ಮೋದಿ ಆ್ಯಪ್ ನಿಂದ ಅಮೆರಿಕ ಕಂಪನಿಗಳಿಗೆ ಮಾಹಿತಿ ಸೋರಿಕೆ: ರಾಹುಲ್ ಗಾಂಧಿ

Public TV
2 Min Read
rahul modi F

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಆ್ಯಪ್ ನಿಂದ ಮಾಹಿತಿ ಸೋರಿಕೆ ಆಗಿದೆ ಎಂದು ಆರೋಪಿಸಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಮಾಹಿತಿ ಸೋರಿಕೆ ಕುರಿತು ಕೇಂಬ್ರಿಡ್ಜ್ ಅನಾಲಿಟಿಕಾ ವಿಶ್ಲೇಷಣಾ ವರದಿಯನ್ನು ಆಧಾರಿಸಿ ರಾಹುಲ್ ಈ ಟ್ವೀಟ್ ಮಾಡಿದ್ದಾರೆ. ತಮ್ಮ ಟ್ವಿಟ್ ನಲ್ಲಿ ಮೋದಿ ಆ್ಯಪ್ ಮೂಲಕ ಸಂಗ್ರಹಿಸಲಾಗಿರುವ ಮಾಹಿತಿಯನ್ನು ಅಮೆರಿಕನ್ ಕಂಪೆನಿಗಳಿಗೆ ನೀಡಲಾಗಿದೆ ಎಂದು ದೂರಿದ್ದಾರೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ “ನನ್ನ ಹೆಸರು ನರೇಂದ್ರ ಮೋದಿ, ನಾನು ಭಾರತದ ಪ್ರಧಾನ ಮಂತ್ರಿಯಾಗಿದ್ದೇನೆ. ಈಗ ನೀವು ನನ್ನ ಅಧಿಕೃತ ಆ್ಯಪ್ ಗೆ ಸೈನ್ ಅಪ್ ಆದರೆ ನಿಮ್ಮೆಲ್ಲಾ ಮಾಹಿತಿಯನ್ನು ನಾನು ನನ್ನ ಮಿತ್ರನ ಅಗಿರುವ ಅಮೆರಿಕ ಕಂಪೆನಿಗೆ ನೀಡುತ್ತೇನೆ” ಎಂದು ಬರೆದು ಕೊಂಡಿದ್ದಾರೆ.

ತಮ್ಮ ಟ್ವೀಟ್‍ನಲ್ಲಿ ಪ್ರಮುಖ ಮಾಧ್ಯಮಗಳ ವಿರುದ್ಧ ಕಿಡಿಕಾರಿರುವ ರಾಹುಲ್, ಇಂತಹ ಮುಖ್ಯ ಸುದ್ದಿಗಳನ್ನು ಸುಡುತ್ತಿರುವ ನಿಮಗೆ ಧನ್ಯವಾದ ಎಂದು ತಿಳಿಸಿದ್ದಾರೆ.

ರಾಹುಲ್ ತಮ್ಮ ಟ್ವೀಟ್ ನೊಂದಿಗೆ ಮಾಧ್ಯಮವೊಂದರ ವರದಿಯನ್ನು ಲಿಂಕ್ ಮಾಡಿದ್ದಾರೆ. ಈ ವರದಿಯಲ್ಲಿ ಮೋದಿ ಆ್ಯಪ್ ಬಳಕೆ ಮಾಡುವ ಎಲ್ಲರ ಹೆಸರು, ಫೋಟೋ, ಇ-ಮೇಲ್‍ಗಳ ಮಾಹಿತಿ ಮೂರನೇ ವ್ಯಕ್ತಿಗೆ ನೀಡಲಾಗುತ್ತದೆ ಎಂದು ಆರೋಪಿಸಲಾಗಿದೆ.

ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಕೇಂಬ್ರಿಡ್ಜ್ ವಿಶ್ಲೇಷಣಾ ವರದಿ ಕುರಿತು ಆರೋಪ ಹಾಗೂ ಪ್ರತ್ಯಾರೋಪಗಳು ನಡೆಯುತ್ತಿದ್ದು, ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಕೇಂಬ್ರಿಡ್ಜ್ ವಿಶ್ಲೇಷಣಾ ವರದಿ ಸಹಾಯ ಪಡೆದಿತ್ತು ಎಂದು ಬಿಜೆಪಿ ಆರೋಪಿಸಿದೆ.

ರಾಹುಲ್ ಗಾಂಧಿ ಶನಿವಾರ ಟ್ವಿಟ್ಟರ್ ನಲ್ಲಿ ಕೇಂದ್ರ ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ಅವರ ವಿರುದ್ಧ ಟ್ವೀಟ್ ವಾರ್ ನಡೆಸಿದ್ದರು. ದೇಶದ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣ ಕುರಿತು ಪ್ರಸ್ತಾಪಿಸಿದ್ದ ರಾಹುಲ್ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಅಲ್ಲದೇ ನ್ಯಾಯಾಲಯಗಳಲ್ಲಿ ಪ್ರಕರಣಗಳು ಹೆಚ್ಚು ಬಾಕಿ ಉಳಿಯಲು ನ್ಯಾಯಾಧೀಶರ ಕೊರತೆ ಕಾರಣ ಎಂದು ತಿಳಿಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ ಸಚಿವ ರವಿ ಶಂಕರ್ ಪ್ರಸಾದ್ ಅವರು ದೇಶದ ನ್ಯಾಯಾಂಗ ವ್ಯವಸ್ಥೆ ಈ ಸ್ಥಿತಿಯನ್ನು ಎದುರಿಸಲು ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ತಿರುಗೇಟು ನೀಡಿದ್ದರು.

Rahul Gandhi

Share This Article