ನವದೆಹಲಿ: ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರ ರಾಜೀನಾಮೆಯ ಅನಿಶ್ಚಿತತೆ ಮುಂದುವರಿದಿರುವ ನಡುವೆಯೇ ಪಕ್ಷದ ಕಾರ್ಯಕರ್ತರು ತೀರ್ಮಾನವನ್ನು ಹಿಂಪಡೆಯುವಂತೆ ಕೋರಿ ರಾಹುಲ್ ನಿವಾಸದ ಎದುರು ಪ್ರತಿಭಟನೆ ನಡೆಸಿದ್ದಾರೆ.
ನವದೆಹಲಿಯ ರಾಹುಲ್ ಗಾಂಧಿ ನಿವಾಸ ಎದುರು ಧರಣಿ ಕುಳಿತ್ತಿದ್ದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದರು. ದೆಹಲಿ ಕಾಂಗ್ರೆಸ್ ನಾಯಕ ವಿಜಯ್ ಜತನ್, ಹಿರಿಯ ಮುಖಂಡ ಜಗದೀಶ್ ಟೈಟ್ಲರ್ ಸೇರಿದಂತೆ ಹಲವು ಕಾರ್ಯಕರ್ತರು ತುಘಲಕ್ ಲೇನ್ ನಲ್ಲಿರುವ ರಾಹುಲ್ ನಿವಾಸದ ಎದುರು ನಡೆದ ಧರಣಿಯಲ್ಲಿ ಭಾಗವಹಿಸಿದ್ದರು. ಈ ವೇಳೆ ರಾಹುಲ್ ರಾಜೀನಾಮೆ ತೀರ್ಮಾನದಿಂದ ಹಿಂದಕ್ಕೆ ಸರಿದು ಪಕ್ಷದ ನಾಯಕತ್ವನ್ನು ಮುಂದುವರಿಸಬೇಕು ಎಂದು ಅವರು ಮನವಿ ಮಾಡಿದರು.
Advertisement
Advertisement
ಲೋಕಸಭಾ ಚುನಾವಣೆಯಲ್ಲಿ ಸೋಲುಂಡ ಬಳಿಕ ಪಕ್ಷ ಹಿರಿಯ ನಾಯಕರನ್ನು ಭೇಟಿ ಮಾಡಿದ್ದ ರಾಹುಲ್ ಗಾಂಧಿ ಪಕ್ಷದ ಜವಾಬ್ದಾರಿ ವಹಿಸಿಕೊಳ್ಳಲು ನೆಹರು ಕುಟುಂಬ ಹೊರತು ಪಡಿಸಿ ಸಮರ್ಥ ನಾಯಕರನ್ನು ಆಯ್ಕೆ ಮಾಡುವಂತೆ ಸೂಚನೆ ನೀಡಿದ್ದರು. ಆ ಬಳಿಕ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ದೂರ ಉಳಿದಿದ್ದಾರೆ.
Advertisement
ರಾಹುಲ್ ಅವರ ಈ ನಿರ್ಧಾರದಿಂದ ಹಿಂದೆ ಸರಿಯುವಂತೆ ಕಾಂಗ್ರೆಸ್‍ನ ಹಿರಿಯ ನಾಯಕರು ಪ್ರಯತ್ನ ನಡೆಸಿದ್ದು, ಆದರೆ ಮಂಗಳವಾರದಂದು ರಾಹುಲ್, ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಸೇರಿದಂತೆ ಕೆಲ ಹಿರಿಯ ನಾಯಕರನ್ನಷ್ಟೇ ಭೇಟಿ ಮಾಡಿದ್ದರು.
Advertisement
Delhi: Jagdish Tytler and other Congress leaders and supporters present outside the residence of Congress President Rahul Gandhi. pic.twitter.com/DzX3ITpi2X
— ANI (@ANI) May 29, 2019
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ರಾಹುಲ್ ಭೇಟಿಗೆ ಆಗಮಿಸಿದ್ದರು. ಆದರೆ ಈ ವೇಳೆ ಅವರು ಪ್ರಿಯಾಂಕರನ್ನು ಮಾತ್ರ ಭೇಟಿ ಮಾಡಿ ಹಿಂದಿರುಗಿದ್ದರು.
ರಾಜಸ್ಥಾನ ಬಿಕ್ಕಟ್ಟು: ಇದರ ನಡುವೆಯೇ ರಾಜಸ್ಥಾನದ ಡಿಸಿಎಂ ಆಗಿರುವ ಸಚಿನ್ ಪೈಲಟ್ ರಾಹುಲ್ ರಾಜೀನಾಮೆ ನಿರ್ಧಾರದಿಂದ ಪಕ್ಷ ತೊರೆಯುವ ತೀರ್ಮಾನ ಮಾಡಿದ್ದಾರೆ ಎಂಬ ಸುದ್ದಿಯಾಗಿದೆ. 2014 ರಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಚಿನ್ ಪೈಲಟ್ ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಹುದ್ದೆ ಪಡೆದಿದ್ದರು. ಅಲ್ಲದೇ ಕಳೆದ ವರ್ಷದ ವಿಧಾನಸಭಾ ಚುನಾವಣೆಯ ಬಳಿಕ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರದಲ್ಲಿ ಡಿಸಿಎಂ ಸ್ಥಾನವನ್ನು ಪಡೆದಿದ್ದರು.
ರಾಹುಲ್ ಗಾಂಧಿ ಅವರೇ ಪಕ್ಷದ ಜವಾಬ್ದಾರಿಯಿಂದ ವಿಮುಖರಾಗುತ್ತಿರುವ ಕಾರಣ ಪೈಲಟ್ ಪಕ್ಷ ತೊರೆದು ಸ್ವತಂತ್ರ್ಯವಾಗಿ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ ಎನ್ನಲಾಗಿದೆ. ಸಚಿನ್ ಅವರಿಗೆ ಪಕ್ಷೇತರರು ಹಾಗೂ ಕೆಲ ಬಿಜೆಪಿ ಶಾಸಕರ ಬೆಂಬಲ ಲಭಿಸುವ ಸಾಧ್ಯತೆ ಇದ್ದು, ಹೊಸ ಸರ್ಕಾರ ರಚನೆಗೆ ಮುಂದಾಗುತ್ತಾರಾ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ರಾಜಸ್ಥಾನ ವಿಧಾನ ಸಭೆ 200 ಶಾಸಕರ ಬಲವನ್ನು ಹೊಂದಿದ್ದು, ಕಾಂಗ್ರೆಸ್ 100, ಬಿಜೆಪಿ 73, ಬಿಎಸ್‍ಪಿ 6, ಆರ್ ಎಲ್‍ಪಿ 3, ಸಿಪಿಎಂ 2, ಬಿಟಿಪಿ 2 , ಆರ್ ಎಲ್‍ಡಿ 1 ಮತ್ತು 13 ಪಕ್ಷೇತರ ಶಾಸಕರ ಬಲ ಹೊಂದಿವೆ. ಸದ್ಯ ಅಶೋಕ್ ಗೆಹ್ಲೋಟ್ ಸರ್ಕಾರಕ್ಕೆ 6 ಬಿಎಸ್‍ಪಿ ಮತ್ತು 12 ಪಕ್ಷೇತರರ ಬೆಂಬಲವಿದೆ. ಆದರೆ ಸೋಮವಾರವಷ್ಟೇ ಬಿಎಸ್‍ಪಿ ಶಾಸಕರು ರಾಜ್ಯಪಾಲರನ್ನು ಭೇಟಿ ಮಾಡಲು ಪ್ರಯತ್ನ ನಡೆಸಿದ ಕಾರಣ ಸರ್ಕಾರದ ಮೇಲೆ ಒತ್ತಡ ಹೆಚ್ಚಿದೆ. 2019 ಲೋಕಸಭಾ ಚುನಾವಣೆಯಲ್ಲಿ ಸಚಿನ್ ಪೈಲಟ್ ಅವರಿಗೆ ಪಕ್ಷದ ಜವಾಬ್ದಾರಿಯನ್ನ ವಹಿಸಲಾಗಿತ್ತು. ಆದರೆ ಅವರು ಮೋದಿ ಅಲೆಯನ್ನು ತಡೆಯಲು ಸಾಧ್ಯವಾಗದೇ 25 ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಸೋಲು ಕಂಡಿತ್ತು. ಆ ಬಳಿಕ ಪಕ್ಷದಲ್ಲಿ ಅಸಮಾಧಾನ ಮೂಡಿತ್ತು.