ಮುಂಬೈ: ಟೀಂ ಇಂಡಿಯಾ ಯುವ ಲೆಗ್ ಸ್ಪಿನ್ನರ್ 20 ವರ್ಷದ ರಾಹುಲ್ ಚಹರ್ ತಮ್ಮ ಬಹುಕಾಲದ ಗೆಳತಿ ಐಶಾನಿರೊಂದಿಗೆ ನಿಶ್ವಿತಾರ್ಥ ಮಾಡಿಕೊಂಡಿದ್ದು, ಮುಂದಿನ ವರ್ಷ ಮದುವೆಯಾಗಲು ತಯಾರಿ ನಡೆಸಿದ್ದಾರೆ.
ರಾಜಸ್ಥಾನ ಮೂಲದ ರಾಹುಲ್ ಚಹರ್ ಅವರ ನಿಶ್ಚಿತಾರ್ಥ ಕಾರ್ಯಕ್ರಮ ಡಿ.12ರ ಗುರುವಾರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಡೆಯಿತು. ನವಜೋಡಿಗೆ ಶುಭಕೋರಿರುವ ಸಹೋದರ ದೀಪಕ್ ಚಹರ್ ಇಬ್ಬರೊಂದಿಗಿರುವ ಫೋಟೋವನ್ನು ತಮ್ಮ ಇನ್‍ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಅಂದಹಾಗೇ ಇದೇ ವರ್ಷ ಆಗಸ್ಟ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದಿದ್ದ ಸರಣಿಯಲ್ಲಿ ರಾಹುಲ್ ಚಹರ್ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ್ದರು. ಅಲ್ಲದೇ ಟೀಂ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವಾಡಿದ 4ನೇ ಸಹೋದರರ ಜೋಡಿ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದರು. ಈ ಹಿಂದೆ ಮೊಹಿಂದರ್ ಅಮರನಾಥ್-ಸುರಿಂದರ್ ಅಮರನಾಥ್, ಇರ್ಫಾನ್ ಪಠಾಣ್-ಯೂಸುಫ್ ಪಠಾಣ್, ಹಾರ್ದಿಕ್ ಪಾಂಡ್ಯ-ಕೃಣಾಲ್ ಪಾಂಡ್ಯ ಸಹೋದರರು ಟೀಂ ಇಂಡಿಯಾ ಪರ ಆಡಿದ್ದರು.
ಟೀಂ ಇಂಡಿಯಾ ಎ ತಂಡ ಹಾಗೂ ಐಪಿಎಲ್‍ನಲ್ಲಿ ತೋರಿದ ಉತ್ತಮ ಪ್ರದರ್ಶನದ ಹಿನ್ನೆಲೆಯಲ್ಲಿ ರಾಹುಲ್ ಚಹರ್ ಟೀಂ ಇಂಡಿಯಾದಲ್ಲಿ ಅವಕಾಶ ಪಡೆದರು. ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ರಾಹುಲ್, ಕಳೆದ ವರ್ಷ 6.55 ಎಕಾನಮಿಯೊಂದಿಗೆ 13 ವಿಕೆಟ್ ಪಡೆದಿದ್ದರು. ದೀಪಕ್ ಚಹರ್ ಟೀಂ ಇಂಡಿಯಾದಲ್ಲಿ ಸತತವಾಗಿ ಅವಕಾಶ ಪಡೆಯುತ್ತಿದ್ದು, ಇತ್ತೀಚೆಗೆ ಮುಕ್ತಾಯವಾದ ವೆಸ್ಟ್ ಇಂಡೀಸ್ ವಿರುದ್ಧ ಟಿ20 ಸರಣಿಯಲ್ಲೂ ಉತ್ತಮ ಪ್ರದರ್ಶನ ನೀಡಿದ್ದರು. ಅಲ್ಲದೇ ಕಳೆದ ತಿಂಗಳು ಬಾಂಗ್ಲಾದೇಶದ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ 3.2 ಓವರ್ ಗಳಲ್ಲಿ ಕೇವಲ 7 ರನ್ ನೀಡಿ 6 ವಿಕೆಟ್ ಪಡೆಯುವ ಮೂಲಕ ವಿಶ್ವದಾಖಲೆಯನ್ನು ಬರೆದರು. ಇದೇ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಚಹರ್ ಟಿ20 ಮಾದರಿಯಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಯನ್ನು ಪಡೆದರು.
https://www.instagram.com/p/B5-ouWYpIDA/