ನವದೆಹಲಿ: ಚೌಕಿದಾರ್ ಚೋರ್ ಎಂದು ಹೇಳಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್ ನಲ್ಲಿ ಮುಖಭಂಗವಾಗಿದ್ದು ಕ್ಷಮೆ ಕೇಳುವುದಾಗಿ ಹೇಳಿದ್ದಾರೆ.
ರಾಹುಲ್ ಪರ ವಾದ ಮಂಡಿಸಿದ ವಕೀಲ ಅಭಿಷೇಕ್ ಸಿಂಘ್ವಿಗೆ ಮುಖ್ಯ ನ್ಯಾಯಮೂರ್ತಿ ಗೊಗೋಯ್, ಸಂಜಯ್ ಕಿಶನ್ ಕೌಲ್, ಜೋಸೆಫ್ ಪೀಠ ಸಖತ್ ಕ್ಲಾಸ್ ತೆಗೆದುಕೊಂಡಿದೆ. ಮೀನಾಕ್ಷಿ ಲೇಖಿ ಪರ ಮುಕುಲ್ ರೋಹ್ಟಗಿ ವಾದ ಮಂಡಿಸಿದ್ದರು.
Advertisement
Advertisement
ಕಲಾಪ ಹೀಗಿತ್ತು:
ಸುಪ್ರೀಂಕೋರ್ಟ್ ಹೆಸರು ಬಳಸಿ ಹೇಗೆ ಹೇಳಿಕೆ ನೀಡಿದ್ರಿ? ರಾಹುಲ್ ನೀಡಿದ್ದ ಹೇಳಿಕೆಯನ್ನು ಸುಪ್ರೀಂಕೋರ್ಟ್ ಎಲ್ಲಿ ಹೇಳಿತ್ತು? ಪ್ರಧಾನಿ ಚೋರ್ ಹೈ ಎಂದು ಸುಪ್ರೀಂಕೋರ್ಟ್ ಯಾವಾಗ ಹೇಳಿದೆ ಎಂದು ನ್ಯಾ. ಗೊಗೋಯ್ ಪ್ರಶ್ನಿಸಿದರು. ಇದಕ್ಕೆ ಸಿಂಘ್ವಿ ನಾವು ಪೂರ್ಣ ಪ್ರಮಾಣದಲ್ಲಿ ವಿಷಾದ ವ್ಯಕ್ತಪಡಿಸಿದ್ದೇವೆ ಎಂದು ಉತ್ತರಿಸಿದರು.
Advertisement
ಈ ಉತ್ತರಕ್ಕೆ ಎಲ್ಲಿ ಪೂರ್ಣ ಪ್ರಮಾಣದಲ್ಲಿ ವಿಷಾದ ವ್ಯಕ್ತಪಡಿಸಿದ್ದೀರಿ? ನೀವು ಸಲ್ಲಿಸಿದ ಅಫಿಡವಿಟ್‍ನಲ್ಲಿ ವಿಷಾದವೆಲ್ಲಿದೆ? ತಮ್ಮ ಹೇಳಿಕೆಯಲ್ಲಿ ಬ್ರಾಕೆಟ್‍ನಲ್ಲಿ ವಿಷಾದ ವ್ಯಕ್ತಪಡಿಸಿದ್ದು ಯಾಕೆ ಎಂದು ಗೊಗೋಯ್ ಮರು ಪ್ರಶ್ನೆ ಹಾಕಿದರು.
Advertisement
ನ್ಯಾ.ಕೌಲ್ ಅವರು ಒಂದು ಪೇಜಿನಲ್ಲಿ ಉದ್ದೇಶ ಇರಲಿಲ್ಲ ಎಂದು ಹೇಳುತ್ತೀರಿ. ಮುಂದಿನ ಪುಠದಲ್ಲಿ ವಿಷಾದ ಇರಲಿ ಎಂದು ಹೇಳುತ್ತೀರಿ. 28 ಪುಟಗಳ ಅಫಿಡವಿಟ್‍ನಲ್ಲಿ ಏನು ಹೇಳುತ್ತಿದ್ದೀರಾ? ಎಲ್ಲರೂ ತಪ್ಪು ಮಾಡುತ್ತಾರೆ ಒಪ್ಪಿಕೊಳ್ಳಿ ಎಂದು ಸೂಚಿಸಿದರು.
ಈ ವೇಳೆ ಸಿಂಘ್ವಿ ಅಫಿಡವಿಟ್‍ಗಳಲ್ಲಿ `ಕ್ಷಮೆ’ (ಅಪಾಲಜಿ) ಎನ್ನುವ ಪದ ಇಲ್ಲದೇ ಇರುವುದು ದೋಷ. ಡಿಕ್ಷನರಿಯನ್ನು ಚೆಕ್ ಮಾಡಿದ್ದೇನೆ. ವಿಷಾದ (ರಿಗ್ರೆಟ್) ಅಂದರೆ ಕ್ಷಮಾಪಣೆ (ಸಿವಿಲ್ ಅಪಾಲಜಿ) ಎಂದೇ ಅರ್ಥ ಬರುತ್ತುದೆ ಎಂದು ಸಮಜಾಯಿಷಿ ನೀಡಿದರು. ಇದಕ್ಕೆ ಮುಖ್ಯ ನ್ಯಾಯಮೂರ್ತಿಗಳು ನಿಮ್ಮ ಕಕ್ಷಿದಾರರು ಏನು ಹೇಳಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಕಷ್ಟ ಪಟ್ಟಿದ್ದೇವೆ ಎಂದಾಗ ರಾಜಕೀಯ ಸನ್ನಿವೇಶದಲ್ಲಿ ಚೌಕಿದಾರ್ ಚೋರ್ ಅನ್ನೋ ಪದ ಬಳಸಿದ್ದಾರೆ ಎಂದು ಉತ್ತರ ನೀಡಿದರು.
ಈ ಉತ್ತರಕ್ಕೆ ಗರಂ ಆದ ಸಿಜೆಐ, ನಿಮ್ಮ ರಾಜಕೀಯ ನಿಲುವುಗಳ ನಮಗೆ ಬೇಕಿಲ್ಲ. ನಿಮ್ಮ ರಾಜಕೀಯವನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ ಎಂದು ಹೇಳಿ ಚಾಟಿ ಬೀಸಿದರು. ಈ ವೇಳೆ ಮುಕುಲ್ ರೊಹ್ಟಗಿ ಕೋರ್ಟ್ ಮೋದಿ ಸುಳ್ಳು ಹೇಳಿದ್ದಾರೆ ಎಂದು ರಾಹುಲ್ ಗಾಂಧಿ ಉದ್ದೇಶಪೂರ್ವಕವಾಗಿ ಹೇಳಿದ್ದಾರೆ. ಬ್ರಾಕೆಟ್‍ನಲ್ಲಿ ವಿಷಾದ ಅಂದ್ರೇನು ಅರ್ಥ? ಸುಪ್ರೀಂಕೋರ್ಟ್ ಪ್ರಧಾನಿಯನ್ನು ಕಳ್ಳ ಅಂತ ಹೇಳಿದೆ ಅಂತ ದೇಶದ ಹಾದಿ ತಪ್ಪಿಸೋ ಯತ್ನವಲ್ಲದೆ ಬೇರೇನೂ ಅಲ್ಲ ಎಂದು ಹೇಳಿ ಸಿಂಘ್ವಿ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಈ ಆಕ್ಷೇಪಕ್ಕೆ ಸಿಜೆಐ, ನಿಮ್ಮ ಕಕ್ಷಿದಾರ ಸ್ಪಷ್ಟವಾಗಿ ಕ್ಷಮೆ ಕೋರಬೇಕು. ಇಲ್ಲವಾದಲ್ಲಿ ಕ್ರಿಮಿನಲ್ ನಿಂದನೆ ಎದುರಿಸಬೇಕಾಗುತ್ತದೆ ಎಂದಾಗ ಸಿಂಘ್ವಿ, ತಪ್ಪನ್ನು ತಿದ್ದಿಕೊಂಡು `ಕ್ಷಮೆ ಕೋರಿ’ ಹೊಸ ಅಫಿಡವಿಟ್ ಸಲ್ಲಿಸುತ್ತೇವೆ ಎಂದು ತಿಳಿಸಿದರು.
ಕೊನೆಗೆ ನ್ಯಾ.ಗೊಗೋಯ್, ಪ್ರಸ್ತುತ ಈಗ ಕೊಟ್ಟಿರುವ ಅಫಿಡವಿಟ್ ಅನ್ನು ಸ್ವೀಕೃತಿ ಅಥವಾ ಅಂಗೀಕಾರ ಎಂದು ನಿಮ್ಮ ಕಕ್ಷಿದಾರ ಭಾವಿಸುವಂತಿಲ್ಲ. ಸೋಮವಾರದ ಒಳಗೆ ಅಫಿಡವಿಟ್ ಸಲ್ಲಿಸಿ ಎಂದು ಸೂಚಿಸಿ ವಿಚಾರಣೆಯನ್ನು ಮೆ 6ಕ್ಕೆ ಮುಂದೂಡಿದರು.
ಏನಿದು ಪ್ರಕರಣ?
ರಫೇಲ್ ತೀರ್ಪಿಗೆ ಸಂಬಂಧಿಸಿದಂತೆ ಸಲ್ಲಿಸಲಾದ ಮರುಪರಿಶೀಲನಾ ಅರ್ಜಿಯನ್ನು ಪುರಸ್ಕರಿಸಬಾರದು ಎಂದು ಕೇಂದ್ರದ ವಾದವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಈ ಆದೇಶ ಬಂದ ನಂತರ ಚೌಕಿದಾರ್ (ಪ್ರಧಾನಿ ಮೋದಿ) ಕಳ್ಳತನ ಮಾಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ ಎಂದು ರಾಹುಲ್ ಗಾಂಧಿ ಅವರು ತಮ್ಮ ಪ್ರಚಾರ ಭಾಷಣದಲ್ಲಿ ಹೇಳಿದ್ದರು.
ರಾಹುಲ್ ಗಾಂಧಿ ಅವರು, ರಫೇಲ್ ಡೀಲ್ ಪ್ರಕರಣದ ಆದೇಶದಲ್ಲಿ ಇಲ್ಲದೆ ಇರುವ ಅಂಶಗಳನ್ನು ಉಲ್ಲೇಖಿಸಿ ಮೋದಿ ಅವರನ್ನು ಟೀಕೆ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರು ಸುಪ್ರೀಂ ಕೋರ್ಟಿನಲ್ಲಿ ರಾಹುಲ್ ವಿರುದ್ಧ ನ್ಯಾಯಾಂಗ ನಿಂದನೆ ದೂರು ನೀಡಿದ್ದರು. ಮೀನಾಕ್ಷಿ ಲೇಖಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ರಾಹುಲ್ ಗಾಂಧಿ ಅವರಿಗೆ ನೋಟಿಸ್ ಜಾರಿ ಮಾಡಿ ಏ.22 ರಂದು ಸ್ಪಷ್ಟನೆ ನೀಡಬೇಕೆಂದು ಸೂಚಿಸಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯೂ ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೂ ದೂರು ನೀಡಿತ್ತು.