-ಕಾಂಗ್ರೆಸ್ ಹಿರಿಯರ ನಾಯಕರ ಸಭೆ ಹಿಂದಿನ ರಹಸ್ಯವೇನು?
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಯುದ್ಧ ಸಾರಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಲೋಕಸಭೆ ಚುನಾವಣೆಗೆ ಭರ್ಜರಿ ತಾಲೀಮು ಮಾಡುತ್ತಿದ್ದಾರೆ. ಇತ್ತಿಚೇಗೆ ಕಾಂಗ್ರೆಸ್ ಮುಖಂಡರೊಂದಿಗೆ ಸಭೆ ನಡೆಸಿದ್ದ ರಾಹುಲ್ ಈಗ ಮತ್ತೊಮ್ಮೆ ಹಿರಿಯ ನಾಯಕರ ಸಭೆ ಕರೆದಿದ್ದಾರೆ.
ಲೋಕಸಭೆ ಚುನಾವಣೆಗೆ ಎಳೆಂಟು ತಿಂಗಳು ಬಾಕಿ ಇರುವಾಗಲೇ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ರಣ ಕಹಳೆ ಮೊಳಗಿಸಿದ್ದಾರೆ. ರಫೇಲ್ ಯುದ್ದ ವಿಮಾನ ಖರೀದಿಯಲ್ಲಿ ಭಾರೀ ಹಗರಣ ನಡೆದಿದೆ ಎಂದು ಆರೋಪಿಸಿರುವ ರಾಹುಲ್ ಗಾಂಧಿ ದೇಶದಲ್ಲಿ ಸಂಚಲನ ಮೂಡಿಸುತ್ತಿದ್ದಾರೆ. ಆಡಳಿತ ಪಕ್ಷದ ಮೇಲೆ ಮುಗಿಬಿದ್ದಿರುವ ಕಾಂಗ್ರೆಸ್ ನ ಯುವರಾಜ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆಲವು ಸಾಧಿಸಲು ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.
Advertisement
Advertisement
ವಾರದ ಹಿಂದಷ್ಟೇ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ನಡೆಸಿದ್ದ ರಾಹುಲ್ ಗಾಂಧಿ ಈಗ ಮತ್ತೆ ಕಾಂಗ್ರೆಸ್ ಹಿರಿಯ ನಾಯಕರ ಸಭೆ ಕರೆದಿದ್ದಾರೆ. ಎಲ್ಲ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಕಮೀಟಿ ಅಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕರು ಹಾಗೂ ರಾಜ್ಯ ಉಸ್ತುವಾರಿಗಳ ಸಭೆ ಕರೆದಿದ್ದಾರೆ. ಬೆಳಗ್ಗೆ ನವದೆಹಲಿಯ ಎಐಸಿಸಿ ಕಚೇರಿಯಲ್ಲಿ ಸಭೆ ಏರ್ಪಾಡು ಮಾಡಲಾಗಿದ್ದು ರಾಹುಲ್ ಗಾಂಧಿ ಅಧ್ಯಕ್ಷತೆ ವಹಿಸಲಿದ್ದು, ರಾಜ್ಯದಿಂದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಉಸ್ತುವಾರಿ ಕೆ.ಸಿ ವೇಣುಗೋಪಾಲ ಹಾಗೂ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಭಾಗಿಯಾಗಲಿದ್ದಾರೆ.
Advertisement
ರಾಜ್ಯ ರಾಜಕಾರಣಕ್ಕೆ ಬೀಳುತ್ತಾ ಬ್ರೇಕ್?
ಈಗಾಗಲೇ ಕರ್ನಾಟಕದಲ್ಲಿ ಮೈತ್ರಿ ಮಂತ್ರ ಪಠಿಸಿರುವ ರಾಹುಲ್ ಗಾಂಧಿ ರಾಷ್ಟ್ರೀಯ ಮಟ್ಟದಲ್ಲೂ ಮಹಾಮೈತ್ರಿ ಮಾಡಿಕೊಳ್ಳಲು ಪ್ಲಾನ್ ಮಾಡಿದ್ದಾರೆ. ಈಗಾಗಲೇ ಹಲವು ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಗೆ ಬೆಂಬಲವೂ ನೀಡಿದ್ದು, ಇನ್ನುಳಿದ ಸಾಧ್ಯಸಾಧ್ಯತೆ ಕುರಿತು ಹಿರಿಯ ನಾಯಕರೊಂದಿಗೆ ರಾಹುಲ್ ಚರ್ಚಿಸಲಿದ್ದಾರೆ. ಕಾಂಗ್ರೆಸ್ ಬಲಿಷ್ಠ ಹಾಗೂ ದುರ್ಬಲ ಹೊಂದಿರುವ ರಾಜ್ಯಗಳ ಕುರಿತು ಚರ್ಚೆ ನಡೆಸಿ ಅಲ್ಲಿರುವ ಪ್ರಾದೇಶಿಕ ಪಕ್ಷಗಳ ಜೊತೆ ಮೈತ್ರಿ ಕುರಿತು ಚರ್ಚೆ ನಡೆಯಲಿದೆ. ಮೈತ್ರಿ ಜೊತೆಗೆ ಸೀಟು ಹೊಂದಾಣಿಕೆ ಹಾಗೂ ಮೋದಿ ಸರ್ಕಾರದ ರಾಜ್ಯ ಮಟ್ಟದಲ್ಲಿ ಕಾರ್ಯತಂತ್ರ ರೂಪಿಸುವ ಬಗ್ಗೆ ರಾಹುಲ್ ಗಾಂಧಿ ದೀರ್ಘ ಸಮಾಲೋಚನೆ ನಡೆಸಲಿದ್ದಾರೆ.
Advertisement
ಆಪರೇಷನ್ ಕಮಲದ ಭೀತಿಯಲ್ಲಿ ಹೈರಾಣಗಿರುವ ರಾಜ್ಯ ಕಾಂಗ್ರೆಸ್ ನಾಯಕರು ಇಂದು ಮತ್ತೊಮ್ಮೆ ಹೈಕಮಾಂಡ್ ಮನೆ ಕದ ತಟ್ಟುವ ಸಾಧ್ಯತೆ ಇದೆ. ನಿಗಮ ಮಂಡಳಿ ನೇಮಕ ಸಂಪುಟ ವಿಸ್ತರಣೆ ಹೈಕಮಾಂಡ್ ತಡೆ ನೀಡಿದ ಬೆನ್ನೆಲ್ಲೆ ದೊಡ್ಡ ಮಟ್ಟದ ಅಸಮಾಧಾನ ಹೊರ ಬಂದಿದೆ. ಹೈಕಮಾಂಡ್ ಬಿಸಿ ಮುಟ್ಟಿಸಲೇಂದು ಮೊನ್ನೆ ಚೆನೈ ನತ್ತ ಮುಖ ಮಾಡಿದ ಕೆಲ ಶಾಸಕರು ಮುಂದಿನ ಪರಿಣಾಮದ ಬಗ್ಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರಂತೆ.
ಶಾಸಕ ಎಂಟಿಬಿ ನಾಗರಾಜ್ ಸೇರಿ ಹಲವರು ಬಹಿರಂಗ ಹೇಳಿಕೆ ನೀಡಿದ್ದಾರೆ. ಈ ಪರಿಸ್ಥಿತಿ ಯನ್ನು ಗಂಭೀರವಾಗಿ ಪರಿಗಣಿಸಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ರಾಹುಲ್ ಗಾಂಧಿ ಜೊತೆಗೆ ಚರ್ಚೆ ಮಾಡುವ ಸಾಧ್ಯತೆ ಇದೆ. ಅಕ್ಟೋಬರ್ 10 ಕ್ಕೆ ಸಂಪುಟ ವಿಸ್ತರಣೆಗೆ ಕಾದರೆ ಮೈತ್ರಿ ಸರ್ಕಾರಕ್ಕಿರುವ ಆಪತ್ತಿನ ಬಗ್ಗೆ ರಾಹುಲ್ ಗಾಂಧಿ ಗಮನಕ್ಕೆ ತರಲಿದ್ದಾರೆ. ಇದರ ಜೊತೆಗೆ ರಾಜ್ಯದ ಹಲವು ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿ ಶೀಘ್ರ ಸಂಪುಟ ವಿಸ್ತರಣೆ ಒಪ್ಪಿಗೆ ಪಡೆದುಕೊಳ್ಳುವ ಸಾಧ್ಯತೆ ಕೂಡಾ ಇದೆ.
ಲೋಕಸಭೆ ಚುನಾವಣೆ ದೃಷ್ಟಿಯಿಂದ ಮಾದರಿ ಸರ್ಕಾರ ಎನ್ನಿಸಿಕೊಂಡಿರುವ ರಾಜ್ಯ ಮೈತ್ರಿ ಸರ್ಕಾರದ ಮೇಲೆ ನಿರೀಕ್ಷೆ ಇಟ್ಟುಕೊಂಡಿರುವ ರಾಹುಲ್ ಗಾಂಧಿ ಸರ್ಕಾರ ಉಳಿಸಿಕೊಳ್ಳಲು ಮುಂದೇನು ಪ್ಲಾನ್ ಮಾಡುತ್ತಾರೆ ಎಂಬುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv