಳನ್ನು ನೋಡಿದೆ. 1951-52 ರಲ್ಲಿ ನಡೆದ ಮೊದಲ ಲೋಕಸಭಾ ಚುನಾವಣೆಯಲ್ಲಿ ರಾಯ್‌ಬರೇಲಿ ಮತ್ತು ಪ್ರತಾಪಗಢ ಜಿಲ್ಲೆಗಳನ್ನು ಒಳಗೊಂಡ ಒಂದು ಲೋಕಸಭಾ ಸ್ಥಾನವಿತ್ತು. ಇಂದಿರಾ ಗಾಂಧಿ ಅವರ ಪತಿ ಫಿರೋಜ್ ಗಾಂಧಿ ಅವರು ಇಲ್ಲಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿ ಗೆದ್ದಿದ್ದರು. 1957 ರಲ್ಲಿ ರಾಯ್‌ಬರೇಲಿ ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗ ಫಿರೋಜ್ ಗಾಂಧಿ ಮತ್ತೊಮ್ಮೆ ಇಲ್ಲಿಂದ ಸಂಸದರಾದರು.
1960 ರಿಂದ ರಾಯ್‌ಬರೇಲಿ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿದೆ. ಫಿರೋಜ್ ಗಾಂಧಿ, ಇಂದಿರಾ ಗಾಂಧಿ ಕೂಡಾ ಇಲ್ಲಿಂದ ಸ್ಪರ್ಧಿಸಿದ್ದರು. 1952 ಮತ್ತಯ 1957 ರಲ್ಲಿ ರಾಯ್‌ಬರೇಲಿ ಕ್ಷೇತ್ರದಿಂದ ಫಿರೋಜ್ ಗಾಂಧಿ ಎರಡು ಬಾರಿ ಗೆದ್ದಿದ್ದರು. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಮೊಮ್ಮಗ ಅರುಣ್ ನೆಹರು ಅವರು 1980ರ ಉಪಚುನಾವಣೆ ಮತ್ತು 1984ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ನೆಹರೂ ಸಹೋದರಿ ಶೀಲಾ ಕೌಲ್ 1989 ಮತ್ತು 1991 ರಲ್ಲಿ ಗೆಲುವು ಸಾಧಿಸಿದರು.
ಅಲ್ಲದೇ 2006 ರಿಂದ ಸೋನಿಯಾ ಗಾಂಧಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಸೋನಿಯಾ ಗಾಂಧಿ ರಾಜ್ಯಸಭೆಗೆ ಆಯ್ಕೆಯಾಗಿದ್ದರಿಂದ ಕಣಕ್ಕಿಳಿದಿದ್ದ ರಾಹುಲ್ ಗಾಂಧಿ ಮತ್ತೆ ರಾಯ್ ಬರೇಲಿಯನ್ನು ಕಾಂಗ್ರೆಸ್ ಭದ್ರಕೋಟೆಯಾಗಿಯೇ ಉಳಿಸಿಕೊಂಡಿದ್ದಾರೆ.