ಲಕ್ನೋ: ಕುತೂಹಲ ಮೂಡಿಸಿದ್ದ ಉತ್ತರ ಪ್ರದೇಶದ ರಾಯ್‌ಬರೇಲಿ (Raebareli) ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಹುಲ್ ಗಾಂಧಿ (Rahul Gandi) ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ.
ಅವರ ಜೊತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಅವರ ಪತಿ ರಾಬರ್ಟ್ ವಾದ್ರಾ ಅವರ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ಮಾಡಿದರು. ಇದನ್ನೂ ಓದಿ: ಅಮೇಥಿಯಲ್ಲಿ ಗಾಂಧಿ ಕುಟುಂಬಯೇತರ ಅಭ್ಯರ್ಥಿ – ಯಾರಿದು ಕಿಶೋರಿ ಲಾಲ್ ಶರ್ಮಾ?
ಎರಡನೇ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ರೋಡ್ ಶೋ ನಡೆಸಿದ್ದರು. ಈ ಮೊದಲು ಕೇರಳದ ವಯನಾಡ್‌ನಿಂದ ಸ್ಪರ್ಧಿಸಿದ್ದರು.
ಅಮೇಥಿ ಮತ್ತು ರಾಯ್‌ಬರೇಲಿ ಕ್ಷೇತ್ರಗಳ ವಿಚಾರವಾಗಿ ಇಲ್ಲಿವರೆಗೆ ಇದ್ದ ಗೊಂದಲ ಹಾಗೂ ಕುತೂಹಲಕ್ಕೆ ಅಭ್ಯರ್ಥಿಗಳ ಘೋಷಣೆಯೊಂದಿಗೆ ತೆರೆ ಬಿದ್ದಿದೆ. ಅಮೇಥಿಯಿಂದ ಬಿಜೆಪಿ ಹಾಲಿ ಸಂಸದೆ ಸ್ಮೃತಿ ಇರಾನಿ ವಿರುದ್ಧ ಕಾಂಗ್ರೆಸ್ ಕಿಶೋರಿ ಲಾಲ್ ಶರ್ಮಾ ಅವರನ್ನು ಕಣಕ್ಕಿಳಿಸಿದೆ. ಇದನ್ನೂ ಓದಿ: ನೇಹಾ ಹತ್ಯೆ ನಿಜವಾಗಿಯೂ ಲವ್ ಜಿಹಾದ್ ಕೇಸ್, ನಾವು ಬಣ್ಣ ಕಟ್ಟಿಲ್ಲ: ಅಮಿತ್ ಶಾ
ಇತ್ತ ಸೋನಿಯಾ ಗಾಂಧಿ ಪ್ರತಿನಿಧಿಸುತ್ತಿದ್ದ ರಾಯ್‌ಬರೇಲಿ ಕ್ಷೇತ್ರದಿಂದ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸಿದ್ದಾರೆ. ರಾಯ್‌ಬರೇಲಿ ಕಾಂಗ್ರೆಸ್‌ಗೆ ಅತ್ಯಂತ ಸುರಕ್ಷಿತ ಕ್ಷೇತ್ರ. ಇದುವರೆಗೆ ಸಾಕ್ಷಿಯಾಗಿರುವ 20 ಚುನಾವಣೆಗಳಲ್ಲಿ ಕಾಂಗ್ರೆಸ್ 17 ಬಾರಿ ಗೆದ್ದಿದೆ.
ಕಳೆದ ಎರಡು ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಸೋನಿಯಾ ಗಾಂಧಿ ಗೆದ್ದು ಪಾರ್ಲಿಮೆಂಟ್ ಪ್ರವೇಶಿಸಿದ್ದರು. 2014 ಮತ್ತು 2019 ರಲ್ಲಿ ಬಿಜೆಪಿ ಬೆಂಬಲದ ಅಲೆ ಇದ್ದರೂ ಈ ಸ್ಥಾನ ಕಾಂಗ್ರೆಸ್‌ನಲ್ಲೇ ಉಳಿಯಿತು. ಸೋನಿಯಾ ಗಾಂಧಿ ಈಗ ರಾಜ್ಯಸಭೆಗೆ ತೆರಳಿದ್ದು, ಅವರ ಪುತ್ರ ರಾಹುಲ್ ಗಾಂಧಿ ಕ್ಷೇತ್ರದಿಂದ ಸ್ಪರ್ಧೆಗಿಳಿದಿದ್ದಾರೆ. 2019 ರ ಚುನಾವಣೆಯಲ್ಲಿ ಎರಡನೇ ಸ್ಥಾನ ಪಡೆದಿದ್ದ ಬಿಜೆಪಿಯ ದಿನೇಶ್ ಪ್ರತಾಪ್ ಸಿಂಗ್ ವಿರುದ್ಧ ರಾಹುಲ್ ಗಾಂಧಿ ಸ್ಪರ್ಧಿಸಿದ್ದಾರೆ.