– ಕೊರೊನಾ ವಿರುದ್ಧ ಈಗಲೇ ಜಯ ಘೋಷಿಸುವುದು ಮೂರ್ಖತನ
– ಲಾಕ್‍ಡೌನ್ ಒಂದೇ ಅಂತಿಮ ಪರಿಹಾರದ ಮಾರ್ಗವಲ್ಲ
– ರಾಜ್ಯ ಸರ್ಕಾರಗಳನ್ನು ಆರ್ಥಿಕವಾಗಿ ಸದೃಢಗೊಳಿಸಿ
– ಸ್ವತಂತ್ರ ನಿರ್ಧಾರಕ್ಕೆ ಅವಕಾಶ ಕೊಡಿ
ನವದೆಹಲಿ: ಕೊರೊನಾ ವೈರಸ್‍ನಿಂದ ದೇಶದಲ್ಲಿ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ತಡೆಯಲು ಕೇವಲ ಲಾಕ್‍ಡೌನ್ ಒಂದೇ ಅಂತಿಮ ಪರಿಹಾರದ ಮಾರ್ಗವಲ್ಲ. ಲಾಕ್‍ಡೌನ್ ಜೊತೆ ಜೊತೆಗೆ ದೇಶದಲ್ಲಿ ಪರೀಕ್ಷೆಗಳು ಹೆಚ್ಚಾಗಬೇಕು ಎಂದು ಕಾಂಗ್ರೆಸ್ ಮುಖಂಡ, ಸಂಸದ ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.
ದೆಹಲಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸುದ್ದಿಗೋಷ್ಠಿ ನಡೆಸಿದ ಅವರು, ಲಾಕ್‍ಡೌನ್ ಎಂಬುದು ವಿರಾಮದ ಬಟನ್ ಇದ್ದಂತೆ. ಸಮಸ್ಯೆಯನ್ನು ತಾತ್ಕಲಿಕವಾಗಿ ಮಾತ್ರ ಮುಂದೂಡಿಕೆ ಮಾಡಿದೆ. ಲಾಕ್‍ಡೌನ್ ಮುಗಿಯುವ ವೇಳೆಗೆ ಕೇಂದ್ರ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
Advertisement
Advertisement
ಕೊರೊನಾ ವೈರಸ್ ದೇಶದ ಆರೋಗ್ಯ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಎರಡು ದೊಡ್ಡ ಸಮಸ್ಯೆಗಳನ್ನು ಸೃಷ್ಟಿಸಿದೆ. ಆರೋಗ್ಯದ ಜೊತೆಗೆ ಆರ್ಥಿಕತೆ ಮೇಲೆ ಸರ್ಕಾರ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
Advertisement
ಕೊರೊನಾ ವಿಚಾರದಲ್ಲಿ ಲಾಕ್‍ಡೌನ್ ಒಂದೇ ಮುಖ್ಯವಲ್ಲ. ಇದರೊಂದಿಗೆ ಕೊರೊನಾ ಪರೀಕ್ಷೆಗಳನ್ನು ಹೆಚ್ಚು ಮಾಡಬೇಕು. ಹಾಟ್‍ಸ್ಪಾಟ್, ನಾನ್ ಹಾಟ್‍ಸ್ಪಾಟ್ ವಲಯಗಳಲ್ಲಿ ಕ್ಷೀಪ್ರವಾಗಿ ಟೆಸ್ಟಿಂಗ್‍ಗಳು ನಡೆಯಬೇಕು. ವೈರಸ್ ಹರಡುವು ವೇಗದಲ್ಲೇ ನಮ್ಮ ಪರೀಕ್ಷೆಗಳು ನಡೆದಾಗ ಮಾತ್ರ ಕೊರೊನಾ ನಿಯಂತ್ರಿಸಲು ಸಾಧ್ಯವಾಗುತ್ತದೆ. ದೇಶದ ಪ್ರತಿ ಜಿಲ್ಲೆಯಲ್ಲಿ ಅಂದಾಜು 350 ಟೆಸ್ಟ್ ಗಳು ನಡೆದಿದೆ. ಆದರೆ ಕೊರೊನಾ ವೈರಸ್ ಪ್ರಭಾವ ಮುಂದೆ ಇದು ಅತಿ ಕಡಿಮೆ ಟೆಸ್ಟ್ ಗಳಾಗಿದ್ದು, ಸರ್ಕಾರ ಟೆಸ್ಟಿಂಗ್ ವಿಚಾರದಲ್ಲಿ ಹೆಚ್ಚು ಗಮನ ಹರಿಸಬೇಕು ಎಂದು ತಿಳಿಸಿದರು.
Advertisement
ಅನೇಕ ವಿದೇಶಗಳು ರ್ಯಾಪಿಂಡ್ ಟೆಸ್ಟಿಂಗ್ ಕಿಟ್‍ಗಳಿಗೆ ಬೇಡಿಕೆ ಇಟ್ಟಿದ್ದು ಭಾರತಕ್ಕೂ ಹೆಚ್ಚು ಆಮದಾಗಿರಲು ಕಾರಣ ಇದನ್ನು ಹೊರತು ಬದಲಿ ಕ್ರಮಗಳನ್ನು ಸರ್ಕಾರ ಕಂಡುಕೊಳ್ಳಬೇಕು. ಕೊರೊನಾ ವಿರುದ್ಧದ ಹೋರಾಟ ಈಗ ಆರಂಭವಾಗಿದೆ. ಈಗಲೇ ನಾವು ಜಯ ಘೋಷಿಸುವುದು ತಪ್ಪು. ಇದೊಂದು ನಿರಂತರ ಹೋರಾಟವಾಗಿದ್ದು ಜನರು ಒಗ್ಗಾಟಾಗಿ ಸರ್ಕಾರದ ಜೊತೆ ಕೈ ಜೋಡಿಸಬೇಕು ಎಂದು ಮನವಿ ಮಾಡಿಕೊಂಡರು.
ವಲಸೆ ಕಾರ್ಮಿಕರ ವಿಚಾರದಲ್ಲಿ ಸರ್ಕಾರ ಹೆಚ್ಚು ಗಮನ ಹರಿಬೇಕು. ಇಲ್ಲದಿದ್ದರೇ ಇದು ದೊಡ್ಡ ಸಮಸ್ಯೆಯಾಗಲಿದೆ. ಸೋಂಕು ಹರಡುವ ಸಾಧ್ಯತೆ ಕೂಡ ಇರಲಿದೆ. ವಲಸೆ ಕಾರ್ಮಿಕರಿಗೆ ರೇಷನ್ ಕಾರ್ಡ್ ಇದ್ದವರು, ಇಲ್ಲದವರಿಗೆ ಅಗತ್ಯ ನೆರವು ನೀಡಬೇಕು. ಹತ್ತು ಕೆಜಿ ಅಕ್ಕಿ ಅಥವಾ ಗೋದಿ, ಒಂದು ಕೆಜಿ ಧಾನ್ಯ ಹಾಗೂ ಸಕ್ಕರೆ ನೀಡಬೇಕು. ಅವರ ಆರೋಗ್ಯ ತಪಾಸಣೆ ನಡೆಸಬೇಕು. ಕಾಂಗ್ರೆಸ್ ನ್ಯಾಯ್ ಪ್ರಾಣಳಿಕೆಯಂತೆ ನಿರುದ್ಯೋಗಿಗಳಿಗೆ ನೇರವಾಗಿ ಖಾತೆಗೆ ಹಣ ಸಂದಾಯ ಆಗಬೇಕು. ದೇಶದ ಗೋದಾಮ್‍ಗಳಲ್ಲಿ ಸಾಕಷ್ಟು ಆಹಾರ ಉತ್ಪನ್ನಗಳಿದೆ. ಅದನ್ನು ಬಡವರಿಗೆ ಹಂಚಿ ಹೊಸ ಆಹಾರ ಉತ್ಪನ್ನ ಗೋದಾಮುಗಳಲ್ಲಿ ಸಂಗ್ರಹಣೆ ಮಾಡಬೇಕು. ಇರುವ ಆಹಾರ ಹಂಚಿಕೆ ಮಾಡದಿರುವುದು ಬೇಸರ ತಂದಿದೆ ಎಂದರು.
ಕೊರೊನಾ ನಿಯಂತ್ರಣ ವಿಚಾರದಲ್ಲಿ ರಾಜ್ಯಗಳನ್ನು ಆರ್ಥಿಕವಾಗಿ ಸದೃಢ ಮಾಡಬೇಕಿದೆ. ಕೇಂದ್ರವೇ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುವ ಬದಲು ರಾಜ್ಯ ಸರ್ಕಾರಗಳಿಗೆ ಹೆಚ್ಚು ಸ್ವಾತಂತ್ರ್ಯ ನೀಡಬೇಕು. ಜಿಎಸ್‍ಟಿ ಹಣ ಸೇರಿದಂತೆ ಅಗತ್ಯ ಹಣಕಾಸು ಸೌಲಭ್ಯಗಳನ್ನು ರಾಜ್ಯಗಳಿಗೆ ನೀಡಿ ಶಕ್ತಿ ಶಾಲಿ ಮಾಡಬೇಕು. ಕೇಂದ್ರದ ಹಣಕಾಸು ಹಾಗೂ ಆರೋಗ್ಯ ಇಲಾಖೆಯ ಮಹತ್ವದ ವಿಚಾರಗಳನ್ನು ಕೇಂದ್ರ ಸರ್ಕಾರ ನಿಭಾಯಿಸಬೇಕು. ಲಾಕ್‍ಡೌನ್ ವಿಸ್ತರಿಸುವ ಮತ್ತು ರಾಜ್ಯದೊಳಗೆ ಕೊರೊನಾ ನಿಯಂತ್ರಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ನೀಡಬೇಕು. ಅಧಿಕಾರ ಕೇಂದ್ರೀಕರಣದ ಬದಲು ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿ ಅಧಿಕಾರಿ ವಿಕೇಂದ್ರಿಕರಣ ಮಾಡಬೇಕು ಎಂದು ಪರೋಕ್ಷವಾಗಿ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಜನರು ಆತಂಕ ಪಡುವ ಅಗತ್ಯ ಇಲ್ಲ. ಮನೆಯಲ್ಲಿ ಉಳಿದುಕೊಂಡಿದ್ದೇವೆ ಎಂದು ಭಯ ಪಡುವುದು ಬೇಡ. ನಿರುದ್ಯೋಗ ಸಮಸ್ಯೆ ಬಗ್ಗೆ ಭೀತಿಯಾವುವ ಅವಶ್ಯಕತೆ ಇಲ್ಲ. ಭಾರತ ಈ ಸಮಸ್ಯೆಯನ್ನು ಎದುರಿಸಲಿದೆ. ಭಯದ ಬದಲು ಜನರು ಆತ್ಮ ವಿಶ್ವಾಸ ದಲ್ಲಿರಬೇಕು. ಎಲ್ಲರೂ ಒಗ್ಗಟ್ಟಾಗಿ ಕೊರೊನಾ ವಿರುದ್ಧ ಹೋರಾಟ ನಡೆಸಬೇಕು. ವಿಪಕ್ಷವಾಗಿ ಕಾಂಗ್ರೆಸ್ ಕೈ ಜೋಡಿಸಿದ್ದೇವೆ. ಸರ್ಕಾರಕ್ಕೆ ನಮ್ಮ ಸಲಹೆಗಳನ್ನು ನೀಡುತ್ತೇವೆ. ಪರಿಗಣಿಸುವುದು ಬಿಡುವುದು ಸರ್ಕಾರಕ್ಕೆ ಬಿಟ್ಟಿದ್ದು ಎಂದು ರಾಹುಲ್ ಗಾಂಧಿ ಹೇಳಿದರು.