ಬೆಂಗಳೂರು: ನನಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡೋದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಿರ್ಧರಿಸುತ್ತಾರೆ ಅಂತಾ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸಚಿವ ಖಾತೆಗಳ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳೆಲ್ಲಾ ಸುಳ್ಳು. ಇನ್ನೂ ಅದರ ಬಗ್ಗೆ ಯಾವುದೇ ಚರ್ಚೆಗಳು ಸಹ ನಡೆದಿಲ್ಲ. ಎಲ್ಲ ಶಾಸಕರು ಬೆಂಗಳೂರಿನಲ್ಲಿಯೇ ಇರಲಿದ್ದು, ನಾಳೆ ನಡೆಯುವ ಸಭೆಯಲ್ಲಿ ಸಚಿವ ಸ್ಥಾನದ ಬಗ್ಗೆ ಚರ್ಚೆಗಳು ನಡೆಯಲಿವೆ. ಸೋಮವಾರ ದೆಹಲಿಯಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಜೊತೆಯಲ್ಲಿ ಚರ್ಚೆಗಳು ನಡೆದ ಬಳಿಕವೇ ಡಿಸಿಎಂ ಸ್ಥಾನ ಮತ್ತು ಕುಮಾರಸ್ವಾಮಿ ಜೊತೆ ಯಾರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬುದು ಗೊತ್ತಾಗಲಿದೆ ಅಂತಾ ಸ್ಪಷ್ಟನೆ ನೀಡಿದ್ದಾರೆ.
ಆರ್.ಆರ್.ನಗರ ಮತ್ತು ಜಯನಗರಗಳಲ್ಲಿ ನಾವು ಈಗಾಗಲೇ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದ್ದೇವೆ. ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಬೇಕೋ ಅಥವಾ ಬೇಡ್ವಾ ಎಂಬುವು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ತಗೆದುಕೊಳ್ಳಲಿದೆ ಅಂತಾ ಹೇಳಿದ್ರು.
ಈಗಾಗಲೇ ಒಕ್ಕಲಿಗ ಸಮುದಾಯದ ಕುಮಾರಸ್ವಾಮಿ ಸಿಎಂ ಆಗುತ್ತಿದ್ದಾರೆ. ಹೀಗಾಗಿ ಲಿಂಗಾಯತ ಸಮುದಾಯಕ್ಕೆ ಡಿಸಿಎಂ ಪಟ್ಟ ಕೊಡಲೇಬೇಕು. ಇಲ್ಲ ಎಂದರೆ ಕಾಂಗ್ರೆಸ್ ನಿಂದ ಲಿಂಗಾಯತರು ಶಾಶ್ವತವಾಗಿ ದೂರ ಆಗುತ್ತಾರೆ. ಜೊತೆಗೆ ಬಿ.ಎಸ್ ಯಡಿಯೂರಪ್ಪರನ್ನು ಇಳಿಸಿದ ಅಪಕೀರ್ತಿಗೆ ಕಾಂಗ್ರೆಸ್ ತುತ್ತಾಗುತ್ತೆ ಎಂದು ಲಿಂಗಾಯುತ ಸಮುದಾಯ ಹೇಳುತ್ತಿದೆ.
ಅಪಕೀರ್ತಿಯನ್ನು ಸರಿದೂಗಿಸಲು ಶಾಮನೂರು ಶಿವಶಂಕರಪ್ಪ ಅಥವಾ ಎಂಬಿ ಪಾಟೀಲ್ ಇಬ್ಬರಲ್ಲಿ ಒಬ್ಬರನ್ನ ಡಿಸಿಎಂ ಮಾಡಬೇಕು. ದಲಿತ ಸಮುದಾಯದ ಜೊತೆಗೆ ಲಿಂಗಾಯತ ಸಮುದಾಯದ ಒಬ್ಬರನ್ನು ಉಪಮುಖ್ಯಮಂತ್ರಿ ಮಾಡಿ ಎಂದು ಕಾಂಗ್ರೆಸ್ ಹೈಕಮಾಂಡ್ ಮುಂದೆ ಲಿಂಗಾಯತ ಸಮುದಾಯ ಬೇಡಿಕೆ ಇಟ್ಟಿದೆ ಎಂದು ಮಾಹಿತಿ ಲಭ್ಯವಾಗಿದೆ.