ಟೀಂ ಇಂಡಿಯಾ ಅಂಡರ್ 19 ತಂಡಕ್ಕೆ ನನ್ನ ಸಮಯ ಮೀಸಲು ಎಂದಿದ್ದ ದ್ರಾವಿಡ್

Public TV
2 Min Read
rahul dravid

ಮುಂಬೈ: ಐಪಿಎಲ್ ಹಾಗೂ ಅಂಡರ್ 19 ತಂಡ ಎರಡು ಆಯ್ಕೆಗಳನ್ನು ರಾಹುಲ್ ದ್ರಾವಿಡ್ ಅವರ ಮುಂದಿಟ್ಟಾಗ ಅವರು ಟೀಂ ಇಂಡಿಯಾವನ್ನು ಆಯ್ಕೆ ಮಾಡಿಕೊಂಡಿದ್ದರು ಎಂದು ಬಿಸಿಸಿಐ ಆಡಳಿತ ಮಂಡಳಿ ಮುಖ್ಯಸ್ಥ ವಿನೋದ್ ರಾಯ್ ಹೇಳಿದ್ದಾರೆ.

ಖಾಸಗಿ ವಾಹಿನಿಯ ಸಂರ್ದನದ ವೇಳೆ ಈ ಕುರಿತು ಮಾತನಾಡಿರುವ ಅವರು, ಕಳೆದ ವರ್ಷದ ಐಪಿಎಲ್ ವೇಳೆ ರಾಹುಲ್ ದ್ರಾವಿಡ್ ಅವರಿಗೆ ಬಿಸಿಸಿಐ ಮಾಜಿ ಆಡಳಿತ ಮಂಡಳಿ (ಸಿಒಎ) ಸದಸ್ಯ ರಾಮಚಂದ್ರ ಗುಹಾ ಅವರು ಐಪಿಎಲ್, ಟೀಂ ಇಂಡಿಯಾ `ಎ’ ಹಾಗೂ ಇದೇ ವೇಳೆ ಅಂಡರ್ 19 ತಂಡದ ಆಯ್ಕೆಗಳನ್ನು ಮುಂದಿಟ್ಟಿದ್ದರು. ಈ ವೇಳೆ ರಾಹುಲ್ ದ್ರಾವಿಡ್ ತಮ್ಮ ಸಮಯವನ್ನು ಟೀಂ ಇಂಡಿಯಾಗೆ ನೀಡುವುದಾಗಿ ಹೇಳಿ ಒಂದು ವರ್ಷದ ಒಪ್ಪಂದಕ್ಕೆ ಸಹಿ ಮಾಡಿದ್ದಾಗಿ ತಿಳಿಸಿದ್ದಾರೆ.

666853 bcci logo afp

2016 ಮತ್ತು 2017 ರ ಐಪಿಎಲ್‍ನಲ್ಲಿ ರಾಹುಲ್ ದ್ರಾವಿಡ್ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸಿದ್ದರು. ಬಳಿಕ 2018 ರ ಆವೃತ್ತಿಗೆ ಆಸೀಸ್ ಮಾಜಿ ಆಟಗಾರ ರಿಕ್ಕಿ ಪಾಟಿಂಗ್ ಮೆಂಟರ್ ಆಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಈ ವೇಳೆ ಕೇವಲ ರಾಹುಲ್ ದ್ರಾವಿಡ್ ಮಾತ್ರವಲ್ಲದೇ ಇತರೇ ಕೋಚ್‍ಗಳಿಗೂ ಇದೇ ಆಯ್ಕೆಗಳನ್ನು ನೀಡಲಾಗಿತ್ತು. ಉದಾಹರಣೆಗೆ ಭರತ ಅರುಣ್, ಶಂಕರ್ ಬಸು, ಪ್ಯಾಟ್ರಿಕ್ ಫಾರ್ಹಟ್ ಸೇರಿದಂತೆ ಹಲವರು ಬಿಸಿಸಿಐ ಕೋಚ್ ಆಗಿ ಮುಂದುವರಿಯಲು ಐಪಿಎಲ್ ನಲ್ಲಿ ಸ್ಥಾನ ತೊರೆದಿದ್ದರು.

ಪ್ರಮುಖವಾಗಿ ಬಿಸಿಸಿಐ ಜೂನಿಯರ್ ತಂಡದ ಆಯ್ಕೆ ಸಮಿತಿ ಸದಸ್ಯರಾಗಿದ್ದ ವೆಂಕಟೇಶ್ ಪ್ರಸಾದ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಬೌಲಿಂಗ್ ಕೋಚ್ ಆಗಲು ತಮ್ಮ ಸ್ಥಾನ ತೊರೆದಿದ್ದರು. ಅಲ್ಲದೇ ಟೀಂ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿ ಅವರು ಸಹ ಐಪಿಎಲ್ ತೊರೆದು ಬಿಸಿಸಿಐ ನಿಯಮಗಳನ್ನು ಪಾಲನೆ ಮಾಡಿದ್ದರು.

ನಿಯಮ ಏನು ಹೇಳುತ್ತೆ: ಬಿಸಿಸಿಐ ಸಂಸ್ಥೆಯಲ್ಲಿ ಲೋಧಾ ಸಮಿತಿ ನೀಡಿದ್ದ ಸಲಹೆಗಳನ್ನು ಜಾರಿಗೆ ತರಲು ಸುಪ್ರೀಂ ಕೋರ್ಟ್ ಬಿಸಿಸಿಐಗೆ ಆಡಳಿತ ಮಂಡಳಿಯನ್ನು ನೇಮಕ ಮಾಡಿತ್ತು. ಲೋಧಾ ಸಮಿತಿ ಶಿಫಾರಸ್ಸಿನ ಅನ್ವಯ ಬಿಸಿಸಿಐ ನಲ್ಲಿ ಕಾರ್ಯನಿರ್ವಹಿಸುವವರು ಏಕಕಾಲದಲ್ಲಿ ಎರಡು ಹುದ್ದೆ ನಿರ್ವಹಿಸುವಂತಿಲ್ಲ. ಇದರಂತೆ ಅಂದು ಟೀಂ ಇಂಡಿಯಾ ಮುಖ್ಯ ಕೋಚ್ ಆಗಿದ್ದ ರವಿಶಾಸ್ತ್ರಿ ಹಾಗೂ ಅಂಡರ್ 19 ತಂಡದ ಕೋಚ್ ಆಗಿದ್ದ ದ್ರಾವಿಡ್ ಐಪಿಎಲ್ ಮೆಂಟರ್ ಹುದ್ದೆಗಳನ್ನು ತೊರೆದಿದ್ದರು.

Share This Article
Leave a Comment

Leave a Reply

Your email address will not be published. Required fields are marked *