ಬೆಂಗಳೂರು: ವಿಧಾನ ಪರಿಷತ್ ಕಲಾಪದಲ್ಲಿ ಇವತ್ತು ಕಾಂಗ್ರೆಸ್ ಸದಸ್ಯ ರಘು ಆಚಾರ್ ಏಕಾಂಗಿ ಹೋರಾಟ ಮಾಡಿ ಗಮನ ಸೆಳೆದರು. ತಾವು 2017ರಲ್ಲಿ ಮಂಡಿಸಿದ್ದ ಕರ್ನಾಟಕ ಶಿಕ್ಷಣ ಖಾಸಗಿ ತಿದ್ದುಪಡಿ ವಿಧೇಯಕವನ್ನ ಚರ್ಚೆ ಮಾಡುವಂತೆ ಒತ್ತಾಯಿಸಿ ಸದನದ ಬಾವಿಗಳಿದು ಹೋರಾಟ ನಡೆಸಿದರು. ಪಕ್ಷದ ನಾಯಕರ ಆದೇಶವನ್ನು ಧಿಕ್ಕರಿಸಿದ ರಘು ಆಚಾರ್ ವಿಧೇಯಕ ಚರ್ಚೆಗೆ ಬಿಗಿಪಟ್ಟು ಹಿಡಿದರು.
2017ರಲ್ಲಿ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಕಾಂಗ್ರೆಸ್ ಸದಸ್ಯ ರಘು ಆಚಾರ್, ಸರ್ಕಾರ ನೌಕರರು, ಅಧಿಕಾರಿಗಳು, ರಾಜಕಾರಣಿಗಳು ಸೇರಿದಂತೆ ಸರ್ಕಾರ ಅನುದಾನ ಪಡೆಯೋ ಪ್ರತಿಯೊಬ್ಬರ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸಬೇಕು ಅನ್ನೋ ಕರ್ನಾಟಕ ಶಿಕ್ಷಣ ತಿದ್ದುಪಡಿ ಖಾಸಗಿ ವಿಧೇಯಕ ಮಂಡನೆ ಮಾಡಿದರು. ಆದರೆ ಅವತ್ತು ವಿಧೇಯಕ ಚರ್ಚೆ ಆದರೂ ಕೂಡ ಯಾವುದೇ ನಿರ್ಧಾರ ಸರ್ಕಾರ ತಡೆದುಕೊಂಡಿರಲಿಲ್ಲ. ಹೀಗಾಗಿ ನಿನ್ನೆ ಸದನದಲ್ಲಿ ಮಾತನಾಡಿದ ರಘು ಆಚಾರ್, ನಾಳೆ ನನ್ನ ವಿಧೇಯಕ ಚರ್ಚೆ ಆಗಿಲ್ಲ ಎಂದರೆ ಧರಣಿ ಮಾಡೋದಾಗಿ ತಿಳಿಸಿದ್ದರು.
Advertisement
Advertisement
ಇಂದು ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿಗಳು ವಿಧೇಯಕದ ಬಗ್ಗೆ ಮಾತನಾಡಿಲ್ಲ. ಇದಕ್ಕೆ ಆಕ್ರೋಶಗೊಂಡ ರಘು ಆಚಾರ್ ಚರ್ಚೆಗೆ ಅವಕಾಶ ಕೊಡುವಂತೆ ಬಿಗಿಪಟ್ಟು ಹಿಡಿದರು. ಇದಕ್ಕೆ ಪ್ರತಿಕ್ರಿಯೆ ನೀಡದ ಸಭಾಪತಿಗಳು ವಿಧೇಯಕ ಸಮಿತಿ ಮುಂದೆ ಇದೆ. ಅಲ್ಲಿಂದ ಬಂದ ನಂತರ ವಿಧೇಯದ ಬಗ್ಗೆ ಚರ್ಚೆಗೆ ಅವಕಾಶ ಕೊಡೊದಾಗಿ ತಿಳಿಸಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ರಘು ಆಚಾರ್ ಈಗಲೇ ಚರ್ಚೆಗೆ ಅವಕಾಶ ಕೊಡಬೇಕು ಅಂತ ಒತ್ತಾಯ ಮಾಡಿದರು. ಇದಕ್ಕೆ ಸಭಾಪತಿಗಳು ಒಪ್ಪಲಿಲ್ಲ. ಇದಕ್ಕೆ ಆಕ್ರೋಶಗೊಂಡ ರಘು ಆಚಾರ್ ಸದನದ ಬಾವಿಗಳಿದು ಏಕಾಂಗಿ ಪ್ರತಿಭಟನೆ ನಡೆಸಿದರು.
Advertisement
ರಘು ಆಚಾರ್ ಪ್ರತಿಭಟನೆಗೆ ತಮ್ಮ ಪಕ್ಷದ ವಿಪಕ್ಷ ನಾಯಕ ಎಸ್‍ಆರ್ ಪಾಟೀಲ್ ಆಕ್ರೋಶ ಹೊರಹಾಕಿದರು. ಇದು ಪಕ್ಷದ ಶಿಸ್ತು ಉಲ್ಲಂಘನೆ. ಮುಂದೆ ಒಂದು ದಿನ ವಿಧೇಯಕದ ಬಗ್ಗೆ ಸಭೆ ಮಾಡೋಣ. ಈಗ ಧರಣಿ ವಾಪಸ್ ಪಡೆಯಿರಿ ಅಂತ ಎಸ್‍ಆರ್ ಪಾಟೀಲ್ ತಿಳಿಸಿದರು. ಇದಕ್ಕೆ ಒಪ್ಪದ ರಘು ಆಚಾರ್ ನನ್ನನ್ನ ಬೇಕಾದರೆ ಪಕ್ಷದಿಂದ ತೆಗೆದು ಹಾಕಿ. ವಿಧೇಯಕದ ಮೇಲೆ ಚರ್ಚೆಗೆ ಅವಕಾಶ ಕೊಡಿ ಅಂತ ಬಾವಿಯಲ್ಲಿ ಕುಳಿತು ಪ್ರತಿಭಟನೆ ಮುಂದುವರಿಸಿದರು.
Advertisement
ವಿಪಕ್ಷ ನಾಯಕರ ಬಳಿಕ ಸಚಿವ ಈಶ್ವರಪ್ಪ ಕೂಡ ರಘು ಆಚಾರ್‍ಗೆ ಧರಣಿ ವಾಪಸ್ ಪಡೆಯಲು ಮನವಿ ಮಾಡಿದರು. ಯಾವುದೇ ಶಾಸಕರು ಹೀಗೆ ಧರಣಿ ಮಾಡೋವಾಗ ಮುಂದಿನ ಕಾರ್ಯ ಕಲಾಪ ನಡೆದ ಉದಾಹರಣೆ ಇಲ್ಲ. ಈ ವರ್ತನೆ ಜನರಿಗೆ ತಪ್ಪು ಸಂದೇಶ ಹೋಗುತ್ತದೆ. ಕೂಡಲೇ ಧರಣಿ ವಾಪಸ್ ಪಡೆಯಿರಿ ಚರ್ಚೆ ಮಾಡೋಣ ಅಂತ ಸಚಿವ ಈಶ್ವರಪ್ಪ ಮನವಿ ಮಾಡಿದರು. ಆದರೆ ಈಶ್ವರಪ್ಪ ಮಾತಿಗೂ ಒಪ್ಪದ ರಘ ಆಚಾರ್ ಧರಣಿ ಮುಂದುವರಿಸಿದರು. ಈಶ್ವರಪ್ಪ ಜೊತೆಗೆ ವಿಪಕ್ಷ ಮತ್ತು ಆಡಳಿತ ಸದಸ್ಯರು ರಘು ಆಚಾರ್ ಮನವೊಲಿಸಿದರು. ಅದಕ್ಕೂ ರಘು ಆಚಾರ್ ಒಪ್ಪಲಿಲ್ಲ.
ಇದಾದ ಬಳಿ ಸಭಾಪತಿಗಳು ಯಾವುದೇ ವಿಷಯ ಚರ್ಚೆ ಮಾಡಬೇಕಾದರೆ ಮೊದಲು ನೋಟಿಸ್ ನೊಟೀಸ್ ಕೊಡಬೇಕು. ಆದರೆ ಸದಸ್ಯರು ನೊಟೀಸ್ ಕೊಟ್ಟಿಲ್ಲ. ಹೀಗಾಗಿ ಚರ್ಚೆ ಅಸಾಧ್ಯ ಅಂತ ತಿಳಿಸಿದರು. ಸಭಾಪತಿಗಳ ಮಾತಿಗೆ ಹಿರಿಯ ಸದಸ್ಯ ಹೊರಟ್ಟಿ ಧ್ವನಿಗೂಡಿಸಿ, ನೊಟೀಸ್ ನೀಡದೆ ಚರ್ಚೆ ಮಾಡುವುದು ಅಸಾಧ್ಯ. ಹೀಗಾಗಿ ನೊಟೀಸ್ ಕೊಡಿ ಚರ್ಚೆ ಮಾಡೋಣ. ಈಗ ಧರಣಿ ವಾಪಸ್ ಪಡೆಯಿರಿ ಎಂದು ಹೊರಟ್ಟಿ ಮನವಿ ಮಾಡಿದರು. ಹೊರಟ್ಟಿ ಮಾತಿಗೆ ಒಪ್ಪಿದ ರಘು ಆಚಾರ್ ಪ್ರತಿಭಟನೆ ವಾಪಸ್ ಪಡೆದರು.