ರಾಮನಗರ: ಈ ಹಿಂದೆ ಜಿಲ್ಲೆಯ ರೈತರು ಪದೇ ಪದೇ ಅನಾವೃಷ್ಟಿ ಎದುರಿಸುತ್ತಿದ್ದರು. ಆದರೆ ಈ ಬಾರಿ ಅತಿವೃಷ್ಟಿಯಿಂದ ಹಲವೆಡೆ ತಮ್ಮ ಬೆಳೆಯನ್ನ ಕಳೆದುಕೊಂಡು ರೈತರು ಕಂಗಾಲಾಗಿದ್ದಾರೆ.
ಕಳೆದ ಒಂದು ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಸುರಿದ ಮಳೆ ಹಾಗೂ ಕ್ಯಾರ್ ಚಂಡಮಾರುತದ ಪರಿಣಾಮ ರೈತರು ಕಷ್ಟಪಟ್ಟು ಬೆಳೆದ ರಾಗಿ ಬೆಳೆ ನೆಲಕಚ್ಚಿದೆ. ಅಲ್ಲದೇ ನೆಲಕಚ್ಚಿರುವ ರಾಗಿ ಬೆಳೆ ಮೊಳಕೆಯೊಡೆದು ರೈತರ ಕೈಗೆ ಸಿಗದಂತಾಗಿದೆ.
ಈ ವರ್ಷ ಮೊದಮೊದಲು ಉತ್ತಮ ಮಳೆಯಾದ ಹಿನ್ನೆಲೆ ರೈತರು ಸಂತೋಷದಿಂದ ರಾಗಿ ಬಿತ್ತನೆ ಮಾಡಿದ್ದರು. ಇನ್ನೇನು ಬೆಳೆ ಕಟಾವು ಮಾಡಿ, ಬೆಳೆ ಮಾರಾಟ ಮಾಡಿ ಲಾಭ ಪಡೆದು, ಸಾಲ ತೀರಿಸಿ ನೆಮ್ಮದಿಯಿಂದ ಇರಬಹುದು ಎಂಬ ರೈತರ ಆಸೆಯನ್ನು ಎಡಬಿಡದೆ ಸುರಿದ ಮಳೆ ಹಾಳು ಮಾಡಿದೆ. ಕಟಾವಿಗೆ ಬಂದು ನಿಂತಿದ್ದ ರಾಗಿ ಬೆಳೆ ನೆಲಕಚ್ಚಿ, ಮೊಳಕೆಯೊಡೆದು ಕೈಗೆ ಬರದಂತಾಗಿ ರೈತರು ಕಣ್ಣೀರಿಡುತ್ತಿದ್ದಾರೆ.
ಬೆಳೆ ಹಾಳಾಗಿ ಸಾಲ ಸೋಲ ಮಾಡಿ ರಾಗಿ ಬಿತ್ತನೆ ಮಾಡಿದ ರೈತರು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಬಗ್ಗೆ ಕೃಷಿ ಇಲಾಖೆಗೆ ದೂರು ನೀಡಿದ್ದರೂ ಪರಿಹಾರ ಕಲ್ಪಿಸಲು ಯಾವುದೇ ಅಧಿಕಾರಿಗಳು ಬೆಳೆ ವೀಕ್ಷಣೆಗೆ ಬಂದಿಲ್ಲ. ಹೀಗಾಗಿ ಜಿಲ್ಲಾಡಳಿತ ನಮ್ಮ ನೆರವಿಗೆ ಬರಬೇಕೆಂದು ಎಂದು ರೈತರು ಮನವಿ ಮಾಡಿದ್ದಾರೆ.