Connect with us

Districts

ರಾಹುಲ್‍ಗಾಂಧಿ ಪಾಕಿಸ್ತಾನದ ಮೂಲದ ಏಜೆಂಟ್: ಯತ್ನಾಳ್

Published

on

ವಿಜಯಪುರ: ರಾಷ್ಟ್ರೀಯ ಪೌರತ್ವ ಕಾಯ್ದೆ ವಿಚಾರದಲ್ಲಿ ಜನರ ದಾರಿ ತಪ್ಪಿಸುತ್ತಿರುವ ಕೆಲಸವನ್ನು ಮಾಡಲಾಗುತ್ತಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮೂಲ ಪಾಕಿಸ್ತಾನವಾಗಿದ್ದು, ಅವರು ಪಾಕ್ ಏಜೆಂಟ್‍ರಾಗಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.

ಕ್ಷೇತ್ರದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶಗಳಲ್ಲಿ ಹಿಂದೂ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಅಂತಹವರಿಗೆ ಆಶ್ರಯ ನೀಡಲು ಪ್ರಧಾನಿಗಳು, ಗೃಹ ಸಚಿವ ಅಮಿತ್ ಶಾ ಚಿಂತನೆ ನಡೆಸಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಹಾಗೂ ಕೆಲ ಜಾತ್ಯಾತೀತ ಎನ್ನುವ ಕೋಮುವಾದಿ ಪಕ್ಷಗಳು ಒಂದು ಕೋಮಿನ ಜನರನ್ನು ಒಕ್ಕಲೆಬ್ಬಿಸುತ್ತಿದ್ದಾರೆ. ಆದ್ದರಿಂದ ಪೌರತ್ವ ಕಾನೂನು ಪರ ನಗರದಲ್ಲಿ ಇದೇ ಶನಿವಾರ ಬೃಹತ್ ರ್ಯಾಲಿ ನಡೆಸುತ್ತೇವೆ ಎಂದು ತಿಳಿಸಿದರು.

ನಾನು ಹಿಂದೆ ಕುಂತು ಆಟ ಆಡುವ ರಾಜಕಾರಣಿ ಅಲ್ಲ. ಅಭಿಮಾನಿಗಳನ್ನು ಮುಂದೆ ಬಿಟ್ಟು ಸಚಿವ ಸ್ಥಾನಕ್ಕಾಗಿ ಒತ್ತಡ ಹಾಕುವುದಿಲ್ಲ ಎಂದು ಹೇಳಿದರು. ಆ ಮೂಲಕ ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುತ್ತಿರುವವರಿಗೆ ಟಾಂಗ್ ನೀಡಿದರು. ಸಚಿವ ಸ್ಥಾನ ನೀಡುವುದು ಸಿಎಂ ಮತ್ತು ಹೈಕಮಾಂಡ್‍ಗೆ ಬಿಟ್ಟಿದ್ದು. ಉಪಚುನಾವಣೆಯಲ್ಲಿ ನಾನು ಪ್ರವಾಸ ಮಾಡಿದ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ. ಸೋಲು ಕಾಣುತ್ತಿದ್ದ ಕ್ಷೇತ್ರಗಳಲ್ಲಿ ಬಾರಿ ಗೆಲವು ಸಿಕ್ಕಿದೆ. ಪರಿಣಾಮ ಸ್ಥಿರ ಸರ್ಕಾರ ಲಭಿಸಿದ್ದು, ಇದನ್ನು ಪಕ್ಷ ಗಮನಿಸುತ್ತಿದೆ ಎಂದು ತಾವು ಸಚಿವ ಸ್ಥಾನದ ಆಕಾಂಕ್ಷಿ ಎಂಬುವುದನ್ನು ತಿಳಿಸಿದರು.

ವಾಜಪೇಯಿ ಸರ್ಕಾರದಲ್ಲಿ ನನ್ನನ್ನು ಕರೆದು ಕೇಂದ್ರಮಂತ್ರಿ ಮಾಡಿದ್ದರು. ನನಗೆ ಪಕ್ಷ ಹಾಗೂ ಸರ್ಕಾರ ಮುಖ್ಯ. ನಾವು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಿದರೆ ಸರ್ಕಾರಕ್ಕೆ ಅಸ್ಥಿರತೆ ಕಾಡುತ್ತೆ. ಸರ್ಕಾರದ ಹಿತದೃಷ್ಟಿಯಿಂದ ಮಂತ್ರಿ ಎಂದು ಕೇಳಲ್ಲ. ಸದ್ಯ ಸಮರ್ಥವಾಗಿ ಶಾಸಕ ಸ್ಥಾನ ನಿಭಾಯಿಸುತ್ತಿದ್ದೇವೆ ಎಂದರು.

ಇದೇ ವೇಳೆ ಶ್ರೀರಾಮುಲು ಪರ ಪರೋಕ್ಷವಾಗಿ ಬ್ಯಾಟ್ ಮಾಡಿದ ಯತ್ನಾಳ್, ಶ್ರೀರಾಮುಲು ಬಹಳ ವರ್ಷಗಳಿಂದ ಪಕ್ಷವನ್ನು ಕಟ್ಟಿದ್ದಾರೆ. ಅವರು ಡಿಸಿಎಂ ಆಗಬೇಕು ಎಂಬುವುದು ಅವರ ಅಭಿಮಾನಿಗಳ ಒತ್ತಾಯವಿದೆ. ಆದರೆ ಅವರು ಎಲ್ಲಿಯೂ ಡಿಸಿಎಂ ಸ್ಥಾನ ಬೇಕು ಎಂದಿಲ್ಲ. ಇನ್ನು 5-10 ಡಿಸಿಎಂ ಮಾಡಿದರೆ ಆ ಸ್ಥಾನಕ್ಕೆ ಗೌರವಿರುವುದಿಲ್ಲ. ಉಪಮುಖ್ಯಮಂತ್ರಿಗಳ ಗೌರವ ಕಡಿಮೆ ಆಗುವ ಕೆಲಸ ಮಾಡಬಾರದು. ನನಗೆ ಸಿಎಂ ಒಬ್ಬರು, ಉಳಿದವರು ಮಂತ್ರಿಗಳಿದ್ದರೆ ಸಾಕು ಎನಿಸುತ್ತಿದೆ ಎಂದು ಡಿಸಿಎಂ ಸ್ಥಾನಕ್ಕೆ ವಿರೋಧ ವ್ಯಕ್ತಪಡಿಸಿದರು.

ಇತ್ತ ರಾಷ್ಟ್ರೀಯ ಪೌರತ್ವ ಕಾಯಿದೆ (ಎನ್.ಆರ್.ಸಿ)ಯನ್ನು ವಿರೋಧಿಸಿ ಇಂದು ವಿಜಯಪುರ ಎಂಎಂಸಿ ಸಂಘಟನೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ನಗರದ ಜುಮ್ಮಾ ಮಸೀದಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಅಂಬೇಡ್ಕರ್ ಸರ್ಕಲ್ ನಲ್ಲಿ ಬಹಿರಂಗ ಸಭೆ ನಡೆಸಿ ಕೂಡಲೇ ಕಾಯ್ದೆಯನ್ನು ಕೈ ಬಿಡಲು ಆಗ್ರಹಿಸಿದರು. ಈ ವೇಳೆ ಮುಸ್ಲಿಂ ಧರ್ಮಗುರು ತನ್ವೀರ್ ಪೀರಾ ಮುಶ್ರಿಫ್, ಸಾಮಾಜಿಕ ಹೋರಾಟಗಾರರಾದ ಪೀಟರ್ ಅಲೆಕ್ಸಾಂಡರ್, ಭೀಮಶಿ ಕಲಾದಗಿ, ಅಡಿವೆಪ್ಪ ಸಾಲಗಲ, ಶ್ರೀನಾಥ ಪೂಜಾರಿ, ಜಿತೇಂದ್ರ ಕಾಂಬಳೆ ಸೇರಿ ಹಲವು ಮುಖಂಡರು ಸಭೆಯಲ್ಲಿ ಭಾಗಿ ಆಗಿದ್ದರು.

Click to comment

Leave a Reply

Your email address will not be published. Required fields are marked *