ಬೆಂಗಳೂರು: ಲೋಕಸಭಾ ಚುನಾವಣೆಯ ಫಲಿತಾಂಶಕ್ಕೂ ಮುನ್ನವೆ ರಾಜ್ಯ ರಾಜಕಾರಣದ ಬೆಳವಣಿಗೆಗಳ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಲೆಕೆಡಿಸಿಕೊಂಡಿದ್ದಾರಾ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ದೋಸ್ತಿಗಳ ವಾರ್ ಮತ್ತು ಲೋಕಸಭಾ ಚುನಾವಣಾ ಫಲಿತಾಂಶದ ಟೆನ್ಷನ್ ಹಿನ್ನೆಲೆಯಲ್ಲಿ ದೆಹಲಿಯಲ್ಲಿಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ದಿಢೀರ್ ಮೀಟಿಂಗ್ ಕರೆದಿದ್ದಾರೆ. ಈ ಮೂಲಕ ಫಲಿತಾಂಶದ ಜೊತೆ ಜೊತೆಗೆ ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಗಟ್ಟಿ ಮಾಡಲು ರಾಹುಲ್ ಗಾಂಧಿ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.
Advertisement
Advertisement
ಚುನಾವಣಾ ಫಲಿತಾಂಶಕ್ಕೆ ಇನ್ನೂ ನಾಲ್ಕು ದಿನ ಬಾಕಿ ಇರುವಾಗಲೇ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಕಾಂಗ್ರೆಸ್ ನಾಯಕರ ಸಭೆ ಕರೆದು ಅಚ್ಚರಿ ಮೂಡಿಸಿದೆ. ಇಂದು ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ರಾಜ್ಯ ನಾಯಕರಾದ ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ, ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಹಾಗೂ ಡಿಕೆಶಿ ಜೊತೆ ಸಭೆ ನಡೆಸಲಿದ್ದಾರೆ.
Advertisement
ಒಂದು ಕಡೆ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಮೈತ್ರಿ ಎಷ್ಟು ಸ್ಥಾನ ಗೆಲ್ಲಬಹುದು ಎಂಬ ಲೆಕ್ಕಾಚಾರದ ಬಗ್ಗೆಯೂ ಚರ್ಚೆ ನಡೆಯಲಿದೆ. ಅದಕ್ಕೂ ಮುಖ್ಯವಾಗಿ ರಾಜ್ಯ ಸಮ್ಮಿಶ್ರ ಸರ್ಕಾರದ ಗೊಂದಲಗಳನ್ನ ಬಗೆಹರಿಸಲು ರಾಹುಲ್ ಗಾಂಧಿ ಮುಂದಾಗಿದ್ದಾರೆ. ಲೋಕಸಭಾ ಚುನಾವಣೆ ದೃಷ್ಟಿಯಿಂದ ಮೈತ್ರಿ ಅನಿವಾರ್ಯ ಎಂದು ಹಿಂದೆಯೇ ಹೇಳಿದ್ದರು. ಆದರೆ ಫಲಿತಾಂಶಕ್ಕೂ ಮುನ್ನವೇ ಮೈತ್ರಿಯಲ್ಲಿ ಬಿರುಕಿನ ಸೂಚನೆಗಳು ಕಾಣತೊಡಗಿವೆ. ಇದರಿಂದ ಎಚ್ಚೆತ್ತ ರಾಹುಲ್ ಗಾಂಧಿ ಲೋಕ ಸಮರ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಮತ್ತು ಜೆಡಿಎಸ್‍ಗೆ ಕೈ ಕೊಟ್ಟ ಆಪಾದನೆ ಬರದಂತೆ ತಡೆಯಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತದೆ.
Advertisement
ಇತ್ತೀಚಿನ ಎಲ್ಲಾ ಬೆಳವಣಿಗೆಗಳ ಬಗ್ಗೆ ಪಕ್ಷದ ನಾಯಕರ ಜೊತೆ ರಾಹುಲ್ ಗಾಂಧಿ ಮುಕ್ತವಾಗಿ ಚರ್ಚೆ ಮಾಡಲಿದ್ದಾರೆ. ಅಗತ್ಯ ಬಿದ್ದಲ್ಲಿ ದೇವೇಗೌಡರ ಜೊತೆ ಮಾತುಕತೆ ನಡೆಸಲು ಮುಂದಾಗುವ ಸಾಧ್ಯತೆಗಳಿವೆ. ಹೀಗೆ ಲೋಕ ಲೆಕ್ಕಾಚಾರದ ಜೊತೆಗೆ ರಾಜ್ಯ ಸಮ್ಮಿಶ್ರ ಸರ್ಕಾರದ ಗೊಂದಲವನ್ನು ಸರಿಪಡಿಸಲು ರಾಹುಲ್ ಗಾಂಧಿ ಮುಂದಾಗಿದ್ದಾರೆ. ಆದರೆ ಲೋಕಸಭಾ ಚುನಾವಣಾ ಫಲಿತಾಂಶಕ್ಕೂ ಮುನ್ನವೇ ರಾಹುಲ್ ಗಾಂಧಿ ರಾಜ್ಯ ನಾಯಕರನ್ನ ಕರೆಸಿ ಮಾತುಕತೆಗೆ ಮುಂದಾಗಿದ್ದು ರಾಜ್ಯ ರಾಜಕಾರಣದ ಅಚ್ಚರಿಯ ಬೆಳವಣಿಗೆಯಾಗಿದೆ.