ಅಲಿಘಡ್: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಕಾಲ್ತುಳಿತ (Hathras Tragedy) ಸಂಭವಿಸಿ ಮೃತರಾದ ಕುಟುಂಬಸ್ಥರನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಭೇಟಿಯಾಗಿದ್ದಾರೆ. ಬಳಿಕ ಮೃತರ ಕುಟುಂಬಸ್ಥರಿಗೆ ಪರಿಹಾರದ ಮೊತ್ತ ಹೆಚ್ಚಿಸುವಂತೆ ಆಗ್ರಹಿಸಿದ್ದಾರೆ.
ಕುಟುಂಬಗಳನ್ನು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ನಾನು ಈ ವಿಚಾರದಲ್ಲಿ ರಾಜಕೀಯ ಮಾಡಲು ಬಯಸುವುದಿಲ್ಲ. ಆದರೆ ಆಡಳಿತದ ಕಡೆಯಿಂದ ಲೋಪಗಳಿವೆ ಮತ್ತು ಮೃತರ ಕುಟುಂಬಗಳು ಬಡವರಾಗಿದ್ದು, ಗರಿಷ್ಠ ಪರಿಹಾರವನ್ನು ನೀಡಬೇಕು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ಮುಕ್ತ ಮನಸ್ಸಿನಿಂದ ಪರಿಹಾರ ನೀಡುವಂತೆ ಕೋರುತ್ತೇನೆ ಎಂದರು.
Advertisement
Advertisement
ಈ ನಡುವೆ ಬೋಧಕ ಭೋಲೆ ಬಾಬಾ ಅವರ ಸತ್ಸಂಗದ ಸಂಘಟನಾ ಸಮಿತಿಯ ಆರು ಸದಸ್ಯರನ್ನು ಉತ್ತರ ಪ್ರದೇಶ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಬಂಧಿತರಲ್ಲಿ ಇಬ್ಬರು ಮಹಿಳೆಯರು ಸೇರಿದ್ದಾರೆ. ಎಫ್‌ಐಆರ್‌ನಲ್ಲಿ ಹೆಸರಿಸಲಾದ ಏಕೈಕ ಆರೋಪಿ ತಲೆಮರೆಸಿಕೊಂಡಿದ್ದು, ನಾರಾಯಣ ಸಕರ್ ಹರಿ ಮತ್ತು ಭೋಲೆ ಬಾಬಾ ಎಂದೂ ಕರೆಯಲ್ಪಡುವ ಸೂರಜ್‌ಪಾಲ್‌ನನ್ನು ತನಿಖೆಯ ಸಮಯದಲ್ಲಿ ಅಗತ್ಯವಿದ್ದಲ್ಲಿ ಪ್ರಶ್ನಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
Advertisement
ಪೊಲೀಸ್ ಮಹಾನಿರೀಕ್ಷಕ ಶಲಭ್ ಮಾಥುರ್ ಮಾತನಾಡಿ, ನಾಪತ್ತೆಯಾಗಿರುವ ಆರೋಪಿಯ ಹುಡುಕಾಟ ನಡೆಸಲಾಗುತ್ತಿದೆ. ಸುಳಿವು ನೀಡಿದರಿಗೆ 1 ಲಕ್ಷ ಬಹುಮಾನವನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದರು. ಬಂಧಿತರನ್ನು ರಾಮ್ ಲಡೈತೆ (50), ಉಪೇಂದ್ರ ಸಿಂಗ್ ಯಾದವ್ (62), ಮೇಘ್ ಸಿಂಗ್ (61), ಮುಖೇಶ್ ಕುಮಾರ್ (38), ಮತ್ತು ಮಹಿಳೆಯರಾದ ಮಂಜು ಯಾದವ್ (30) ಮತ್ತು ಮಂಜು ದೇವಿ (40) ಎಂದು ಗುರುತಿಸಲಾಗಿದೆ ಎಂದರು.
ಉತ್ತರ ಪ್ರದೇಶ ಸರ್ಕಾರವು ಹತ್ರಾಸ್ ದುರಂತದ ತನಿಖೆಗಾಗಿ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಮೂವರು ಸದಸ್ಯರ ನ್ಯಾಯಾಂಗ ಆಯೋಗವನ್ನು ರಚಿಸಿದೆ. ಕಾಲ್ತುಳಿತದ ಹಿಂದೆ ಪಿತೂರಿ ಇರುವ ಸಾಧ್ಯತೆಯನ್ನು ಪರಿಶೀಲಿಸುತ್ತದೆ. ಈಗಾಗಲೇ ಮೃತರಿಗೆ ನಾಲ್ಕು ಲಕ್ಷ ಮತ್ತು ಗಾಯಾಳುಗಳಿಗೆ ಒಂದು ಲಕ್ಷ ಪರಿಹಾರ ನೀಡಿದೆ.