ನವದೆಹಲಿ: 2019 ಮತ್ತು 2024ರ ಲೋಕಸಭಾ ಚುನಾವಣೆಯಲ್ಲಿ ಸತತವಾಗಿ ಗೆಲುವು ಸಾಧಿಸಿದ್ದ ವಯನಾಡ್ ಕ್ಷೇತ್ರವನ್ನು ಬಿಟ್ಟು ಸಂಸದ ರಾಹುಲ್ ಗಾಂಧಿ (Rahul Gandhi) ರಾಯ್ ಬರೇಲಿ ಕ್ಷೇತ್ರವನ್ನು ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆ. ದೆಹಲಿಯಲ್ಲಿ ನಡೆದ ಹೈಕಮಾಂಡ್ ಸಭೆಯ ಬಳಿಕ ತಮ್ಮ ನಿರ್ಧಾರ ಪ್ರಟಿಸಿದ್ದಾರೆ.
ತಮ್ಮ ನಿಲುವಿನ ಕುರಿತು ಸಭೆಯ ಬಳಿಕ ಮಾತನಾಡಿದ ರಾಹುಲ್ ಗಾಂಧಿ, ವಯನಾಡ್ ಮತ್ತು ರಾಯ್ ಬರೇಲಿ (Raebareli) ಜೊತೆಗೆ ಭಾವನಾತ್ಮಕ ಸಂಬಂಧ ಇದೆ. ವಯನಾಡ್ ನಲ್ಲಿ (Wayanad Constituency) ಕಳೆದ 5 ವರ್ಷದಿಂದ ಸಂಸದನಿದ್ದೆ. ಅದಕ್ಕಾಗಿ ವಯನಾಡಿನ ಜನತೆಗೆ ತುಂಬು ಹೃದಯದ ಧನ್ಯವಾದ ಸಲ್ಲಿಸುತ್ತೇನೆ. ಜೀವನ ಪೂರ್ತಿ ಅವರನ್ನು ನೆನಪಿನಲ್ಲಿಟ್ಟುಕೊಳ್ಳುತ್ತೇನೆ. ಇನ್ನೂ ರಾಯ್ ಬರೇಲಿ ಜೊತೆಗೆ ಹಳೇ ಸಂಬಂಧವಿದ್ದು, ಮುಂದೆ ಅವರ ಜೊತೆಗಿರುತ್ತೇನೆ ಎಂಬ ಖುಷಿ ಇದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ರೈಲು ಅಪಘಾತ- ಮೋದಿ ಸರ್ಕಾರವನ್ನು ಟೀಕಿಸಿದ ಖರ್ಗೆ
ವಯನಾಡ್ ಮತ್ತು ರಾಯ್ ಬರೇಲಿ ಕ್ಷೇತ್ರಗಳ ನಿರ್ಧಾರ ಕೈಗೊಳ್ಳುವುದು ಸುಲಭವಾಗಿರಲಿಲ್ಲ. ಏಕೆಂದರೆ ಕಳೆದ 5 ವರ್ಷಗಳಿಂದ ವಯನಾಡ್ ಸಂಸದನಾಗಿದ್ದು ಅದ್ಬುತವಾದ ಅನುಭವ. ಪ್ರತಿಯೊಂದು ಹಂತದಲ್ಲೂ ಇಲ್ಲಿನ ಜನ ಪ್ರೀತಿ, ಬೆಂಬಲ ನೀಡಿದರು. ಕಷ್ಟದ ಸಮಯದಲ್ಲಿ ಹೋರಾಡಲು ಶಕ್ತಿ ನೀಡಿದರು. ಉಪ ಚುನಾವಣೆಯಲ್ಲಿ ಪ್ರಿಯಾಂಕಾ ವಯನಾಡಿನಿಂದ ಸ್ಪರ್ಧಿಸುತ್ತಿದ್ದಾರೆ. ಪ್ರಿಯಾಂಕಾ ಅಲ್ಲಿ ಸ್ಪರ್ಧಿಸುತ್ತಿದ್ದಾರೆ, ನಾನು ನಿರಂತರ ಅಲ್ಲಿಗೆ ಭೇಟಿ ನೀಡುತ್ತೇನೆ. ಪ್ರಿಯಾಂಕಾ ವಯನಾಡ್ ನಿಂದ ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸ ನನಗಿದೆ ಎಂದರಲ್ಲದೇ ವಯನಾಡ್ ಜನರಿಗೆ ನಾನು, ಪ್ರಿಯಾಂಕಾ ಇಬ್ಬರು ಸಂಸದರು ಸಿಗಲಿದ್ದಾರೆ ಎಂದಿದ್ದಾರೆ.
ಬಳಿಕ ಪ್ರಿಯಾಂಕಾ ಗಾಂಧಿ ಮಾತನಾಡಿ, ರಾಯ್ ಬರೇಲಿ ಜೊತೆಗೆ ಉತ್ತಮ ಸಂಬಂಧ ಇದೆ. ಅಲ್ಲಿ ಸಾಕಷ್ಟು ಕೆಲಸ ಮಾಡಿದ್ದೇವೆ. ನಾವಿಬ್ಬರೂ ವಯನಾಡ್ ಮತ್ತು ರಾಯ್ ಬರೇಲಿ ಜೊತೆಗೆ ಇರಲಿದ್ದೇವೆ. ರಾಯ್‌ಬರೇಲಿ ನನ್ನ ಸಹೋದರನಿಗೆ ನೀಡಿದ್ದೇನೆ ಎಂದು ಭಾವುಕರಾಗಿದ್ದಾರೆ. ಇದನ್ನೂ ಓದಿ: ಪ್ರಯಾಣಿಕರ ಮೂಲ ಸೌಕರ್ಯ ಕಡೆಗಣಿಸಿ, ವಂದೇ ಭಾರತ್ ಮಾತ್ರ ಪಬ್ಲಿಸಿಟಿ ಮಾಡ್ತಿದ್ದಾರೆ: ದೀದಿ ಕೆಂಡಾಮಂಡಲ
ಪ್ರಸಕ್ತ ವರ್ಷದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಿಂದಲೂ ಭರ್ಜರಿ ವಿಜಯ ಸಾಧಿಸಿದ್ದರು. ಉತ್ತರ ಪ್ರದೇಶದ (Uttar Pradesh) ರಾಯ್‌ಬರೇಲಿ ಕ್ಷೇತ್ರದಲ್ಲಿ 6,87,649 ಮತಗಳನ್ನು ಪಡೆಯುವ ಮೂಲಕ 3,90,030 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದರೆ, ವಯನಾಡ್ ಕ್ಷೇತ್ರದಲ್ಲಿ (Wayanad Constituency) 6,47,445 ಮತಗಳನ್ನು ಪಡೆದು ಗೆಲುವು ಸಾಧಿಸಿರುವ ರಾಹುಲ್ 3,64,422 ಮತಗಳ ಅಂತರದಿಂದ ಗೆದ್ದು ಬೀಗಿದ್ದರು. ಇದನ್ನೂ ಓದಿ: ಯಾತ್ರಾರ್ಥಿಗಳಿದ್ದ ಬಸ್ ಮೇಲೆ ಉಗ್ರರ ದಾಳಿ ಪ್ರಕರಣ – ತನಿಖೆ ಎನ್‍ಐಎ ಹೆಗಲಿಗೆ