ಡೆಹ್ರಾಡೂನ್: ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ತ್ರಿಪುರಾ ವಿದ್ಯಾರ್ಥಿ ಏಂಜೆಲ್ ಚಾಕ್ಮಾ ಅನ್ನೋವ್ರನ್ನು ಜನಾಂಗೀಯ ನಿಂದನೆ ಮಾಡಿ ಮಾರಣಾಂತಿಕವಾಗಿ ಹಲ್ಲೆಗೈಯ್ಯಲಾಗಿತ್ತು. ಈ ವಿದ್ಯಾರ್ಥಿ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಈ ಸುದ್ದಿ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.
ಉತ್ತರಾಖಂಡ್ ಸಿಎಂ ಪುಷ್ಕರ್ ಸಿಂಗ್ ದಾಮಿ ಜೊತೆ ದೂರವಾಣಿ ಮೂಲಕ ಮಾತಾಡಿರುವ ತ್ರಿಪುರಾ ಸಿಎಂ ಮಾಣಿಕ್ ಸಾಹಾ, ಘಟನೆಯನ್ನು ಖಂಡಿಸಿದ್ದಾರೆ. ಇನ್ನು, ವಿದ್ಯಾರ್ಥಿಯ ಹತ್ಯೆ ಭಯಾನಕ ದ್ವೇಷದ ಅಪರಾಧ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಆಕ್ರೋಶ ಹೊರಹಾಕಿದ್ದಾರೆ.
ಆಡಳಿತಾರೂಢ ಬಿಜೆಪಿ ದ್ವೇಷವನ್ನ ಸಾಮಾನ್ಯಗೊಳಿಸುತ್ತಿದೆ ಅಂತ ಕಿಡಿಕಾರಿದ್ದಾರೆ. ಶಶಿತರೂರ್ ಕೂಡ ತಾಯ್ನಾಡಿನಲ್ಲೇ ಇತರರನ್ನು ವಿದೇಶಿಗರಂತೆ ನೋಡುವ ಪರಿಸ್ಥಿತಿ ಬಂದಿರೋದು ವಿಪರ್ಯಾಸ ಅಂತ ಟೀಕಿಸಿದ್ದಾರೆ.
ಏನಿದು ಘಟನೆ?
ಇದೇ ಡಿಸೆಂಬರ್ 9 ರಂದು ಡೆಹ್ರಾಡೂನ್‌ನಲ್ಲಿ ನಡೆದಿದ್ದ ಜನಾಂಗೀಯ ನಿಂದನೆಯನ್ನು ವಿರೋಧಿಸಿದ ಪಶ್ಚಿಮ ತ್ರಿಪುರಾ ಜಿಲ್ಲೆಯ ನಂದನ್‌ನಗರದ 24 ವರ್ಷದ ಎಂಬಿಎ ವಿದ್ಯಾರ್ಥಿ ಏಂಜೆಲ್ ಚಕ್ಮಾ ಮೇಲೆ ಆರು ಜನರ ಗುಂಪು ಹಲ್ಲೆ ನಡೆಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿ ಡಿಸೆಂಬರ್ 26 ರಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ರು.

