ಕೆ.ಬಾಬು ರೆಡ್ಡಿ ಹಾಗೂ ಜಿ.ಸತೀಶ್ ಕುಮಾರ್ ನಿರ್ಮಿಸಿರುವ, ಶಿವಂ (Shivam) ನಿರ್ದೇಶನದ ಮೊದಲ ಪ್ಯಾನ್ ಇಂಡಿಯಾ ಮಕ್ಕಳ ಚಿತ್ರ ‘ಲಿಲ್ಲಿ’ (Lily). ಇತ್ತೀಚೆಗೆ ಈ ಚಿತ್ರದ ಹಾಡು, ಟ್ರೇಲರ್ ಹಾಗೂ ಪೋಸ್ಟರ್ ಬಿಡುಗಡೆ ಸಮಾರಂಭ ನಡೆಯಿತು. ನಟಿ ರಾಗಿಣಿ ದ್ವಿವೇದಿ (Ragini Dwivedi), ಡಾ.ಮೌಲಾ ಶರೀಫ್, ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಹಾಗೂ ತೆಲುಗು ಚಿತ್ರನಟ ಶಿವಕೃಷ್ಣ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಹಾಡು ಬಿಡುಗಡೆ ಮಾಡಿದ ನಟಿ ರಾಗಿಣಿ, ಎಲ್ಲದಕ್ಕಿಂತ ಮುಖ್ಯ ಮಾನವೀಯತೆ ಎಂಬ ಉತ್ತಮ ಕಥಾಹಂದರ ಹೊಂದಿರುವ ಈ ಮಕ್ಕಳ ಚಿತ್ರ ದೊಡ್ಡಮಟ್ಟದ ಯಶಸ್ಸು ಕಾಣಲಿ ಎಂದು ಹಾರೈಸಿದರು. ಉಮೇಶ್ ಬಣಕಾರ, ಮೌಲಾ ಶರೀಫ್ ಹಾಗೂ ನಟ ಶಿವಕೃಷ್ಣ ಸಹ ಚಿತ್ರತಂಡಕ್ಕೆ ಶುಭ ಕೋರಿದರು. ಇದನ್ನೂ ಓದಿ:`ಸಾಮಿ ಸಾಮಿ’ ಹಾಡಿಗೆ ಸ್ಟೆಪ್ ಹಾಕಿ ಎಂದ ಅಭಿಮಾನಿಗೆ ನೋ ಎಂದ ರಶ್ಮಿಕಾ ಮಂದಣ್ಣ
ನಾನು ಕನ್ನಡದಲ್ಲೂ ಕೆಲವು ಚಿತ್ರಗಳಿಗೆ ಕೆಲಸ ಮಾಡಿದ್ದೀನಿ. ಆದರೆ ಇದು ನಿರ್ದೇಶಕನಾಗಿ ಮೊದಲ ಚಿತ್ರ. ಮಾನವೀಯತೆಯ ಮೌಲ್ಯವನ್ನು ಸಾರುವ ಚಿತ್ರವಿದು. ಯಾವುದೇ ಒಂದು ವಿಷಯವನ್ನು ಮಕ್ಕಳ ಮೂಲಕ ಹೇಳಿದಾಗ ಬೇಗ ತಲುಪುತ್ತದೆ. ಈ ಹಿಂದೆ ಮಣಿರತ್ನಂ ಸರ್ ಅವರ ‘ಅಂಜಲಿ’ ಚಿತ್ರ ಎಲ್ಲರ ಮನ ಗೆದ್ದಿತ್ತು. ಈಗ ನಮ್ಮ ‘ಲಿಲ್ಲಿ’ ಚಿತ್ರ ಸಹ ಮಕ್ಕಳ ಜೊತೆಗೆ ಹಿರಿಯರಿಗೂ ಇಷ್ಟವಾಗುತ್ತದೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ನಮ್ಮ ಚಿತ್ರ ಸದ್ಯದಲ್ಲೇ ತೆರೆ ಕಾಣಲಿದೆ. ನೋಡಿ ಪ್ರೋತ್ಸಾಹ ನೀಡಿ ಎಂದರು ನಿರ್ದೇಶಕ ಶಿವಂ.
ಮಕ್ಕಳ ಚಿತ್ರ ಅಂತ ಯಾವುದಕ್ಕೂ ಕೊರತೆ ಬಾರದ ಹಾಗೆ ಈ ಸಿನಿಮಾ ನಿರ್ಮಾಣವಾಗಬೇಕು. ಉತ್ತಮ ಕಥೆಯಿರುವ ಈ ಚಿತ್ರ ಎಲ್ಲಾ ಭಾಷೆಯ ಜನರಿಗೂ ತಲುಪಬೇಕು ಎಂದು ನಾನು ನಿರ್ದೇಶಕರಿಗೆ ಹೇಳಿದ್ದೆ. ಅಂದುಕೊಂಡದಕ್ಕಿಂತ ಚಿತ್ರ ಚೆನ್ನಾಗಿ ಬಂದಿದೆ ಎನ್ನುತ್ತಾರೆ ನಿರ್ಮಾಪಕ ಬಾಬು ರೆಡ್ಡಿ. ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿರುವ ಬೇಬಿ ನೇಹಾ, ಮಾಸ್ಟರ್ ವೇದಂತ್ ವರ್ಮ , ಬೇಬಿ ಪ್ರಣೀತಾ ರೆಡ್ಡಿ ಹಾಗೂ ರಾಜ್ ವೀರ್ ಅವರು ತಮ್ಮ ಪಾತ್ರ ಹಾಗೂ ಚಿತ್ರದ ಬಗ್ಗೆ ಮಾತನಾಡಿದರು.