ಕೊಪ್ಪಳ: ರಾಜ್ಯದ ಹೈದರಾಬಾದ್ ಕರ್ನಾಟಕ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂದು ತಮ್ಮ ಎರಡನೇ ದಿನದ ಪ್ರವಾಸ ಮುಗಿಸಿದ್ದಾರೆ. ಇವತ್ತು ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಯಲ್ಲಿ ಬಸ್ ನಲ್ಲಿ ಯಾತ್ರೆ ಮಾಡಿ 6 ಕ್ಕೂ ಹೆಚ್ಚು ಸಮಾವೇಶ ಗಳಲ್ಲಿ ಮಾತನಾಡಿದರು.
ಬೆಳಿಗ್ಗೆ 9-30 ಕ್ಕೆ ಕುಕನೂರಿನ ಗೆಸ್ಟ್ ಹೌಸ್ ನಿಂದ ಹೊರಟ ರಾಹುಲ್ ಗಾಂಧಿ ರಾಯಭಾಗದ ಚೆನ್ನಮ್ಮ ಸರ್ಕಲ್ ನಲ್ಲಿ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಯಾತ್ರೆಗೆ ಚಾಲನೆ ನೀಡಿದರು. ಬೆಂಡಿ ಕ್ರಾಸ್ ನಲ್ಲಿ ರೋಡ್ ಶೋ ಮಾಡಿದ ರಾಹುಲ್ ಗಾಂಧಿ ಭಾಷಣ ಮಾಡಿದರು. ನಂತರ ಅಲ್ಲಿಂದ ನೇರವಾಗಿ ಕುಷ್ಟಗಿಗೆ ಬಂದ ಅವರು ಬಸ್ಸಿನಲ್ಲೇ ನಿಂತು ಜನರಿಂದ ಹಾರ ತುರಾಯಿ ಸ್ವೀಕಾರ ಮಾಡಿದರು.
Advertisement
Advertisement
ಕುಷ್ಟಗಿಯಲ್ಲಿ ಜನರ ಗುಂಪು ಕಂಡು ರಸ್ತೆಗಿಳಿದ ರಾಹುಲ್, ಪರಮೇಶ್ವರ್ ಜೊತೆ ಕುಷ್ಟಗಿ ರಸ್ತೆಯಲ್ಲಿ ನಡೆದುಕೊಂಡು ಹೋದರು. ಸಾರ್ವಜನಿಕ ಸಮಾವೇಶದಲ್ಲಿ ನಮಸ್ಕಾರ ಚೆನ್ನಾಗಿದ್ದೀರಾ ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿ ಕಾರ್ಯಕರ್ತರ ಕುರಿತು ಮಾತನಾಡಿದರು. ನಂತರ ಕುಷ್ಟಗಿ ಯಿಂದ ಕನಕಗಿರಿ ಪ್ರಯಾಣಿಸಿದ ಅವರು ಮಾರ್ಗ ಮಧ್ಯೆ ಹೆಚ್ಚು ಜನ ಕಂಡ ವೇಳೆ ಬಸ್ ನಿಲ್ಲಿಸಿ ಎಲ್ಲರತ್ತ ಕೈಬಿಸಿದರು.
Advertisement
ಈ ವೇಳೆ ರಾಹುಲ್ ಕಂಡ ಜನ ಸೆಕ್ಯುರಿಟಿ ಲೆಕ್ಕಿಸದೇ ಬಸ್ ಹತ್ತಿ ಹಾರ ಹಾಕಿ ಗೌರವಿಸಿದರು. ಕನಕಗಿರಿಯ ಹುಲಿಹೈದರ್ ಊರಿನಲ್ಲಿ ಶಾಸಕ ಶಿವರಾಜ್ ತಂಗಡಗಿ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಿದರು. ಈ ವೇಳೆ ಬಸ್ ನಿಂದ ಇಳಿದು ಜನರ ಬಳಿ ಬರುವಂತೆ ಮನವಿ ಮಾಡಿದರು. ಆದರೆ ಬಸ್ ಇಳಿಯದೇ ತೆರಳಿದ ಅವರು ಕನಕಗಿರಿಯ ನಿರೀಕ್ಷಣಾ ಮಂದಿರದಲ್ಲಿ ಭೋಜನ ಸ್ವೀಕರಿಸಿದರು.
Advertisement
ಮೋದಿ ಘೋಷಣೆಯೊಂದಿಗೆ ಸ್ವಾಗತ: ಕನಕಗಿರಿ ಕನಕಚಲಾಲಕ್ಷ್ಮಿ ನರಸಿಂಹ ಪುರಾತನ ದೇವಸ್ಥಾನಕ್ಕೆ ರಾಹುಲ್ ಗಾಂಧಿ ಭೇಟಿ ಕೊಟ್ಟು ಪೂಜೆ ಸಲ್ಲಿಸಿಸಲು ತೆರಳುವ ವೇಳೆ ಕೆಲವು ಯುವಕರು “ಮೋದಿ ಮೋದಿ” ಎಂದು ಕೂಗುತ್ತ ಸ್ವಾಗತಿಸಿದರು. ನಂತರ ದೇವಾಲಯಕ್ಕೆ ಭೇಟಿ ನೀಡಿದ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಅಲ್ಲಿಯೂ ಜನರ ಬಳಿ ತೆರಳಿ ಮಾತನಾಡಿದರು.
ಪ್ಲೆಕ್ಸ್ ರಾಜಕೀಯ: ಗಂಗಾವತಿಯ ಹೇರೂರಿನಲ್ಲಿ ಫ್ಲೆಕ್ಸ್ ಸ್ಪರ್ಧೆ ಕಂಡು ಬಂತು. ರಸ್ತೆ ಒಂದು ಬದಿ ಮೋದಿ ಫ್ಲೆಕ್ಸ್, ಮತ್ತೊಂದೆಡೆ ರಾಹುಲ್ ಫ್ಲೆಕ್ಸ್ ಹಾಕಲಾಗಿತ್ತು. ಈ ವೇಳೆ ಜೆಡಿಎಸ್ ನಿಂದ ಅಮಾನತುಗೊಂಡಿದ್ದ ಶಾಸಕ ಇಕ್ಬಾಲ್ ಅನ್ಸಾರಿ ರಾಹುಲ್ ಜೊತೆ ಪ್ರಯಾಣಿಸಿದರು. ಗಂಗಾವತಿ ರಸ್ತೆಯ ಎರಡು ಕಡೆಗಳಲ್ಲಿ ರಾಹುಲ್‍ಗಾಗಿ ಜನರು ಕಾದು ನಿಂತಿದ್ದರು.
ಗಂಗಾವತಿ ಸರ್ಕಲ್ ನಲ್ಲಿ ಗಾಂಧಿ ಪ್ರತಿಮೆಗೆ ಹಾಗೂ ಇಂದಿರಾಗಾಂಧಿ ಪ್ರತಿಮೆಗೆ ರಾಹುಲ್ ಮಾಲಾರ್ಪಣೆ ಮಾಡಿ ಜನರನು ಉದ್ದೇಶಿಸಿ ಮಾತನಾಡಿದರು. ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಮೋದಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಆದರೆ ಅವರ ಪಕ್ಷದಲ್ಲಿ ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಜೈಲಿಗೆ ಹೋಗಿದ್ದು ಹೇಳಿಲ್ಲ. ಬಿಎಸ್‍ವೈ ನಂತರ ಅವಧಿಯಲ್ಲಿ ನಾಲ್ಕು ಜನ ಸಚಿವರು ಜೈಲಿಗೆ ಹೋಗಿದ್ದು ಹೇಳಲ್ಲ. 11 ಸಚಿವರು ರಾಜೀನಾಮೆ ಕೊಟ್ಟಿದ್ದು ಹೇಳಲ್ಲ ಎಂದರು.
ಕಪ್ಪು ಬಾವುಟ ಪ್ರದರ್ಶನ: ಗಂಗಾವತಿಯಲ್ಲಿ ಭಾಷಣ ಮಾಡಿ ಹೊರಟ ರಾಹುಲ್ ಗಾಂಧಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಲಾಯಿತು. ಸದಾಶಿವ ಆಯೋಗ ವರದಿ ಜಾರಿಗೆ ಒತ್ತಾಯಿಸಿ ದಲಿತ ಸಂಘಟನೆ ಕರಪತ್ರ ತೂರಿ ಕಪ್ಪು ಭಾವುಟ ಪ್ರದರ್ಶನ ಮಾಡಿದರು. ಅಲ್ಲಿಂದ ನೇರವಾಗಿ ಕಾರಟಗಿಗೆ ಬಂದು ಬೃಹತ್ ಸಮಾವೇಶದಲ್ಲಿ ಭಾಗವಹಿಸಿದರು. ಅಲ್ಲಿ ಶಾಸಕ ಶಿವರಾಜ್ ತಂಗಡಗಿ ನೀಡಿದ ಬೆಳ್ಳಿ ಖಡ್ಗವನ್ನು ಕನಕಚಲೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು.
ನಿನ್ನೆ ಹೊಸಪೇಟೆಯಲ್ಲಿ ಶಾಸಕ ನಾಗೇಂದ್ರ ನೀಡಿದ ದುಬಾರಿ ವಾಲ್ಮಿಕಿ ಪ್ರತಿಮೆಯನ್ನು ಯಾವುದಾದರೂ ಸಂಘ ಸಂಸ್ಥೆಗೆ ನೀಡುವಂತೆ ರಾಹುಲ್ ಗಾಂಧಿ ಸೂಚಿಸಿದ್ದಾರೆ. ಒಟ್ಟಾರೆ ಇಂದು ರಾಹುಲ್ ಗಾಂಧಿ ರಾಯಚೂರು ಹಾಗೂ ಕೊಪ್ಪಳ ಎರಡು ಜಿಲ್ಲೆಯ ಒಟ್ಟು 5 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿದರು. ಇಂದು ರಾತ್ರಿ ರಾಯಚೂರು ಸರ್ಕಿಟ್ ಹೌಸ್ ನಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ.