ನವದೆಹಲಿ: ರಫೇಲ್ ಡೀಲ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಳ್ಳತನ ಎಸಗಿದ್ದಾರೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎಂದಿದ್ದ ರಾಹುಲ್ ಗಾಂಧಿ ಇಂದು ಬೇಷರತ್ ಕ್ಷಮೆ ಕೇಳಿದ್ದಾರೆ.
ಈ ಸಂಬಂಧ ಅಫಿಡವಿಟ್ ಸಲ್ಲಿಸಿರುವ ರಾಹುಲ್ ಗಾಂಧಿ, ಚೌಕಿದಾರ್ ಚೋರ್ ಹೈ ಎಂದು ಸುಪ್ರೀಂ ಹೇಳಿದೆ ಎನ್ನಲಾದ ಹೇಳಿಕೆ ಉದ್ದೇಶಪೂರ್ವಕವಲ್ಲದ ಅಜಾಗರೂಕತೆಯಿಂದ ಕೂಡಿದ ಹೇಳಿಕೆಯಾಗಿದೆ. ಈ ಹೇಳಿಕೆ ನೀಡಿದ್ದಕ್ಕೆ ನಾನು ಸುಪ್ರೀಂ ಕೋರ್ಟ್ ನಲ್ಲಿ ಕ್ಷಮೆ ಕೇಳುತ್ತೇನೆ ಎಂದು ತಿಳಿಸಿದ್ದಾರೆ.
Advertisement
Advertisement
ಈ ಹಿಂದಿನ ವಿಚಾರಣೆ ವೇಳೆ ರಾಹುಲ್ ಪರ ಹಾಜರಿದ್ದ ವಕೀಲ ಅಭಿಷೇಕ್ ಸಿಂಘ್ವಿ, ಅಫಿಡವಿಟ್‍ಗಳಲ್ಲಿ `ಕ್ಷಮೆ’ (ಅಪಾಲಜಿ) ಎನ್ನುವ ಪದ ಇಲ್ಲದೇ ಇರುವುದು ದೋಷ. ಡಿಕ್ಷನರಿಯನ್ನು ಚೆಕ್ ಮಾಡಿದ್ದೇನೆ. ವಿಷಾದ (ರಿಗ್ರೆಟ್) ಅಂದರೆ ಕ್ಷಮಾಪಣೆ (ಸಿವಿಲ್ ಅಪಾಲಜಿ) ಎಂದೇ ಅರ್ಥ ಬರುತ್ತದೆ ಎಂದು ಸಮಜಾಯಿಷಿ ನೀಡಿದರು. ಇದಕ್ಕೆ ಮುಖ್ಯ ನ್ಯಾಯಮೂರ್ತಿಗಳು ನಿಮ್ಮ ಕಕ್ಷಿದಾರರು ಏನು ಹೇಳಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಕಷ್ಟ ಪಟ್ಟಿದ್ದೇವೆ ಎಂದಾಗ ರಾಜಕೀಯ ಸನ್ನಿವೇಶದಲ್ಲಿ ಚೌಕಿದಾರ್ ಚೋರ್ ಅನ್ನೋ ಪದ ಬಳಸಿದ್ದಾರೆ ಎಂದು ಉತ್ತರ ನೀಡಿದ್ದರು.
Advertisement
Advertisement
ಈ ಉತ್ತರಕ್ಕೆ ಗರಂ ಆಗಿದ್ದ ಸಿಜೆಐ, ನಿಮ್ಮ ರಾಜಕೀಯ ನಿಲುವುಗಳ ನಮಗೆ ಬೇಕಿಲ್ಲ. ನಿಮ್ಮ ರಾಜಕೀಯವನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ ಎಂದು ಹೇಳಿ ಚಾಟಿ ಬೀಸಿದ್ದರು. ಈ ವೇಳೆ ಮುಕುಲ್ ರೊಹ್ಟಗಿ ಕೋರ್ಟ್ ಮೋದಿ ಸುಳ್ಳು ಹೇಳಿದ್ದಾರೆ ಎಂದು ರಾಹುಲ್ ಗಾಂಧಿ ಉದ್ದೇಶಪೂರ್ವಕವಾಗಿ ಹೇಳಿದ್ದಾರೆ. ಬ್ರಾಕೆಟ್‍ನಲ್ಲಿ ವಿಷಾದ ಅಂದ್ರೇನು ಅರ್ಥ? ಸುಪ್ರೀಂಕೋರ್ಟ್ ಪ್ರಧಾನಿಯನ್ನು ಕಳ್ಳ ಅಂತ ಹೇಳಿದೆ ಎಂದು ದೇಶದ ಹಾದಿ ತಪ್ಪಿಸೋ ಯತ್ನವಲ್ಲದೆ ಬೇರೇನೂ ಅಲ್ಲ ಎಂದು ಹೇಳಿ ಸಿಂಘ್ವಿ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ಆಕ್ಷೇಪಕ್ಕೆ ಸಿಜೆಐ, ನಿಮ್ಮ ಕಕ್ಷಿದಾರ ಸ್ಪಷ್ಟವಾಗಿ ಕ್ಷಮೆ ಕೋರಬೇಕು. ಇಲ್ಲವಾದಲ್ಲಿ ಕ್ರಿಮಿನಲ್ ನಿಂದನೆ ಎದುರಿಸಬೇಕಾಗುತ್ತದೆ ಎಂದಾಗ ಸಿಂಘ್ವಿ, ತಪ್ಪನ್ನು ತಿದ್ದಿಕೊಂಡು `ಕ್ಷಮೆ ಕೋರಿ’ ಹೊಸ ಅಫಿಡವಿಟ್ ಸಲ್ಲಿಸುತ್ತೇವೆ ಎಂದು ತಿಳಿಸಿದ್ದರು. ಅದರಂತೆ ಇಂದು ರಾಹುಲ್ ಗಾಂಧಿ ಬೇಷರತ್ ಕ್ಷಮೆ ಕೇಳಿದ್ದಾರೆ.
ಏನಿದು ಪ್ರಕರಣ?
ರಫೇಲ್ ತೀರ್ಪಿಗೆ ಸಂಬಂಧಿಸಿದಂತೆ ಸಲ್ಲಿಸಲಾದ ಮರುಪರಿಶೀಲನಾ ಅರ್ಜಿಯನ್ನು ಪುರಸ್ಕರಿಸಬಾರದು ಎಂದು ಕೇಂದ್ರದ ವಾದವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಈ ಆದೇಶ ಬಂದ ನಂತರ ಚೌಕಿದಾರ್ (ಪ್ರಧಾನಿ ಮೋದಿ) ಕಳ್ಳತನ ಮಾಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ ಎಂದು ರಾಹುಲ್ ಗಾಂಧಿ ಅವರು ತಮ್ಮ ಪ್ರಚಾರ ಭಾಷಣದಲ್ಲಿ ಹೇಳಿದ್ದರು.
Contempt petition against Congress President Rahul Gandhi: Rahul Gandhi tenders unconditional apology to the Supreme Court pic.twitter.com/qLwYoVIjLu
— ANI (@ANI) May 8, 2019
ರಾಹುಲ್ ಗಾಂಧಿ ಅವರು, ರಫೇಲ್ ಡೀಲ್ ಪ್ರಕರಣದ ಆದೇಶದಲ್ಲಿ ಇಲ್ಲದೆ ಇರುವ ಅಂಶಗಳನ್ನು ಉಲ್ಲೇಖಿಸಿ ಮೋದಿ ಅವರನ್ನು ಟೀಕೆ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರು ಸುಪ್ರೀಂ ಕೋರ್ಟಿನಲ್ಲಿ ರಾಹುಲ್ ವಿರುದ್ಧ ನ್ಯಾಯಾಂಗ ನಿಂದನೆ ದೂರು ನೀಡಿದ್ದರು. ಮೀನಾಕ್ಷಿ ಲೇಖಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ರಾಹುಲ್ ಗಾಂಧಿ ಅವರಿಗೆ ನೋಟಿಸ್ ಜಾರಿ ಮಾಡಿ ಸ್ಪಷ್ಟನೆ ನೀಡಬೇಕೆಂದು ಸೂಚಿಸಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿಯೂ ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೂ ದೂರು ನೀಡಿತ್ತು.