ಕಲಬುರಗಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಪ್ರಬುದ್ಧ. ಹೀಗಾಗಿ ಅವರು ಪ್ರಧಾನಿ ಅಭ್ಯರ್ಥಿಯಾಗಲು ಯೋಗ್ಯರಿಲ್ಲ. ಹಾಗೆಯೇ ಕಾಂಗ್ರೆಸ್ಸಿನ ಸಿಸ್ಟಮ್‍ಗೆ ಬೇಸತ್ತು ಕೈ ನಾಯಕರು ಕಮಲ ಹಿಡಿದಿದ್ದಾರೆ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಮಾಲೀಕಯ್ಯ ಗುತ್ತೇದಾರ್ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಖರ್ಗೆ ತಮ್ಮ ಸ್ವಾರ್ಥಕ್ಕಾಗಿ ನಮ್ಮನ್ನೆಲ್ಲ ಮೂಲೆಗುಂಪು ಮಾಡಿದರು. ಕಾಂಗ್ರೆಸ್ ಅವರ ಮನೆ ಆಸ್ತಿ ಎಂದುಕೊಂಡರು. ಕೈ ಹೈ ಕಮಾಂಡ್‍ಗೆ ಈ ವಿಷ್ಯ ಗೊತ್ತಿಲ್ಲ, ಯಾಕೆಂದರೆ ರಾಹುಲ್ ಗಾಂಧಿ ಅಪ್ರಬುದ್ಧ, ಅವರು ಪ್ರಧಾನಿ ಸ್ಥಾನಕ್ಕೆ ಯೋಗ್ಯರಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಕಾರ್ಮಿಕರ ಪಾದ ತೊಳೆದ ಹಾಗೆ ಬಂದು ನನ್ನ ಪಾದವನ್ನು ತೊಳೆಯಲಿ ಅಂತ ಪ್ರಿಯಾಂಕ್ ಖರ್ಗೆ ಹೇಳುತ್ತಾನೆ. ಪ್ರಿಯಾಂಕ್ ಖರ್ಗೆ ಬಗ್ಗೆ ಮಾತಾಡಲ್ಲ, ಅವನಿಗೆ ಬುದ್ಧಿಯಿಲ್ಲ. ಬೇಕಾದ್ರೆ ಖರ್ಗೆ ವಿರುದ್ಧ ಮೋದಿಯೇ ಸ್ಪರ್ಧಿಸಲಿ ಅಂತ ಪ್ರಿಯಾಂಕ್ ಹೇಳ್ತಾನೆ. ಕಲಬುರಗಿ ಕ್ಷೇತ್ರ ಮೀಸಲು ಲೋಕಸಭೆ ಕ್ಷೇತ್ರವಾಗಿದ್ದು, ಅಲ್ಲಿ ಹೇಗೆ ಮೋದಿ ಸ್ಪರ್ಧಿಸಲು ಸಾಧ್ಯ? ಆ ಕಾರಣಕ್ಕಾಗಿಯೇ ಪ್ರಿಯಾಂಕ್‍ಗೆ ಬುದ್ಧಿ ಇಲ್ಲ ಎಂದು ಹೇಳುವುದು ಎಂದರು.
ಬಿಜೆಪಿ ಸೇರುವಂತೆ ಕಾಂಗ್ರೆಸ್ ನಾಯಕ ಮಾಲಕರೆಡ್ಡಿಗೆ ನಾವು ಮನವಿ ಮಾಡಿದ್ದೇವು. ಲೋಕಸಭೆ ಚುನಾವಣೆ ಬಳಿಕ ಖರ್ಗೆ ಮತ್ತು ಸನ್ಸ್ ಮನೆಯಲ್ಲಿ ಕೂರುತ್ತಾರೆ. ನಾವೆಲ್ಲ ಒಂದಾಗಿದ್ದು ಖರ್ಗೆ ಸೋಲಿಸಲು ಅಲ್ಲ. ಜಾಧವ್ ಗೆಲ್ಲಿಸಲು ಅಷ್ಟೇ ಎಂದು ಖರ್ಗೆ ಕುಟುಂಬದ ವಿರುದ್ಧ ಗುತ್ತೇದಾರ್ ವಾಗ್ದಾಳಿ ನಡೆಸಿದರು.