Connect with us

ದ್ರಾವಿಡ್ ಖಡಕ್ ಸೂಚನೆಗೆ ಒಲಿಯಿತು ಅಂಡರ್ 19 ವಿಶ್ವಕಪ್!

ದ್ರಾವಿಡ್ ಖಡಕ್ ಸೂಚನೆಗೆ ಒಲಿಯಿತು ಅಂಡರ್ 19 ವಿಶ್ವಕಪ್!

ಬೆಂಗಳೂರು: ಕನ್ನಡಿಗ ರಾಹುಲ್ ಡ್ರಾವಿಡ್ ಅವರ ಮಾರ್ಗರ್ದಶನದಲ್ಲಿ ಟೀಂ ಇಂಡಿಯಾ – 19 ತಂಡ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿ ವಿಶ್ವಕಪ್ ಮುಡಿಗೆರಿಸಿಕೊಂಡಿದೆ.

ಫೈನಲ್ ನಲ್ಲಿ ಆಸ್ಟ್ರೇಲಿಯಾವನ್ನು 8 ವಿಕೆಟ್ ಗಳಿಂದ ಬಗ್ಗು ಬಡಿದು ಭಾರತ ನಾಲ್ಕನೇಯ ಬಾರಿ ಅಂಡರ್ 19 ವಿಶ್ವಕಪ್ ಜಯಿಸಲು ದ್ರಾವಿಡ್ ಟಿಪ್ಸ್ ಜೊತೆಗೆ ಕೆಲ ಖಡಕ್ ಸೂಚನೆಗಳು ಕಾರಣ ಎಂದರೆ ತಪ್ಪಾಗಲಾರದು.

ಹೌದು. ಭಾರತ ಫೈನಲ್ ಪಂದ್ಯದ ಮುನ್ನ ತಂಡದ ಕೋಚ್ ಎಲ್ಲಾ ಆಟಗಾರಿರಗೂ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡುವಂತೆ ಸೂಚಿಸಿದ್ದರು. ಡ್ರಾವಿಡ್ ಮಾತನ್ನು ತಂಡದ ಎಲ್ಲಾ ಆಟಗಾರರು ತಪ್ಪದೇ ಪಾಲಿಸಿದ್ದ ಕಾರಣ ಈಗ ವಿಶ್ವಕಪ್ ಎತ್ತಿ ಸಂಭ್ರಮಿಸಿದ್ದಾರೆ.

ಕಳೆದ ವಾರ ಐಪಿಎಲ್ ಹರಾಜು ನಡೆದಿತ್ತು. ಈ ಸಂದರ್ಭದಲ್ಲೂ ದ್ರಾವಿಡ್ ಹರಾಜು ಪ್ರಕ್ರಿಯೆಗಳಿಗೆ ತಲೆ ಕೆಡಿಸಿಕೊಳ್ಳಬೇಡಿ ಸೆಮಿಫೈನಲ್ ನಲ್ಲಿ ನಮ್ಮ ಎದುರಾಳಿ ಇರುವುದು ಪಾಕಿಸ್ತಾನ. ಆ ಪಂದ್ಯದತ್ತ ಗಮನ ಹರಿಸಿ ಎಂದು ಸೂಚಿಸಿದ್ದರು.

ಐಪಿಎಲ್ ಹರಾಜು ಪ್ರಕ್ರಿಯೆ ನಡೆಯುತ್ತಲೇ ಇರುತ್ತದೆ. ಆದರೆ ವಿಶ್ವಕಪ್ ಗೆಲ್ಲುವ ಅವಕಾಶ ಮಾತ್ರ ಕ್ರಿಕೆಟ್ ಆಟಗಾರರಿಗೆ ಒಮ್ಮೆ ಮಾತ್ರ ಬರುತ್ತದೆ. ದೇಶಕ್ಕಾಗಿ ಆಡಿ ವಿಶ್ವಕಪ್ ಗೆದ್ದು ತೋರಿಸಿ ಎಂದು ಆಟಗಾರರಿಗೆ ಸ್ಫೂರ್ತಿಯುತ ಮಾತನ್ನು ಆಡಿದ್ದರು.

ಆಟಗಾರರು ದ್ರಾವಿಡ್ ಸೂಚನೆಯನ್ನು ಚಾಚು ತಪ್ಪದೆ ಪಾಲಿಸುತ್ತಿದ್ದರು ಎಂಬುದಕ್ಕೆ ತಂಡದ ಪ್ರಮುಖ ವೇಗಿ ಶಿವಂ ಮಾವಿ ಅವರ ತಂದೆ ಪಂಕಜ್ ಮಾವಿ, ನಾವು ಭಾನುವಾರ ಕೊನೆಯ ಬಾರಿ ಕೆಲವೇ ಕ್ಷಣ ಮಾತ್ರ ಶಿವಂ ಜತೆ ಮಾತಾಡಿದ್ದೆವು. ಈ ವೇಳೆ ಸೆಮಿಫೈನಲ್ ಹಾಗೂ ಫೈನಲ್ ತನಕ ಮೊಬೈಲ್ ಸ್ವಿಚ್ ಆಫ್ ಮಾಡಲು ಕೋಚ್ ಸೂಚಿಸಿದ್ದಾರೆ ಎಂಬುದಾಗಿ ಶಿವಂ ತಿಳಿಸಿದ್ದ ಎಂದು ಹೇಳಿದ್ದಾರೆ.

ರಾಹುಲ್ ಡ್ರಾವಿಡ್ ಅವರ ತರಬೇತಿ ಪ್ರಭಾವ ವಿಶ್ವಕಪ್ ಕ್ರಿಕೆಟ್ ನಲ್ಲಿ ಭಾಗವಹಿಸಿದ್ದ ಇತರೇ ತಂಡಗಳ ಆಟಗಾರರ ಮೇಲು ಬಿದ್ದಿತ್ತು. ಇದಕ್ಕೆ ಉದಾಹರಣೆ ಎಂಬಂತೆ ಪಾಕಿಸ್ತಾನದ ವಿರುದ್ಧ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಪಡೆದಿತ್ತು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಪಾಕ್ ಮಾಜಿ ಆಟಗಾರ ರಮೀಜ್ ರಾಜಾ ರಾಹುಲ್ ರಂತಹ ಕೋಚ್ ನಮ್ಮ ತಂಡಕ್ಕೂ ಇದ್ದಿದ್ದರೆ ನಾವು ಉತ್ತಮ ಪ್ರದರ್ಶನ ನೀಡಬಹುದಿತ್ತು ಎಂದು ಹೇಳಿ ಹೊಗಳಿದ್ದರು.

ಟೀಂ ಇಂಡಿಯಾ ವಿಶ್ವಕಪ್ ಗೆದ್ದ ಬಳಿಕ #INDvAUS, #U19CWC ಜೊತೆಗೆ #RahulDravid ಹ್ಯಾಶ್ ಟ್ಯಾಗ್ ಟಾಪ್ ಟ್ರೆಂಡಿಂಗ್ ನಲ್ಲಿತ್ತು.

Advertisement
Advertisement