Connect with us

Bidar

56 ಇಂಚಿನ ಎದೆಯುಳ್ಳ ಮೋದಿಜಿ ನಿಮ್ಮಲ್ಲಿ ಧೈರ್ಯವಿದ್ರೆ ಸಾಲಮನ್ನಾ ಮಾಡಿ ತೋರಿಸಿ: ರಾಗಾ ಚಾಲೆಂಜ್

Published

on

– ಚೌಕಿದಾರ ಅಲ್ಲ, ಎಲ್ಲ ಭ್ರಷ್ಟತೆಯಲ್ಲೂ ಭಾಗೀದಾರ
– ರಫೆಲ್ ಡೀಲ್ ನಲ್ಲಿ ಕೋಟಿ ಕೋಟಿ ಹಣ ಗುಳಂ

ಬೀದರ್: ನೀವು ಮಾಡುವ ದೊಡ್ಡ ದೊಡ್ಡ ಭಾಷಣಗಳಲ್ಲಿರುವ ಪ್ರತಿಯೊಂದು ಶಬ್ದವೂ ಸತ್ಯವಾಗಿದ್ದರೆ ನಾನು ನಿಮಗಿಂದು ಚಾಲೆಂಜ್ ಕೊಡುತ್ತಿದ್ದೇನೆ. ಕರ್ನಾಟಕ ಸರ್ಕಾರ ರೈತರ ಸಾಲಮನ್ನಾ ಮಾಡಿದೆ. ನಿಮ್ಮವರೇ ತಮ್ಮ ಪ್ರಣಾಳಿಕೆಯಲ್ಲಿ ಸಾಲಮನ್ನಾ ಮಾಡ್ತೀವಿ ಅಂತಾ ಬರೆದುಕೊಂಡಿದ್ದರು. ನಿಮ್ಮಲ್ಲಿ ಧೈರ್ಯ, 56 ಇಂಚಿನ ಎದೆಯುಳ್ಳ ನೀವು ಕರ್ನಾಟಕದ ಸಾಲಮನ್ನಾದ ಅರ್ಧ ಹಣವನ್ನು ಕೊಟ್ಟು ತೋರಿಸಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರಿಗೆ ಬಹಿರಂಗವಾಗಿ ಸವಾಲು ಹಾಕಿದ್ದಾರೆ.

ಬೀದರ್ ನಲ್ಲಿ ನಡೆದ ಜನಧ್ವನಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಹುಲ್ ಗಾಂಧಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ, ನೀವು ರೈತರ ಸಾಲಮನ್ನಾ ಮಾಡಲ್ಲ. ಭಾರತದ ಅತಿ ಶ್ರೀಮಂತ ವ್ಯಕ್ತಿಗಳ 2.5 ಲಕ್ಷ ಕೋಟಿ ರೂ. ಸಾಲಮನ್ನಾ ಮಾಡುತ್ತೀರಿ. ಕರ್ನಾಟಕದ ರೈತರಿಗಾಗಿ ಒಂದು ರೂಪಾಯಿ ನೀವು ಕೊಡುವುದಿಲ್ಲ ಎಂದು ಮೋದಿ ಅವರನ್ನು ಟೀಕಿಸಿದರು.

ಹುಸಿ ಭರವಸೆ:
2014ರ ಲೋಕಸಭಾ ಚುನಾವಣೆ ಮುನ್ನ 2 ಕೋಟಿ ಯುವಕರಿಗೆ ಉದ್ಯೋಗದ ಭರವಸೆಯನ್ನು ನೀಡಿದ್ದರು. ಆದ್ರೆ ಇಂದು ಪಕೋಡಾ ಮಾರಾಟ ಮಾಡಿ ಅಂತಾ ಸಲಹೆ ನೀಡುತ್ತಿದ್ದಾರೆ. ಎಲ್ಲಿಯೇ ಹೋದರು ಏನಾದ್ರೂ ಸುಳ್ಳು ಹೇಳುತ್ತಾ ತಿರುಗಾಡುತ್ತಿದ್ದಾರೆ. ಚುನಾವಣೆಗೆ ಮೊದಲು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ನೀಡಲಾಗುವುದು ಎಂಬ ಭರವಸೆಯನ್ನು ನೀಡಿದ್ದರು. ಆದ್ರೆ ಇದೂವರೆಗೂ ಯಾವ ವ್ಯಕ್ತಿಗೂ 10 ರೂ. ಸಿಕ್ಕಿಲ್ಲ. ನೆರೆಯ ಚೀನಾ ಸರ್ಕಾರ ಗಂಟೆಗೆ 24 ಸಾವಿರ ನೌಕರರಿಗೆ ಉದ್ಯೋಗ ನೀಡುತ್ತಿದ್ದರೆ ಮೋದಿಯವರು ಗಂಟೆಗೆ 450 ಜನರಿಗೆ ಉದ್ಯೋಗ ಕೊಡುತ್ತಿದ್ದಾರೆ. ಬೇರೆ ಬೇರೆ ದೇಶಗಳಲ್ಲಿ ದೊಡ್ಡ ಭಾಷಣ ಮಾಡುತ್ತೀರಿ ಅಲ್ಲಿಯ ಆಡಳಿತವನ್ನು ನೋಡಿ ಕಲಿತುಕೊಳ್ಳಿ ಎಂದು ಸಲಹೆ ನೀಡಿದರು.

ನನ್ನನ್ನು ಪ್ರಧಾನಿ ಮಂತ್ರಿ ಮಾಡಬೇಡಿ, ದೇಶದ ಚೌಕಿದಾರರನ್ನಾಗಿ ಮಾಡಿ ಎಂದು ಮೋದಿ ಮೇಲ್ನೋಟಕ್ಕೆ ಹೇಳ್ತಾರೆ. ರಫೆಲ್ ಡೀಲ್‍ನಲ್ಲಿಯೂ ಮೋದಿ ಸರ್ಕಾರ ಭ್ರಷ್ಟಾಚಾರ ನಡೆಸಿದೆ. ಕರ್ನಾಟಕದ ಬೆಂಗಳೂರಿನಲ್ಲಿಯೇ ಯುದ್ಧ ವಿಮಾನಗಳನ್ನು ತಯಾರಿಸಬಹುದಿತ್ತು. ಆದರೂ ದೂರದ ಫ್ರಾನ್ಸ್ ದೇಶದಿಂದ ಯುದ್ಧ ವಿಮಾನ ಖರೀದಿಸಿದರು. ಒಂದು ವೇಳೆ ಯುದ್ಧ ವಿಮಾನಗಳ ತಯಾರಿಕೆ ನಮ್ಮ ದೇಶದಲ್ಲಿ ನಡೆದಿದ್ದರೆ, ಏರೋನಾಟಿಕಲ್ ಇಂಜೀನಿಯರಿಂಗ್ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗುತ್ತಿತ್ತು ಎಂದು ವಾಗ್ದಾಳಿ ನಡೆಸಿದರು.

ಎಚ್‍ಎಎಲ್ ನಲ್ಲಿ 524 ಕೋಟಿ ರೂ. ವೆಚ್ಚದಲ್ಲಿ ಒಂದು ಯುದ್ಧ ವಿಮಾನ ತಯಾರಿಸಲಾಗುತ್ತಿತ್ತು. ನರೇಂದ್ರ ಮೋದಿ ಬಂದ ಮೇಲೆ ಒಪ್ಪಂದವನ್ನು ರದ್ದುಗೊಳಿಸಿ, ಪ್ಯಾರಿಸ್ ಗೆ ತೆರಳಿ ಒಪ್ಪಂದ ಮಾಡಿಕೊಂಡು ಬಂದರು. ಪ್ಯಾರಿಸ್ ಒಂದು ಯುದ್ಧ ವಿಮಾನಕ್ಕೆ 16 ಸಾವಿರ ಕೋಟಿ ರೂ.ಗೆ ಭಾರತೀಯ ಚೌಕಿದಾರ ಒಪ್ಪಂದ ಮಾಡಿಕೊಂಡು ಬಂದರು. ರಫೆಲ್ ಒಪ್ಪಂದ ಮಾಡಿಕೊಂಡ ಬಂದ ಬಳಿಕ ಉತ್ಪದನಾ ಕೆಲಸವನ್ನು 10 ದಿನಗಳ ಹಿಂದೆ ಹುಟ್ಟಿದ್ದ ಅಂಬಾನಿ ಕಂಪೆನಿಗೆ ನೀಡಿದ್ರು ಎಂದು ಕಿಡಿಕಾರಿದರು.

ಮೋದಿಗೆ ಧೈರ್ಯ ಇಲ್ಲ:
ಸಂಸತ್ತಿನಲ್ಲಿ ನಾನು ಮೋದಿಯವರ ಮುಂದೆಯೇ ರೆಫೆಲ್ ಒಪ್ಪಂದದಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಹೇಳಿದ್ದೇನೆ. ಯಾರು ಕಳ್ಳತನ ಮಾಡುತ್ತಾರೊ ಕಣ್ಣಿನಲ್ಲಿ ಕಣ್ಣಿಟ್ಟು ಮಾತನಾಡಲ್ಲ. ನಾನು ಆರೋಪಗಳನ್ನು ಮಾಡುತ್ತಿದ್ದರೆ, ಮೋದಿ ನನ್ನನ್ನು ನೋಡದೇ ಭಯದಿಂದ ಒಮ್ಮೆ ಮೇಲೆ, ಮತ್ತೊಮ್ಮೆ ಕೆಳಗಡೆ, ಎಡ-ಬಲ ನೋಡುತ್ತಿದ್ದರೆ ವಿನಃ ನನ್ನ ಕಣ್ಣುಗಳನ್ನು ನೋಡಲಿಲ್ಲ. ಕಾರಣ ಇಷ್ಟೇ, ಚೌಕಿದಾರ ಎಂದು ಹೇಳಿಕೊಳ್ಳುವ ಮೋದಿ ಎಲ್ಲದರಲ್ಲಿಯೂ ಭಾಗೀದಾರರೂ ಹೌದು. ನಿಮ್ಮೆಲ್ಲರ ಹಣವನ್ನು ಕದ್ದು, ಅನಿಲ್ ಅಂಬಾನಿಗೆ ನೀಡಿದ್ದಾರೆ. ನಿಮ್ಮ ಉದ್ಯೋಗ, ಕನಸು, ಹಣವನ್ನೆಲ್ಲಾ ತೆಗೆದುಕೊಂಡು ಹೋಗಿ ಗೆಳೆಯ ಅಂಬಾನಿಗೆ ನೀಡಿದರು. ರಫೆಲ್ ವಿಚಾರಕ್ಕೆ ಸಂಬಂಧಿಸಿದಂತೆ ಮೋದಿ ಮತ್ತು ನನ್ನ ಮಧ್ಯೆ ಚರ್ಚೆ ನಡೆಯಲಿ. ನನ್ನ ಮಾತುಗಳಿಗೆ ಉತ್ತರಿಸಲು ಮೋದಿ ಅವರಿಂದ ಸಾಧ್ಯವಿಲ್ಲ ಎಂದು ಆಕ್ರೋಶ ಹೊರಹಾಕಿದರು.

ನಮ್ಮೆಲ್ಲಾ ಆರೋಪಗಳಿಗೆ ಉತ್ತರಿಸಲು ಮೋದಿ ಸೇರಿದಂತೆ ಹಿಂದೇಟು ಹಾಕುತ್ತಿದ್ದಾರೆ. ಚೌಕಿದಾರರಾಗಿರುವ ಮೋದಿ ಎಲ್ಲದರಲ್ಲಿಯೂ ಭಾಗಿದಾರ ಆಗಿರೋದ್ರಿಂದ ಅವರ ಬಳಿ ನಮ್ಮ ಪ್ರಶ್ನೆಗೆ ಉತ್ತರವಿಲ್ಲ. ಕಾಂಗ್ರೆಸ್ ಸರ್ಕಾರ ನಿಮಗಾಗಿ ಹೈದ್ರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವ 371(ಜೆ) ಕಲಂ ಜಾರಿಗೆ ತಂದಿದೆ. ಈ ಮೊದಲು ಇದೇ ಬಿಜೆಪಿ ನಾಯಕರು ಈ ಕಲಂ ಅನ್ನು ವಿರೋಧಿಸಿದ್ದರು ಎಂದು ವಾಗ್ದಾಳಿ ನಡೆಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Click to comment

Leave a Reply

Your email address will not be published. Required fields are marked *