ತಿಂಗಳೊಳಗೆ ಸರ್ಕಾರಿ ಬಂಗಲೆ ತೊರೆಯುವಂತೆ ರಾಹುಲ್ ಗಾಂಧಿಗೆ ನೋಟಿಸ್

Public TV
2 Min Read
RAHUL GANDI

ನವದೆಹಲಿ: ಲೋಕಸಭಾ ಸದಸ್ಯತ್ವ ರದ್ದಾದ ಬೆನ್ನಲ್ಲೇ ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಗೆ ಮತ್ತೊಂದು ಶಾಕ್ ಎದುರಾಗಿದೆ.

ಹೌದು. ತಿಂಗಳೊಳಗೆ ದೆಹಲಿಯಲ್ಲಿರುವ ತುಘಲಕ್ ಲಾನೆ (Tughlaq Lane bungalow) ಬಂಗಲೆಯನ್ನು ತೊರೆಯುವಂತೆ ಲೋಕಸಭಾ ವಸತಿ ಸಮಿತಿ ನೋಟಿಸ್ ನೀಡಿದೆ. ಸಂಸದರಿಗೆ ನೀಡಲಾಗುವ ವಸತಿ ಗೃಹದ ಸೌಲಭ್ಯವನ್ನು ಹಿಂಪಡೆಯಲು ನಿರ್ಧರಿಸಿ ದಿಲ್ಲಿಯ ಬಂಗಲೆಯನ್ನು ಒಂದು ತಿಂಗಳೊಳಗೆ ತೆರವುಗೊಳಿಸುವಂತೆ ನೋಟಿಸ್‍ನಲ್ಲಿ ತಿಳಿಸಲಾಗಿದೆ. ಆದರೆ ಇಂತಹ ಯಾವುದೇ ನೋಟಿಸ್ ಬಂದಿಲ್ಲ ಎಂದು ರಾಹುಲ್ ಗಾಂಧಿ ತಂಡ ತಿಳಿಸಿದೆ.

ಮಾನನಷ್ಟ ಪ್ರಕರಣ ಸಂಬಂಧ ಸೂರತ್ ಕೋರ್ಟ್ (Surat Court) 2 ವರ್ಷ ಜೈಲು ಶಿಕ್ಷೆ ವಿಧಿಸಿದ ಬೆನ್ನಲ್ಲೇ ಲೋಕಸಭೆ ಸಚಿವಾಲಯದ ಕಾರ್ಯದರ್ಶಿ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿತ್ತು. ಇದನ್ನೂ ಓದಿ: ರಾಹುಲ್‌ ಗಾಂಧಿ ಅಜ್ಜಿ ಇಂದಿರಾ ಗಾಂಧಿ ಸಹ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದರು..!

2019ರ ಲೋಕಸಭಾ ಚುನಾವಣೆಯ ವೇಳೆ ನರೇಂದ್ರ ಮೋದಿಯವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿಗೆ ಸೂರತ್ ಕೋರ್ಟ್ ಗುರುವಾರ ಬೆಳಗ್ಗೆ 2 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಶಿಕ್ಷೆ ವಿಧಿಸಿದ ಬೆನ್ನಲ್ಲೇ ರಾಹುಲ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದು ಸೂರತ್ ಕೋರ್ಟ್ 30 ದಿನಗಳ ಜಾಮೀನು ಮಂಜೂರು ಮಾಡಿತ್ತು.

ಕಳೆದ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕರ್ನಾಟಕದ ಕೋಲಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಓರ್ವ ಕಳ್ಳ ಎಂದು ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ ಇವರೆಲ್ಲರ ಸರ್‍ನೇಮ್ ಒಂದೇ ಆಗಿದ್ದು, ಈ ಎಲ್ಲಾ ಕಳ್ಳರು ದೇಶವನ್ನು ಲೂಟಿ ಮಾಡಿದ್ದಾರೆ ಎಂದು ರಾಹುಲ್ ತಮ್ಮ ಭಾಷಣದಲ್ಲಿ ಹರಿಹಾಯ್ದಿದ್ದರು. ಈ ಹೇಳಿಕೆಯನ್ನು ಆಧರಿಸಿ ಬಿಜೆಪಿ ಶಾಸಕ ಮತ್ತು ಗುಜರಾತ್ ಮಾಜಿ ಸಚಿವ ಪೂರ್ಣೇಶ್ ಮೋದಿ ಅವರು ಕ್ರಿಮಿನಲ್ ಮಾನಹಾನಿ ದೂರು ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಸೂರತ್ ಕೋರ್ಟ್ ರಾಹುಲ್ ದೋಷಿ ಎಂದು ತೀರ್ಪು ನೀಡಿ 2 ವರ್ಷ ಜೈಲು ಶಿಕ್ಷೆಯನ್ನು ಪ್ರಕಟಿಸಿತ್ತು.

Share This Article