ನವರಸ ನಾಯಕ ಜಗ್ಗೇಶ್ ನಟನೆಯ ‘ರಾಘವೇಂದ್ರ ಸ್ಟೋರ್ಸ್’ (Raghavendra Stores) ಸಿನಿಮಾ ರಾಜ್ಯದ ಬಹುತೇಕ ಕಡೆ ತುಂಬಿದ ಪ್ರದರ್ಶನ ಕಾಣುತ್ತಿದೆ. ವಿಧಾನಸಭೆ ಚುನಾವಣೆಗೆ (Election) ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿಗಳ ಪರವಾಗಿ ನಟ ಜಗ್ಗೇಶ್ (Jaggesh) ಪ್ರಚಾರ ಮಾಡುತ್ತಿದ್ದಾರೆ ಎನ್ನವ ಕಾರಣಕ್ಕಾಗಿ ನಿನ್ನೆ ದಾವಣಗೆರೆಯಲ್ಲಿ ಚುನಾವಣೆ ಅಧಿಕಾರಿ ಚಿತ್ರ ಪ್ರದರ್ಶನಕ್ಕೆ ಅಡ್ಡಿ ಮಾಡಿದ್ದರು. ಪ್ರದರ್ಶನ ನಿಲ್ಲಿಸುವಂತೆ ಸೂಚಿಸಿದ್ದರು. ಈಗ ಈ ಘಟನೆ ಕುರಿತಂತೆ ದಾವಣಗೆರೆ ಜಿಲ್ಲಾಧಿಕಾರಿ (District Collector) ಸ್ಪಷ್ಟನೆ ನೀಡಿದ್ದಾರೆ.
ಚುನಾವಣಾ ಅಧಿಕಾರಿಯ ಸೂಚನೆಯಂತೆ ಜಗ್ಗೇಶ್ ಇರುವ ಸಿನಿಮಾ ಪೋಸ್ಟರ್ ಗೆ ನಿನ್ನೆ ಬಿಳಿ ಹಾಳೆಯಿಂದ ಮುಚ್ಚಲಾಗಿತ್ತು. ಈ ಕುರಿತು ನಿರ್ಮಾಣ ಸಂಸ್ಥೆ ಚುನಾವಣೆ ಆಯೋಗಕ್ಕೆ ಪತ್ರ ಬರೆದಿತ್ತು. ಚುನಾವಣೆ ಆಯೋಗವು ಅಡೆತಡೆ ಮಾಡದಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಚಿತ್ರಕ್ಕೆ ಯಾವುದೇ ರೀತಿಯಲ್ಲಿ ಅಡೆತಡೆ ಮಾಡಲಾಗುವುದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ:ನಟಿ ಮೇಘನಾ ರಾಜ್ ಹುಟ್ಟು ಹಬ್ಬಕ್ಕೆ ತತ್ಸಮ ತದ್ಭವ ಪೋಸ್ಟರ್ ರಿಲೀಸ್
ದಾವಣಗೆರೆ ಗೀತಾಂಜಲಿ ಚಿತ್ರಮಂದಿರದಲ್ಲಿ ರಾಘವೇಂದ್ರ ಸ್ಟೋರ್ಸ್ ಸಿನಿಮಾ ಪ್ರದರ್ಶನ ಕಾಣುತ್ತಿತ್ತು. ನಿನ್ನೆ ಬೆಳ್ಳಗೆ ಚಿತ್ರಮಂದಿರಕ್ಕೆ ಆಗಮಿಸಿದ್ದ ಚುನಾವಣೆ ಅಧಿಕಾರಿ ಚಿತ್ರ ಪ್ರದರ್ಶನ ಮಾಡದಂತೆ ತಿಳಿಸಿದ್ದರು. ಜಗ್ಗೇಶ್ ನೇರವಾಗಿ ಚುನಾವಣೆ ಪ್ರಚಾರಕ್ಕೆ ಇಳಿದಿರುವುದರಿಂದ ಮತ್ತು ಅವರು ರಾಜ್ಯಸಭಾ ಸದಸ್ಯರು ಆಗಿರುವುದರಿಂದ ಸಿನಿಮಾ ಪ್ರದರ್ಶನ ಮಾಡದಂತೆ ಸೂಚಿಸಿದ್ದರು.
ಜಗ್ಗೇಶ್ ಕೇವಲ ಸ್ಟಾರ್ ಪ್ರಚಾರಕರು. ಅವರು ಚುನಾವಣೆಗೆ ಸ್ಪರ್ಧಿಸಿಲ್ಲ. ಅಲ್ಲದೇ, ಅನೇಕ ನಟರು ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ. ಸುದೀಪ್ ಅವರ ವಿಷಯದಲ್ಲಿ ಚುನಾವಣೆ ಆಯೋಗ ಯಾವುದೇ ಕ್ರಮ ತಗೆದುಕೊಂಡಿಲ್ಲ. ಹಾಗಾಗಿ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡಬೇಕು ಎಂದು ಚಿತ್ರಮಂದಿರ ಮಾಲೀಕರು ಮನವರಿಕೆ ಮಾಡಿಕೊಟ್ಟಿದ್ದರು. ಆದರೂ, ಪ್ರಯೋಜನವಾಗಿರಲಿಲ್ಲ.