ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲು ಇನ್ನೊಂದೆ ದಿನ ಬಾಕಿ ಇದೆ. ಆದರೆ ಕಾಂಗ್ರೆಸ್ ನಿಂದ ಸಚಿವರಾಗೋದು ಯಾರು ಅನ್ನೊ ಗೊಂದಲಕ್ಕೆ ಇನ್ನು ತೆರೆ ಬಿದ್ದಿಲ್ಲ. ಎಲ್ಲ ಗೊಂದಲಗಳಿಗೆ ಫುಲ್ ಸ್ಟಾಪ್ ಹಾಕೋ ನಿಟ್ಟಿನಲ್ಲಿ ಇಂದು ಕಾಂಗ್ರೆಸ್ ಹೈಕಮಾಂಡ್ ಜೊತೆ ರಾಜ್ಯ ಕಾಂಗ್ರೆಸ್ ನಾಯಕರು ಸಭೆ ನಡೆಸಲಿದ್ದಾರೆ. ಹೀಗಾಗಿ ಕಾಂಗ್ರೆಸ್ ಸಚಿವಕಾಂಕ್ಷಿಗಳು ದೆಹಲಿಯ ಹೈಕಮಾಂಡ್ ನತ್ತ ತಮ್ಮ ಚಿತ್ತ ನೆಟ್ಟಿದ್ದಾರೆ.
ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆ ಕಸರತ್ತು ಅಂತಿಮ ಘಟ್ಟ ತಲುಪಿದೆ. ಬುಧವಾರ ಪ್ರಮಾಣ ವಚನ ಕಾರ್ಯಕ್ರಮದ ಹಿನ್ನೆಲೆ ಯಾರಿಗೆಲ್ಲ ಕ್ಯಾಬಿನೆಟ್ ಭಾಗ್ಯ ಎಂಬುದು ಇಂದು ಅಂತ್ಯವಾಗಲೇಬೇಕಿದೆ. ಹೀಗಾಗಿ ಸಂಪುಟ ವಿಸ್ತರಣೆ ಕುರಿತು ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ದೆಹಲಿಯಲ್ಲಿ ಮಹತ್ವದ ಸಭೆ ನಡೆಸಲಿದ್ದಾರೆ. ವಿದೇಶ ಪ್ರವಾಸದಿಂದ ಸಂಜೆ ವಾಪಸ್ ಆಗಿರುವ ರಾಹುಲ್ ಗಾಂಧಿ ಸಂಪುಟ ಕಗ್ಗಂಟು ಬಗೆಹರಿಸಲು ರಾಜ್ಯ ನಾಯಕರಿಗೆ ದೆಹಲಿಗೆ ಬರುವಂತೆ ಬುಲಾವ್ ನೀಡಿದ್ದಾರೆ.
Advertisement
Advertisement
ಕಾಂಗ್ರೆಸ್ ಪಾಲಿಗೆ ಹಂಚಿಕೆ ಆಗಿರುವ 22 ಸ್ಥಾನ ಗಳ ಪೈಕಿ 18 ಸ್ಥಾನಗಳನ್ನು ಮಾತ್ರ ಭರ್ತಿ ಮಾಡವ ಚಿಂತನೆಯಲ್ಲಿ ಹೈಕಮಾಂಡ್ ಇದೆ. ಪ್ರಾದೇಶಿಕತೆ ಹಾಗೂ ಜಾತಿ ಲೆಕ್ಕಾಚಾರದಲ್ಲಿ ಖಾತೆ ಹಂಚಲು ಪ್ಲಾನ್ ಮಾಡಿರುವ ಹೈಕಮಾಂಡ್, ಕೆಲ ಹಿರಿಯ ನಾಯಕರಿಗೆ ಕ್ಯಾಬಿನೆಟ್ ನಿಂದ ಕೊಕ್ ಕೊಟ್ಟು, ಹೊಸ ಮುಖಗಳಿಗೆ ಆದ್ಯತೆ ಕೊಡುವ ಒಲವು ವ್ಯಕ್ತಪಡಿಸಿದೆ. ಈ ನಿಟ್ಟಿನಲ್ಲಿ ಸಾಧಕ ಬಾಧಕಗಳನ್ನು ಇಂದಿನ ಸಭೆಯಲ್ಲಿ ರಾಹುಲ್ ಗಾಂಧಿ ರಾಜ್ಯ ನಾಯಕರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ.
Advertisement
ಇಂದಿನ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಜಿ. ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಹಲವು ನಾಯಕರು ಭಾಗಿಯಾಗಲಿದ್ದಾರೆ. ಈಗಾಗಲೇ ಸುಮಾರು ಮೂವತ್ತು ಶಾಸಕರ ಹೆಸರು ಪಟ್ಟಿ ಮಾಡಿರುವ ರಾಜ್ಯ ಚುನಾವಣಾ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸೋಮವಾರ ರಾತ್ರಿ ರಾಹುಲ್ ಗಾಂಧಿ ಜೊತೆ ಮೊದಲ ಹಂತದಲ್ಲಿ ಮಾತುಕತೆ ನಡೆಸಿದ್ದಾರೆ. ಇಂದು ಮತ್ತೊಂದು ಹಂತದ ಮಾತುಕತೆ ನಡೆಸಿ ಒಮ್ಮತಕ್ಕೆ ಬರುವ ಸಾಧ್ಯತೆ ಇದೆ.
Advertisement
ರಾಜ್ಯ ಹಿರಿಯ ನಾಯಕರು ರಾಹುಲ್ ಭೇಟಿಗೂ ಮುನ್ನ ದೆಹಲಿ ತಲುಪಿರುವ ಸಚಿವಕ್ಷಾಂಶಿಗಳು, ಸಚಿವ ಸ್ಥಾನ ನೀಡುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ. ಮಾಜಿ ಸಚಿವರಾದ ರೋಷನ್ ಬೇಗ್, ಎಚ್.ಕೆ. ಪಾಟೀಲ್, ಈಶ್ವರ ಖಂಡ್ರೆ, ಶಾಸಕರಾದ ರಾಘವೇಂದ್ರ ಹಿಟ್ನಾಳ್, ಗಣೇಶ್ ಹುಕ್ಕೇರಿ, ರಾಜಶೇಖರ ಪಾಟೀಲ್ ಹುಮ್ನಾಬಾದ್, ವಿ. ಮುನಿಯಪ್ಪ, ಶ್ರೀನಿವಾಸ್ ಮಾನೆ, ಉಮೇಶ್ ಜಾಧವ್ ಮತ್ತು ಟಿ. ರಘುಮೂರ್ತಿ, ಭೀಮಾ ನಾಯ್ಕ ದೆಹಲಿಯಲ್ಲಿ ಲಾಬಿ ನಡೆಸುತ್ತಿದ್ದಾರೆ.
ಸಚಿವ ಸ್ಥಾನಕ್ಕಾಗಿ ಹಿರಿಯ ಮತ್ತು ಕಿರಿಯ ಶಾಸಕರು ಭರ್ಜರಿ ಪೈಪೊಟಿ ಆರಂಭಿಸಿದ್ದು, ಅಡಕತ್ತರಿಯಲ್ಲಿ ಸಿಲುಕಿರುವ ಹೈಕಮಾಂಡ್ ಅದ್ಯಾರಿಗೆ ಮಣೆ ಹಾಕುತ್ತೆ ಗೊತ್ತಿಲ್ಲ. ಇತ್ತ ನೂತನ ಸಚಿವರ ಪ್ರಮಾಣವಚನಕ್ಕೆ ರಾಜಭವನ ಸಿದ್ಧವಾಗಿದ್ದು ಅದ್ಯಾರ್ಯಾರಿಗೆ ಒಲೆಯಲಿದೆ ಕ್ಯಾಬಿನೆಟ್ ಭಾಗ್ಯ ಅಂತಾ ಕಾದು ನೋಡಬೇಕಿದೆ.