`ಬಾಹುಬಲಿʼಯಿಂದ ಪಡೆದ ರಾಜಕೀಯ ಲಾಭದ ಬೆಲೆ ವೀರ ಹೆಣ್ಣು ಮಕ್ಕಳ ಕಣ್ಣೀರಿಗಿಂತ ಮಿಗಿಲಾದೀತೇ? – ರಾಗಾ ಪ್ರಶ್ನೆ

Public TV
3 Min Read
Vinesh Phogat 1

– ಪ್ರಧಾನಿ ಅವರ ಕ್ರೌರ್ಯ ನೋಡಿದ್ರೆ ನನಗೆ ನೋವಾಗುತ್ತೆ
– ದೇಶದ ಪ್ರತಿ ಹೆಣ್ಣು ಮಗಳಿಗೆ ಸ್ವಾಭಿಮಾನ ಮೊದಲು, ಪದಕ ಆಮೇಲೆ
– ಮೋದಿ, ಕೇಂದ್ರ ಸರ್ಕಾರದ ವಿರುದ್ಧ ರಾಹುಲ್‌ ಗಾಂಧಿ ಕೆಂಡಾಮಂಡಲ

ನವದೆಹಲಿ: ಇಂದು ಘೋಷಿತ ಬಾಹುಬಲಿಯಿಂದ ಪಡೆದ ರಾಜಕೀಯ ಲಾಭಗಳ ಬೆಲೆ ಈ ವೀರ ಹೆಣ್ಣು ಮಕ್ಕಳ ಕಣ್ಣೀರಿಗಿಂತ ಮಿಗಿಲಾದೀತೇ? ಎಂದು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ (Rahul Gandhi), ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕುಸ್ತಿಪಟು ವಿನೇಶ್‌ ಫೋಗಟ್‌ (Vinesh Phogat) ನವದೆಹಲಿಯ ಕರ್ತವ್ಯ ಪಥದ ಮಾರ್ಗದಲ್ಲೇ ಖೇಲ್‌ ರತ್ನ, ಅರ್ಜುನ ಪ್ರಶಸ್ತಿಯನ್ನು (Khel Ratna And Arjuna Award) ಬಿಟ್ಟು ಹೋಗಿದ್ದಾರೆ. ಪ್ರಧಾನಿ ಕಚೇರಿಗೆ ಹೋಗದಂತೆ ದೆಹಲಿ ಪೊಲೀಸರು (Delhi Police) ತಡೆದಿದ್ದರಿಂದ ಕುಸ್ತಿಪಟು ಹೀಗೆ ಮಾಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ರಾಹುಲ್‌ ಗಾಂಧಿ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಕಚೇರಿಗೆ ಹೋಗದಂತೆ ತಡೆ; ಕರ್ತವ್ಯ ಪಥದಲ್ಲೇ ಖೇಲ್‌ ರತ್ನ, ಅರ್ಜುನ ಪ್ರಶಸ್ತಿ ಬಿಟ್ಟು ಹೋದ ಕುಸ್ತಿಪಟು 

Vinesh Phogat 2

ತಮ್ಮ ಸೋಶಿಯಲ್‌ ಮೀಡಿಯಾ ಎಕ್ಸ್‌ ಖಾತೆಯಲ್ಲಿ, ವಿನೇಶ್‌ ಫೋಗಟ್‌ ಅವರು ರಸ್ತೆಯಲ್ಲಿ ಪದಕ ಇಡುತ್ತಿರುವ ವೀಡಿಯೋ ತುಣುಕೊಂದನ್ನು ಹಂಚಿಕೊಂಡಿದ್ದಾರೆ. ಅಲ್ಲದೇ, ದೇಶದ ಪ್ರತಿಯೊಬ್ಬ ಹೆಣ್ಣು ಮಗಳಿಗೂ ಮೊದಲು ಸ್ವಾಭಿಮಾನ, ಅದರ ನಂತರ ಯಾವುದೇ ಪದಕ ಅಥವಾ ಗೌರವ ಬರುತ್ತದೆ. ಇಂದು ‘ಘೋಷಿತ ಬಾಹುಬಲಿ’ಯಿಂದ ಪಡೆದ ರಾಜಕೀಯ ಲಾಭಗಳ ಬೆಲೆ ಈ ವೀರ ಹೆಣ್ಣು ಮಕ್ಕಳ ಕಣ್ಣೀರಿಗಿಂತ ಮಿಗಿಲಾದೀತೇ? ಪ್ರಧಾನಿಯವರು ರಾಷ್ಟ್ರದ ಕಾವಲುಗಾರ, ಅವರ ಇಂತಹ ಕ್ರೌರ್ಯವನ್ನ ನೋಡಿದರೆ ನೋವಾಗುತ್ತದೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಬ್ರಿಜ್ ಭೂಷಣ್ ನಿವಾಸದಿಂದ ಡಬ್ಲ್ಯುಎಫ್‍ಐ ಕಚೇರಿ ಸ್ಥಳಾಂತರ

Sanjay Singh Brijbhushan Wrestling Federation of India WFI

ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್‌ ಗೇಮ್ಸ್‌ ಚಿನ್ನದ ಪದಕ ವಿಜೇತೆ ವಿನೇಶ್‌ ಫೋಗಟ್‌ 2020 ರಲ್ಲಿ ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ಖೇಲ್ ರತ್ನ ಮತ್ತು 2016 ರಲ್ಲಿ ಅರ್ಜುನ ಪ್ರಶಸ್ತಿಯನ್ನು ಪಡೆದಿದ್ದರು. ಇತ್ತೀಚೆಗೆ ಪ್ರಧಾನಿಗೆ ಬರೆದಿದ್ದ ಬಹಿರಂಗ ಪತ್ರದಲ್ಲಿ ಪ್ರಶಸ್ತಿಗಳನ್ನು ಹಿಂದಿರುಗಿಸುವ ನಿರ್ಧಾರ ಪ್ರಕಟಿಸಿದ್ದರು. ಶನಿವಾರ ಪ್ರಶಸ್ತಿಯನ್ನು ಹಿಂದಿರುಗಿಸಲು ಕರ್ತವ್ಯ ಪಥದಲ್ಲಿ ತೆರಳುತ್ತಿದ್ದಾಗ ಮಾರ್ಗ ಮಧ್ಯದಲ್ಲೇ ಪೊಲೀಸರು ಕುಸ್ತಿಪಟುವನ್ನು ತಡೆದರು. ಇದರಿಂದ ವಿನೇಶ್‌ ರಸ್ತೆಯಲ್ಲೇ ಪದಕಗಳನ್ನ ಬಿಟ್ಟು ಹೋದರು. ಇದಕ್ಕೂ ಮುನ್ನ, ಸಾಕ್ಷಿ ಮಲಿಕ್ ಅವರು ಕುಸ್ತಿಗೆ ವೃತ್ತಿ ಬದುಕಿಗೆ ಕಣ್ಣೀರ ವಿದಾಯ ಹೇಳಿದ್ದರು. ಇದಾದ ಕೆಲ ದಿನಗಳ ನಂತರ ಬಜರಂಗ್ ಪೂನಿಯಾ ಪದ್ಮಶ್ರೀ ಪ್ರಶಸ್ತಿ ಹಿಂದಿರುಗಿಸಿದರು. ಇದನ್ನೂ ಓದಿ: ಪಾಕಿಸ್ತಾನ ಸೂಪರ್‌ ಲೀಗ್‌ಗಿಂತಲೂ ಭಾರತದ IPL ದೊಡ್ಡದು – ಪಾಕ್‌ ಮಾಜಿ ಕ್ರಿಕೆಟಿಗ ಬಣ್ಣನೆ

ಭಾರತೀಯ ಕುಸ್ತಿ ಫೆಡರೇಷನ್‌ ಅಧ್ಯಕ್ಷರಾಗಿದ್ದಾಗ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ವಿರುದ್ಧದ ಪ್ರತಿಭಟನೆಯಲ್ಲಿ ಈ ಮೂವರು ಕುಸ್ತಿಪಟುಗಳು ಮುಂಚೂಣಿಯಲ್ಲಿದ್ದರು. ಬಿಜೆಪಿ ಸಂಸದರ ವಿರುದ್ಧ ಹಲವಾರು ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಆದ್ರೆ ಬ್ರಿಜ್ ಭೂಷಣ್ ಅವರ ಆಪ್ತ ಸಹಾಯಕ ಸಂಜಯ್ ಸಿಂಗ್ ನೇತೃತ್ವದ ಸಮಿತಿಯು ಡಿಸೆಂಬರ್ 21 ರಂದು ಭಾರತದ ಕುಸ್ತಿ ಫೆಡರೇಶನ್‌ಗೆ ನಡೆದ ಚುನಾವಣೆಯಲ್ಲಿ ಪ್ರಚಂಡ ಬಹುಮತ ಸಾಧಿಸಿತು. ಹಾಗಾಗಿ ವಿನೇಶ್‌ ಫೋಗಟ್, ಸಾಕ್ಷಿ ಮಲಿಕ್‌, ಬಜರಂಗ್ ಪೂನಿಯಾ ಬೇಸರ ವ್ಯಕ್ತಪಡಿಸಿದ್ದರು. ಕ್ರೀಡೆಗೆ ಸಂಬಂಧಿಸಿದಂತೆ ಸಾಂವಿಧಾನಿಕ ನಿಬಂಧನೆಗಳನ್ನು ಅನುಸರಿಸದ ಕಾರಣ ಈ ಸಮಿತಿಯನ್ನು ಕ್ರೀಡಾ ಸಚಿವಾಲಯ ಡಿ.24 ರಂದು ಅಮಾನತುಗೊಳಿಸಿತು.

Share This Article