ತುಮಕೂರು: ರಾಜ್ಯದ ಜನರ ಹಸಿವನ್ನು ನೀಗಿಸಲು ಸಿದ್ದರಾಮಯ್ಯ ಅವರು ಉಚಿತ ಅಕ್ಕಿ ನೀಡಿದ್ದಾರೆ. ಆದರೆ ಬಿಎಸ್‍ವೈ ಅಧಿಕಾರ ಅವಧಿಯಲ್ಲಿದ್ದಾಗ ಏನು ಮಾಡಿದ್ದರು ಎಂದು ಪ್ರಶ್ನಿಸಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಇಂದು ನಗರದ ಟೌನ್ ಹಾಲ್‍ನಲ್ಲಿ ಸೇರಿದ್ದ ಸಾವಿರಾರು ಜನರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಕೇಂದ್ರ ನೀತಿಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಮೋದಿಯವರಿಂದ ಯಾರ ಖಾತೆಗಾದರೂ 15 ಲಕ್ಷ ರೂ. ಪಾವತಿ ಆಗಿದ್ಯಾ ಎಂದು ಕರ್ನಾಟಕದ ಯುವಕರು ಉತ್ತರಿಸಬೇಕು ಎಂದರು. ಅಷ್ಟೇ ಅಲ್ಲದೇ ಹಣಕಾಸು ಸಚಿವ ಅರುಣ್ ಜೇಟ್ಲಿ ನೀರವ್ ಮೋದಿಯ ವಕೀಲರು ಎಂದು ಹೇಳಿ ವಾಗ್ದಾಳಿ ನಡೆಸಿದರು.
Advertisement
Advertisement
ಇದಕ್ಕೂ ಮುನ್ನ ಸಿದ್ದಗಂಗಾ ಮಠಕ್ಕೆ ಭೇಟಿಕೊಟ್ಟ ರಾಹುಲ್ ಗಾಂಧಿ ಶ್ರೀ ಶಿವಕುಮಾರ ಶ್ರೀಗಳ ಆಶೀರ್ವಾದ ಪಡೆದರು. ಈ ವೇಳೆ ಶ್ರೀಗಳು ರಾಹುಲ್ ಗೆ ಅಕ್ಷತೆ ಹಾಕಿ ಆಶೀರ್ವಾದ ಮಾಡಿದರು. ಈ ವೇಳೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹಾಗೂ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಮಠಕ್ಕೆ ಭೇಟಿ ನೀಡಿದ್ದ ಸಮಯದ ಫೋಟೋಗಳನ್ನು ಕಿರಿಯ ಶ್ರೀಗಳು ರಾಹುಲ್ ಅವರಿಗೆ ತೋರಿಸಿದರು. ಶ್ರೀಗಳ ಜೊತೆ ಸುಮಾರು 15 ನಿಮಿಷ ಕಾಲ ಕಳೆದ ರಾಹುಲ್ ಮಠದಲ್ಲಿ ತಯಾರಿಸಿದ ಚಪಾತಿ ಸಾಗು, ಅನ್ನ ಸಾಂಬಾರ್, ಪಾಯಸ ಹಾಗೂ ಪರಂಗಿ ಹಣ್ಣು ಸೇವಿಸಿದರು.
Advertisement
ರಾಹುಲ್ ಬಳಿಕ ಕುಣಿಗಲ್ ಪಟ್ಟಣದಲ್ಲಿ ಮಾತನಾಡಿ ಜೆಡಿಎಸ್ ಬಿಜೆಪಿ `ಬಿ’ ಟೀಮ್ ಎಂದು ಪುನರುಚ್ಚರಿಸಿದರು. ನುಡಿದಂತೆ ನಡೆ ಎಂದು ಬಸವಣ್ಣನವರು ಹೇಳಿದ್ದಾರೆ. ಆದರೆ ಮೋದಿ ನುಡಿದಂತೆ ನಡೆಯುತ್ತಿಲ್ಲ ಎಂದು ಕನ್ನಡದಲ್ಲೇ ಭಾಷಣ ಮಾಡಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬರುವುದು ಖಚಿತ. ನಾವು ಕರ್ನಾಟಕದಲ್ಲಿ ಗೆಲ್ಲುತ್ತೇವೆ. ಇದು ನಿಮ್ಮ ಸರ್ಕಾರ. ಯುವಕರಿಗಾಗಿ, ಮಹಿಳೆಯರಿಗಾಗಿ ಹಾಗೂ ರೈತರಿಗಾಗಿ ಕಾರ್ಯಮಾಡುತ್ತೇವೆ ಎಂದರು. ಈ ಮಧ್ಯೆ ಹೆಬ್ಬೂರಿನಲ್ಲಿ ಅಭಿಮಾನಿಗಳು ಇಂದಿರಾಗಾಂಧಿ ಫೋಟೋ ಕೊಟ್ಟು ಅಭಿಮಾನ ಮೆರೆದರು.