– ರಾಹುಲ್ ಮಿಂಚಿ, ರಾಹುಲ್ ಗಾಂಧಿ ಒಬ್ಬರೇನಾ?
– ಸಿಎಂ ಇಬ್ರಾಹಿಂ ನಾಲಗೆಯನ್ನ ಗಟಾರದಲ್ಲಿರೋ ಹಂದಿಗೆ ಹೋಲಿಸ್ತೀರಾ?
ಮಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭಾರತೀಯರು ಹೌದಾ, ಅಲ್ವಾ? ರಾಹುಲ್ ಮಿಂಚಿ ಹಾಗೂ ರಾಹುಲ್ ಗಾಂಧಿ ಒಬ್ಬರೇನಾ ಅಂತ ಕಾಂಗ್ರೆಸ್ ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಒತ್ತಾಯಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಭಾರತದೊಳಗೆ ರಾಹುಲ್ ಗಾಂಧಿ, ಗಡಿ ಹೊರಗೆ ರಾಹುಲ್ ಮಿಂಚಿ ಆಗುತ್ತಾರಾ? ಅವರು ಭಾರತದವರು ಹೌದಾ ಅಲ್ವಾ ಎನ್ನುವ ಅಕ್ಷೇಪಣೆಗೆ ಉತ್ತರ ಕೊಡಲು ಕಾಲಾವಕಾಶ ಯಾಕೆ ಬೇಕು? ರಾಹುಲ್ ಗಾಂಧಿ ಅವರಲ್ಲಿ ನಾನು ಭಾರತೀಯನಾ ಎನ್ನುವ ವಿಚಾರದ ಬಗ್ಗೆ ಗೊಂದಲವಿದೆ ಎಂದು ಹೇಳಿದರು.
ಶ್ರೀಲಂಕಾದಲ್ಲಿ ನಡೆದ ಉಗ್ರರ ಅಟ್ಟಹಾಸವನ್ನು ಬಿಜೆಪಿ ಖಂಡಿಸುತ್ತದೆ. ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತು ಎಸೆಯಬೇಕಾಗಿದೆ. ಪ್ರಧಾನಿ ಮೋದಿ ಅವರಿಂದ ದೇಶ ಸುಭದ್ರವಾಗಿದೆ. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ್ರೋಹಿಗಳಿಗೆ ನಿಯಂತ್ರಣ ಇಲ್ಲದಂತಾಗುತ್ತದೆ. ಕಾಂಗ್ರೆಸ್ ಸೈನ್ಯದ ಪರಮಾಧಿಕಾರ ಹಿಂಪಡೆಯುವ ಭರವಸೆ ನೀಡಿದ್ದಾರೆ. ಹೀಗಾಗಿ ಕಾಂಗ್ರೆಸ್ ದೇಶದ ಜನರ ಎದುರು ಕ್ಷಮೆ ಕೇಳಿ ಪ್ರಣಾಳಿಕೆಯಲ್ಲಿರುವ ಈ ಅಂಶವನ್ನು ಹಿಂಪಡೆಯಬೇಕು. ಭಯೋತ್ಪಾದಕ ದಾಳಿಗೆ ಬೀದಿಗಿಳಿಯದ ಮೈತ್ರಿ ಸರ್ಕಾರ ಐಟಿ ದಾಳಿಗೆ ಬೀದಿಗಿಳಿದಿದೆ ಎಂದು ವಾಗ್ದಾಳಿ ನಡೆಸಿದರು.
ತಾಯಿ ಗಂಡ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿ.ಟಿ.ರವಿ ಅವರು, ಆಡು ಭಾಷೆಯ ವಾಕ್ಯವನ್ನು ಬಳಸಿದ್ದೇನೆ. ಉಂಡ ಮನೆಗೆ ದ್ರೋಹ ಎನ್ನುವ ಅರ್ಥದಲ್ಲಿ ಹೇಳಿದ್ದೆ. ಸಚಿವೆ ಜಯಮಾಲಾ ಅವರು ನನ್ನ ನಾಲಿಗೆಯನ್ನು ಚಪ್ಪಲಿಗೆ ಹೋಲಿಸಿದ್ದಾರೆ. ಪ್ರತಿದಿನ ಹೊಲಸು ಮಾತನಾಡುವ ಕಾಂಗ್ರೆಸ್ ನಾಯಕರ ನಾಲಿಗೆ ಹಾಗಾದರೆ ಏನು? ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ನಾಲಗೆಯನ್ನು ಯಾವುದಕ್ಕೆ ಹೋಲಿಸುತ್ತೀರಿ? ಗಟಾರದಲ್ಲಿರುವ ಹಂದಿಗೆ ಹೋಲಿಸುತ್ತೀರಾ? ಅಥವಾ ಟಾಯ್ಲೆಟ್‍ನಲ್ಲಿರುವ ಹುಳಕ್ಕೆ ಹೋಲಿಸುತ್ತೀರಾ ಎಂದು ಪ್ರಶ್ನಿಸಿ ಕಾಂಗ್ರೆಸ್ ವಿರುದ್ಧ ಗುಡುಗಿದರು.
ಸಚಿವೆ ಜಯಮಾಲಾ ಅವರು ನನ್ನ ನಾಲಿಗೆಗೆ ಬಜೆ ತಿಕ್ಕಿಸಿಲ್ಲ ಅಂತ ಹೇಳಿದ್ದಾರೆ. ಸರ್.ಎಂ.ವಿಶ್ವೇಶ್ವರಯ್ಯ, ಕನಕದಾಸ ಹೆಸರು ಹೇಳಲಿಕ್ಕೆ ಬಾರದ ರಾಹುಲ್ ನಾಲಿಗೆಗೆ ಬಜೆ ತಿಕ್ಕಿಸಿ ಎಂದು ಕಿಡಿಕಾರಿದರು.
ಮೈತ್ರಿ ನಾಯಕರೇ ಸರ್ಕಾರಕ್ಕೆ ಟೈಂ ಬಾಂಬ್ ಫಿಕ್ಸ್ ಮಾಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬೆಂಬಲಿಗರು ಈ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿದ್ದಾರೆ. ತುಮಕೂರು, ಹಾಸನ, ಮಂಡ್ಯ, ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಸರ್ಕಾರ ಬಿದ್ದರೆ ಅದಕ್ಕೆ ಯಾರು ಹೊಣೆ ಎನ್ನುವುದು ಗೊತ್ತಾಗುತ್ತಿದೆ. ರಾಜ್ಯದ 23 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವುದು ಖಚಿತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.