– ಮೋದಿ ವಿರುದ್ಧ ಜೆಪಿಸಿ ತನಿಖೆಗೆ ಆಗ್ರಹ
ನವದೆಹಲಿ: ಐಎನ್‍ಡಿಐಎ ಕೂಟ ವಿಪಕ್ಷ ಸ್ಥಾನದಲ್ಲಿ ಕೂರಲು ನಿರ್ಧರಿಸಿದ ಬೆನ್ನಲ್ಲೇ ಮೋದಿ-ಅಮಿತ್ ಶಾ ವಿರುದ್ಧ ರಾಹುಲ್ ಗಾಂಧಿ (Rahul Gandhi) ವಾಗ್ದಾಳಿ ಆರಂಭಿಸಿದ್ದಾರೆ.
ಎಕ್ಸಿಟ್ ಪೋಲ್‍ಗಳನ್ನು (Exit Poll) ಮತ್ತು ಜೂನ್ ನಾಲ್ಕರ ಷೇರುಪೇಟೆ ಮಹಾಪತನವನ್ನು ಅತಿ ದೊಡ್ಡ ಹಗರಣ ಎಂದು ಆರೋಪಿಸಿದ್ದಾರೆ. ಮೋದಿ ಸೇರಿ ಬಿಜೆಪಿಯ ಉನ್ನತ ನಾಯಕರು ಸೇರಿಕೊಂಡು ಮಾಡಿರುವ ಹಗರಣ ಇದು. ಇದರಿಂದ ಹೂಡಿಕೆದಾರರಿಗೆ 30 ಲಕ್ಷ ಕೋಟಿ ನಷ್ಟವಾಗಿದೆ. ಈ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆ ನಡೆಯಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
ಫಲಿತಾಂಶಕ್ಕೆ ಕೆಲವೇ ದಿನ ಮೊದಲು ಮೋದಿ, ಅಮಿತ್ ಶಾ, ನಿರ್ಮಲಾ ಸೀತಾರಾಮ್ ಷೇರ್ ಮಾರ್ಕೆಟ್ ಬಗ್ಗೆ ಏಕೆ ಹೇಳಿಕೆ ನೀಡಿದ್ರು ಎಂದು ಕೇಳಿದ್ದಾರೆ. ಕೆಲ ನಿರ್ದಿಷ್ಟ ಮಾಧ್ಯಮಗಳಿಗೆ ಮೋದಿ ನೀಡಿದ ಸಂದರ್ಶನದ ಬಗ್ಗೆಯೂ ರಾಹುಲ್ ಗಾಂಧಿ ಪ್ರಶ್ನೆ ಮಾಡಿದ್ದಾರೆ.
ಈ ನಡುವೆ ವಿಪಕ್ಷ ನಾಯಕತ್ವ ಜವಾಬ್ದಾರಿ ವಹಿಸಲು ಐಎನ್‍ಡಿಐಎ ಕೂಟ ಮುಂದಾಗಿದೆ. ಆದರೆ ರಾಹುಲ್ ಗಾಂಧಿ ಇನ್ನೂ ತಮ್ಮ ನಿರ್ಧಾರ ಪ್ರಕಟಿಸಿಲ್ಲ. ಸಮಯಾವಕಾಶ ಕೇಳಿದ್ದಾರೆ ಎನ್ನಲಾಗಿದೆ. ಇನ್ನೂ ವಯನಾಡು-ರಾಯ್‍ಬರೇಲಿ ಪೈಕಿ ಸ್ಥಾನವನ್ನು ಬಿಟ್ಟುಕೊಡಬೇಕು ಎಂಬ ಜಿಜ್ಞಾಸೆಯಲ್ಲಿ ರಾಹುಲ್ ಗಾಂಧಿ ಇದ್ದಾರೆ. ಇದೀಗ ರಾಹುಲ್ ತೆಗೆದುಕೊಳ್ಳುವ ಎರಡು ನಿರ್ಧಾರಗಳ ಬಗ್ಗೆ ಇದೀಗ ಕುತೂಹಲ ಮನೆ ಮಾಡಿದೆ.