ಬಿಜೆಪಿ ಸಂಸದರಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ

Public TV
2 Min Read
RAHUL GANDHI 1

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಸರ್ಕಾರದ ವಿರುದ್ಧ ಮಂಡಿಸಿರುವ ಅವಿಶ್ವಾಸ ನಿರ್ಣಯ ಪರ ಮಾತನಾಡಿದ ರಾಹುಲ್ ಗಾಂಧಿ (Rahul Gandhi) ಲೋಕಸಭೆಯಿಂದ ನಿರ್ಗಮಿಸುವ ವೇಳೆ ಬಿಜೆಪಿ ಸಂಸದರತ್ತ ಫ್ಲೈಯಿಂಗ್ ಕಿಸ್ (Flying Kiss) ನೀಡಿದ್ದು ಹೊಸ ವಿವಾದಕ್ಕೆ ಕಾರಣವಾಗಿದೆ.

ಸಂಸತ್ ಸದಸ್ಯ ಸ್ಥಾನ ಮರುಸ್ಥಾಪನೆ ಬಳಿಕ ಕಲಾಪದಲ್ಲಿ ಭಾಗಿಯಾದ ರಾಹುಲ್ ಗಾಂಧಿ ಮೊದಲ ಬಾರಿ ಮಾತನಾಡಿದರು. ಸರ್ಕಾರದ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯದ ಪರ ಸುದೀರ್ಘವಾಗಿ ಮಾತನಾಡಿದರು. ರಾಹುಲ್ ಗಾಂಧಿ ಭಾಷಣದ ಬಳಿಕ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಾತು ಆರಂಭಿಸಿದರು.

ಸ್ಮೃತಿ ಇರಾನಿ ಮಾತು ಆರಂಭಿಸುತ್ತಿದ್ದಂತೆ ಲೋಕಸಭೆಯಿಂದ ನಿರ್ಗಮಿಸಲು ಮುಂದಾದ ರಾಹುಲ್ ಗಾಂಧಿ, ಹಾದಿ ಮಧ್ಯೆ ಕೆಲವು ಫೈಲ್ ಗಳನ್ನು ಕೆಳಗೆ ಬೀಳಿಸಿಕೊಂಡರು. ಈ ವೇಳೆ ಅದನ್ನು ಎತ್ತಿಕೊಳ್ಳಲು ಮುಂದಾದಾಗ ಅಲ್ಲೇ ಕೂತಿದ್ದ ಬಿಜೆಪಿ ಸಂಸದರು, ರಾಹುಲ್ ಗಾಂಧಿ ನೋಡಿ ನಗಲು ಆರಂಭಿಸಿದ್ದರು. ಇದನ್ನು ಗಮನಿಸಿದ ರಾಗಾ, ಅವರಿಗೆ ಫ್ಲೈಯಿಂಗ್ ಕಿಸ್ ನೀಡಿ ಮುಂದೆ ನಡೆದರು ಎನ್ನಲಾಗಿದೆ. ಇದನ್ನೂ ಓದಿ: ಬಿಜೆಪಿ ಮಣಿಪುರದಲ್ಲಿ ಭಾರತವನ್ನ, ಭಾರತ ಮಾತೆಯನ್ನ ಹತ್ಯೆ ಮಾಡಿದೆ: ಮೋದಿ ವಿರುದ್ಧ ರಾಹುಲ್‌ ಕಿಡಿ

ಈ ಯಾವ ದೃಶ್ಯಗಳು ಲೋಕಸಭೆಯಲ್ಲಿರುವ ಮುಖ್ಯ ಕ್ಯಾಮೆರಾದಲ್ಲಿ ಸೆರೆಯಾಗಿಲ್ಲ. ಆದರೆ ಪ್ರತ್ಯಕ್ಷದರ್ಶಿ ಸಂಸದರು ಈ ಬಗ್ಗೆ ಮಾಹಿತಿ ನೀಡಿದ್ದು, ಬಿಜೆಪಿ ಮಹಿಳಾ ಸಂಸದರು ರಾಹುಲ್ ಗಾಂಧಿ ನಡೆ ಅನುಚಿತವಾಗಿತ್ತು ಎಂದು ಆರೋಪಿಸಿದ್ದಾರೆ. ಇದು ಅಶ್ಲೀಲವಾಗಿದೆ, ಸ್ತ್ರೀದ್ವೇಷದ ಪುರುಷ ಮಾತ್ರ ಸಂಸತ್ತಿನಲ್ಲಿ ಮಹಿಳಾ ಸಂಸದರಿಗೆ ಫ್ಲೈಯಿಂಗ್ ಕಿಸ್ ನೀಡಲು ಸಾಧ್ಯ. ಇಂತಹ ಉದಾಹರಣೆ ಹಿಂದೆಂದೂ ಕಂಡಿರಲಿಲ್ಲ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ವಾಗ್ದಾಳಿ ನಡೆಸಿದ್ದಾರೆ.

ರಾಹುಲ್ ಗಾಂಧಿ ನಡೆ ವಿರುದ್ಧ ಲೋಕಸಭೆ ಸ್ಪೀಕರ್‍ಗೆ ಸಚಿವೆ ಶೋಭಾ ಕರಂದ್ಲಾಜೆ ದೂರು ನೀಡಿದ್ದು, ಗಾಂಧಿಯವರ ನಡವಳಿಕೆಯನ್ನು ‘ಅನುಚಿತ’ ಎಂದು ಕರೆದಿದ್ದಾರೆ. ಶೋಭಾ ಕರಂದ್ಲಾಜೆ (Shobha Karandlaje) ಪತ್ರಕ್ಕೆ ಹಲವು ಮಹಿಳಾ ಸಂಸದರು ಸಹಿ ಹಾಕಿದ್ದು ಕ್ರಮಕ್ಕೆ ಆಗ್ರಹಿಸಿದ್ದಾರೆ.

Web Stories

Share This Article