ಕಾಂಗ್ರೆಸ್ ನಾಯಕರಿಗೆ ಖಡಕ್ ವಾರ್ನಿಂಗ್ ಕೊಟ್ಟ ರಾಹುಲ್ ಗಾಂಧಿ!

Public TV
2 Min Read
RAHUL GANDHI INC

ನವದೆಹಲಿ: ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕವೂ ರಾಜ್ಯದ ದೋಸ್ತಿ ಸರ್ಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ದೃಢ ನಿರ್ಧಾರ ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರದೇಶ ಕಾಂಗ್ರೆಸ್ ನಾಯಕರನ್ನು ದೆಹಲಿಗೆ ಕರೆಸಿಕೊಂಡಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜೆಡಿಎಸ್ ಅವರ ಜೊತೆ ಸೌಮ್ಯ ಸಂಬಂಧವನ್ನು ಕಾಯ್ದುಕೊಳ್ಳಿ ಎಂದು ಮೈತ್ರಿಭಂಗಕ್ಕೆ ಕಾರಣವಾಗುವ ವಿವಾದಾತ್ಮಕ ಹೇಳಿಕೆಯನ್ನು ಯಾರೂ ನೀಡಬೇಡಿ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ ಎಂದು ತಿಳಿದು ಬಂದಿದೆ.

rahul gandhi

ಸಭೆಯಲ್ಲಿ ಕೈ ಪಕ್ಷದ ಯಾವುದೇ ನಾಯಕರು ಜೆಡಿಎಸ್ ವಿರುದ್ಧ ಮಾತನಾಡಬಾರದು. ಸಮ್ಮಿಶ್ರ ಸರ್ಕಾರದ ವಿರುದ್ಧ ಅಸಂಬದ್ಧ ಹೇಳಿಕೆಗಳನ್ನು ನೀಡಬಾರದು. ಒಂದು ವೇಳೆ ಮೈತ್ರಿ ನಿಯಮ ಪಾಲನೆ ಮಾಡದಿದ್ದರೆ ಹಾಗೂ ಕಾಂಗ್ರೆಸ್ ನಿಯಮವನ್ನು ಉಲ್ಲಂಘಿಸಿದರೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಯನ್ನು ರಾಹುಲ್ ಗಾಂಧಿ ನೀಡಿದ್ದಾರೆ ಎನ್ನಲಾಗಿದೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಜಿ. ಪರಮೇಶ್ವರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಪಕ್ಷದ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಚಿವ ಡಿ.ಕೆ.ಶಿವಕುಮಾರ್ ಅವರೊಂದಿಗೆ ರಾಹುಲ್ ಭಾನುವಾರದಂದು ಮಹತ್ವದ ಸಭೆ ನಡೆಸಿದರು. ಯಾವುದೇ ಪರಿಸ್ಥಿತಿಯಲ್ಲೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರಿಯಬೇಕು. ಪಾರ್ಲಿಮೆಂಟ್ ಎಲೆಕ್ಷನ್ ಫಲಿತಾಂಶ ಬರುತ್ತಿದ್ದಂತೆ ಬಿರುಸಿನ ರಾಜಕೀಯ ಚಟುವಟಿಕೆ ನಡೆಯಬಹುದು. ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚನೆಯ ಸಾಧ್ಯತೆಗಳಿವೆ ಎಂದಿದ್ದಾರೆ.

MND JDS CONGRESS

ಈ ವೇಳೆ ಕರ್ನಾಟಕದ ಮೈತ್ರಿಯಲ್ಲಿ ಗೊಂದಲವಾದರೆ ಕಷ್ಟವಾಗುತ್ತದೆ. ಕೇಂದ್ರದಲ್ಲಿ ಬಿಜೆಪಿಯನ್ನು ದೂರವಿಡಲು ಕರ್ನಾಟಕದ ಮೈತ್ರಿಯೇ ಅಡಿಪಾಯ. ಒಂದು ವೇಳೆ ಮಹಾಮೈತ್ರಿಕೂಟದಲ್ಲಿ ಏರುಪೇರು ಆದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ. ಅಲ್ಲದೆ ಕೆಲವು ದಿನಗಳ ಹಿಂದೆ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ದೇವೇಗೌಡ ಅವರು ಕಾಂಗ್ರೆಸ್ ರಾಜ್ಯ ಉಸ್ತುವಾರಿ ನಾಯಕ ವೇಣುಗೋಪಾಲ್ ಅವರನ್ನು ಕರೆಸಿ ಕೆಲವು ನಾಯಕರು ಸಿಎಂ ಕುಮಾರಸ್ವಾಮಿ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ದೂರಿದ್ದರು ಎನ್ನಲಾಗಿತ್ತು. ಅಲ್ಲದೆ ರಾಜ್ಯದಲ್ಲಿ ಬಹುತೇಕ ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ಅವರೇ ನಮ್ಮ ಸಿಎಂ ಎಂಬ ಹೇಳಿಕೆ ಕೊಡುತ್ತಿರುವುದು ದೋಸ್ತಿ ಸರ್ಕಾರದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

dks hdk congress jds

ರಾಹುಲ್ ಸಭೆ ಬಳಿಕ ಟ್ವೀಟ್ ಮಾಡಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರಾಜ್ಯದಲ್ಲಿ ಪಕ್ಷವನ್ನು ಸಂಘಟನೆ ಬಗ್ಗೆ ಉತ್ತಮ ಚರ್ಚೆಯಾಗಿದೆ. ಜತೆಗೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಬಲಗೊಳಿಸಲು ಸಮಾಲೋಚಿಸಲಾಗಿದೆ. ಮೇ 23ರ ಫಲಿತಾಂಶ ಕಾಂಗ್ರೆಸ್ ಮೈತ್ರಿಕೂಟಕ್ಕೆ ದೊಡ್ಡ ಶಕ್ತಿ ನೀಡುವ ವಿಶ್ವಾಸವಿದೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

ಹಾಗೆಯೇ ಇನ್ನೊಂದು ಟ್ವೀಟ್‍ನಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಸಮಸ್ಯೆ ತಂದೊಡ್ಡುವ ವಿವಾದಾತ್ಮಕ ಹೇಳಿಕೆಯನ್ನು ಯಾರೂ ನೀಡಬಾರದು. ಕಾಂಗ್ರೆಸ್ ಜತೆಗೆ ಜೆಡಿಎಸ್ ಮುಖಂಡರಿಗೂ ಇದು ಅನ್ವಯವಾಗುತ್ತದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವುದೇ ಮುಖ್ಯವಾಗಬೇಕು ಮನವಿ ಮಾಡಿಕೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *