ಬೆಂಗಳೂರು: ಸಿಲಿಕಾನ್ ಸಿಟಿಯನ್ನು ದೇಶದ ಎರಡನೇ ರಾಜಧಾನಿಯಾಗಿ ಮಾಡುವ ಕುರಿತು ಚರ್ಚೆ ನಡೆಸಿ, ಬಳಿಕ ತಮ್ಮ ಪ್ರಣಾಳಿಕೆಯಲ್ಲಿ ಸೇರಿಸುವ ಕುರಿತು ಚಿಂತನೆ ನಡೆಸುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ.
ವಿಧಾನಸಭಾ ಚುನಾವಣೆ ಪ್ರಚಾರದ ಭಾಗವಾಗಿ ರಾಜ್ಯ ಪ್ರವಾಸ ಕೈಗೊಂಡಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಉದ್ಯಮಿಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ರಾಜ್ಯದ ಉದ್ಯಮಿಯೊಬ್ಬರು ಬೆಂಗಳೂರು ದೇಶದ ಎರಡನೇ ರಾಜಧಾನಿ ಮಾಡುವ ಕುರಿತು ಕೇಳಿದ ಪ್ರಶ್ನೆಗೆ ಕರ್ನಾಟಕ ರಾಜ್ಯದ ಬಜೆಟ್‍ನಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲು ಅವಕಾಶ ಇದೆ. ಆದರೆ ಈ ಕುರಿತು ಚರ್ಚೆ ನಡೆಸಿ ಸಾಧ್ಯವಾದರೆ ಪ್ರಣಾಳಿಕೆಯಲ್ಲಿ ಸೇರಿಸುವುದಾಗಿ ತಿಳಿಸಿದರು.
Advertisement
Advertisement
ಈ ವೇಳೆ ಕೇಂದ್ರ ಸರ್ಕಾರದ ಯೋಜನೆಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ಸರ್ಕಾರದ ಬುಲೆಟ್ ರೈಲು ಯೋಜನೆ ವಿಫಲವಾಗಿದೆ. ಈ ಯೋಜನೆಗೆ ಸಾಕಷ್ಟು ಹಣ ಖರ್ಚು ಮಾಡಲಾಗಿದೆ. ಆದರೆ ಹಣವನ್ನು ರೈಲ್ವೇ ಇಲಾಖೆ ಸುಧಾರಣೆಗೆ ಬಳಸಬಹುದಿತ್ತು. ಯಾವುದೇ ಯೋಜನೆಗಳನ್ನು ರೂಪಿಸುವಾಗ ಇಂಥ ಲೋಪಗಳಾಗಬಾರದು. ಆದರೆ ನಾನು ಕೇಂದ್ರದ ಬುಲೆಟ್ ರೈಲು ಯೋಜನೆ ವಿರುದ್ಧ ಇಲ್ಲ. ವ್ಯವಸ್ಥಿತ ಮತ್ತು ಯೋಜಿತ ರೀತಿಯಲ್ಲಿ ಬುಲೆಟ್ ರೈಲು ಯೋಜನೆ ಜಾರಿಗೊಳಿಸಬೇಕಿತ್ತು. ಆದರೆ ಈ ಯೋಜನೆ ಕ್ರಮಬದ್ಧವಾಗಿಲ್ಲ. ಸದ್ಯ ಬುಲೆಟ್ ರೈಲು ಒಂದು ಶೋ ಪೀಸ್ ಥರ ಆಗಿದೆ ಎಂದರು.
Advertisement
ಮುಂದಿನ ಹತ್ತು ಹದಿನೈದು ವರ್ಷಗಳಲ್ಲಿ ಉದ್ಯೋಗ ಸೃಷ್ಟಿ ಮಾಡುವುದು ಸರ್ಕಾರಗಳ ಆದ್ಯತೆ ಆಗಬೇಕಿದೆ. ಅಭಿವೃದ್ಧಿಯ ಜೊತೆಗೆ ಉದ್ಯೋಗ ಸೃಷ್ಟಿಯೂ ಮುಖ್ಯವಾಗುತ್ತದೆ. ಚೀನಾ ಜಗತ್ತಿನಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಮುಂದೆ ಇದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಉದ್ಯೋಗ ಸೃಷ್ಟಿಗೆ ಒತ್ತು ಕೊಟ್ಟಿದೆ ಎಂದರು.
Advertisement
ಇದೇ ವೇಳೆ ಪೆಟ್ರೋಲ್, ಡೀಸೆಲ್ ಮೇಲೆ ಜಿಎಸ್‍ಟಿ ತೆರಿಗೆ ಕುರಿತ ಪ್ರಶ್ನೆಗೆ ಉತ್ತರಿಸಿ ಜಿಎಸ್‍ಟಿ `ಒಂದು ಗಬ್ಬರ್ ಸಿಂಗ್ ತೆರಿಗೆ’ ಎಂದು ಮತ್ತೊಮ್ಮೆ ಹೇಳಿದರು. ತಾವು ಅಧಿಕಾರಕ್ಕೆ ಬಂದರೆ ಜಿಎಸ್‍ಟಿ ತೆರಿಗೆ ವಿಧಾನವನ್ನು ಸರಳೀಕರಣಗೊಳಿಸುತ್ತೇವೆ. ಸದ್ಯ ಜಗತ್ತಿನ ಸಂಕೀರ್ಣ ತೆರಿಗೆಗಳಲ್ಲಿ ಜಿಎಸ್‍ಟಿ ಒಂದಾಗಿದೆ. ಜಿಎಎಸ್‍ಟಿಯಲ್ಲಿ ಐದು ಹಂತಗಳ ತೆರಿಗೆ ಇದೆ. ಇಂಥ ವ್ಯವಸ್ಥೆಯಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವಿದೆ. ನಾವು ಒಂದೇ ಹಂತದ ತೆರಿಗೆ ಒಳಗೊಂಡ ಜಿಎಎಸ್‍ಟಿ ಸೇವೆ ಜಾರಿಗೆ ಮಾಡುತ್ತೇವೆ. ಇದರಲ್ಲಿ ಪೆಟ್ರೋಲ್, ಡೀಸೆಲ್ ಸಹ ಸೇರಿರುತ್ತದೆ ಎಂದು ವಿವರಿಸಿದರು.
ಇದೇ ವೇಳೆ ನನ್ನನ್ನು ಸರ್ ಎಂದು ಕರೆಯಬೇಡಿ ಎಂದು ಮನವಿ ಮಾಡಿ ರಾಹುಲ್ ಎಂದಷ್ಟೇ ಕರೆಯಿರಿ ಎಂದು ಉದ್ಯಮಿಗಳಿಗೆ ಮನವಿ ಮಾಡಿದರು. ಅಲ್ಲದೇ ಸಂವಾದ ಆರಂಭವಾಗುವ ಮುನ್ನವೇ ತಾನು ರಾಷ್ಟ್ರದ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ. ರಾಜ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಉತ್ತರಿಸುತ್ತಾರೆ ಎಂದು ಸ್ಪಷ್ಟನೆ ನೀಡಿದ್ದರು. ಇದನ್ನೂ ಓದಿ: ಜಿಎಸ್‍ಟಿ ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್ ಬರುತ್ತಾ: ಅರುಣ್ ಜೇಟ್ಲಿ ಹೇಳಿದ್ದು ಹೀಗೆ
ಉದ್ಯಮಿಗಳ ಸಂವಾದದಲ್ಲಿ ರೈತರ ಬಗ್ಗೆ ಪ್ರಶ್ನಿಸಿ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರ ಪರ ವ್ಯವಸ್ಥೆ ಜಾರಿಗೆ ಆಗ್ರಹ ಮಾಡಿದರು. ಈ ಕುರಿತು ಉತ್ತರಿಸಿದ ರಾಹುಲ್ ಕೃಷಿ ಮಾರುಕಟ್ಟೆಗಳಲ್ಲಿ ಮೂಲಸೌಕರ್ಯಗಳ ಸುಧಾರಣೆಗೆ ತರಬೇಕಿದೆ. ಈ ಕುರಿತು ಇನ್ನಷ್ಟು ಸುಧಾರಣೆಗಳನ್ನು ಸಿಎಂ ಸಿದ್ದರಾಮಯ್ಯ ಅವರು ಮುಂದಿನ ದಿನಗಳಲ್ಲಿ ತರುತ್ತಾರೆ. ಕೃಷಿ ಉತ್ಪನ್ನ ಮಾರುಕಟ್ಟೆಗಳ ವ್ಯವಸ್ಥೆ ಮೂಲಸೌಕರ್ಯ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಇದನ್ನೂ ಓದಿ : ಜಿಎಸ್‍ಟಿ ಅಡಿ ಪೆಟ್ರೋಲ್ ಬಂದ್ರೆ ಬೆಂಗ್ಳೂರಿನಲ್ಲಿ ಪ್ರತಿ ಲೀಟರ್‍ಗೆ 40 ರೂ.ಅಷ್ಟೇ!
ಸಂವಾದ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅವರಿಗೆ ಸಿಎಂ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್, ಇಂಧನ ಸಚಿವ ಡಿಕೆ ಶಿವಕುಮಾರ್, ಸಂಸದ ವೀರಪ್ಪ ಮೊಯ್ಲಿ, ಕೆಪಿಸಿಸಿ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಹಾಜರಿದ್ದರು.