ಬೆಂಗಳೂರು: ರಾಘವೇಂದ್ರ ರಾಜ್‍ಕುಮಾರ್ ಅಮ್ಮನ ಮನೆ ಚಿತ್ರದ ಮೂಲಕ ತನ್ನ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆಂದರೆ ತಪ್ಪಾಗಲಾರದು. ಹೌದು ಅವರು ಬಹಳ ದಿನಗಳ ಗ್ಯಾಪ್ ನಂತರ ಬಂದ ಈ ಆಫರನ್ನು ಒಪ್ಪಲು ಕಾರಣ ಚಿತ್ರದಲ್ಲಿದ್ದ ಪಾತ್ರ ಪೋಷಣೆ. ಆದರೆ ಅದೇ ಕಾರಣದಿಂದ ಈಗ ರಾಗಣ್ಣ ಬ್ಯುಸಿಯಾಗಿದ್ದಾರೆ. ಒಂದರ ಮೇಲೊಂದರಂತೆ ಒಳ್ಳೇ ಪಾತ್ರಗಳು ಹುಡುಕಿಕೊಂಡು ಬರುತ್ತಿವೆ. ಆಡಿಸಿದಾತ, ತ್ರಯಂಬಕ ಚಿತ್ರದ ನಂತರ ರಾಗಣ್ಣ ಅಭಿನಯಿಸುತ್ತಿರುವ 25ನೇ ಚಿತ್ರ ಇದಾಗಿದ್ದು, ಮೊನ್ನೆ ಕಂಠೀರವ ಸ್ಟುಡಿಯೋದಲ್ಲಿ ನಡೆದ ಈ ಚಿತ್ರದ ಮಹೂರ್ತ ಸಮಾರಂಭಕ್ಕೆ ನಟ ಪುನೀತ್ ರಾಜ್‍ಕುಮಾರ್ ಪತ್ನಿ ಸಮೇತರಾಗಿ ಆಗಮಿಸಿ ಪ್ರಥಮ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದರು. ಉಳಿದಂತೆ ಛೇಂಬರ್ ಅಧ್ಯಕ್ಷ ಚಿನ್ನೇಗೌಡ್ರು, ರಾಜ್ ಸಹೋದರಿ ನಾಗಮ್ಮ ಸೇರಿದಂತೆ ಅಣ್ಣಾವ್ರ ಕುಟುಂಬದ ಬಹುತೇಕ ಸದಸ್ಯರು ಆಗಮಿಸಿದ್ದರು.
Advertisement
ಫಣೀಶ್ ಭಾರದ್ವಾಜ್ ಅವರು ಚಿತ್ರಕ್ಕೆ ಮಾಡಿಕೊಡಿರುವ ಕಥೆ ಪ್ರತಿಯೊಬ್ಬರ ಜೀವನಕ್ಕೂ ಅನ್ವಯವಾಗುತ್ತದೆ. ಹೊಸ ಕತೆ ಅಲ್ಲದಿದ್ದರೂ ನಿರೂಪಣೆಯಲ್ಲಿ ಹೊಸತನವಿರುತ್ತದೆ. ಕತೆಯಲ್ಲಿ 7-8 ಪಾತ್ರಗಳಿಗೆ ನಾಯಕ ಆಡಿಸುತ್ತಾರೆ. ಒಂದು ಹಂತದವರೆಗೆ ಇವರು ಮಾಡುವ ಕೆಲಸ, ಮಾತುಗಳು, ನೋಟ ಎಲ್ಲವು ನೋಡುಗರಿಗೆ ಗೊಂದಲ ಸೃಷ್ಟಿಸುತ್ತದೆ. ಇನ್ನೇನು ತಾಳ್ಮೆ ಕಳೆದುಕೊಳ್ಳುವ ಹಂತಕ್ಕೆ ಬರುವಷ್ಟರಲ್ಲಿ ಸನ್ನಿವೇಶಗಳ ಮೂಲಕ ಎಲ್ಲ ವಿವರಗಳು ತೆರೆದುಕೊಳ್ಳುತ್ತದೆ. ಒಬ್ಬ ಮನುಷ್ಯ ಸಾವಿನ ದವಡೆಯಿಂದ ಹೇಗೆ ಪಾರಾಗ್ತಾನೆ. ದುಡ್ಡು ಮತ್ತು ಮನುಷ್ಯತ್ವಕ್ಕೆ ಜನರು ಹೇಗೆ ಮಾರು ಹೋಗ್ತಾರೆ. ಅದು ಇಲ್ಲ ಅಂದ್ರೆ ಇದೆ, ಇದೆ ಅಂದರೆ ಇಲ್ಲ ಎನ್ನುವಂತ ಅಂಶಗಳು ಕೂಡ ಚಿತ್ರದಲ್ಲಿ ಮೂಡಿಬರುತ್ತದೆ. ಪ್ರತಿ ಹತ್ತು ದೃಶ್ಯಕ್ಕೆ ಒಂದು ಘಟನೆ ನಡೆಯುವಂತೆ ಚಿತ್ರ ಸಾಗುತ್ತದೆ.
Advertisement
ಬೆಂಗಳೂರು, ಮೈಸೂರು ಹಾಗೂ ನಂದಿಬೆಟ್ಟದಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ. ವಿಶೇಷವಾಗಿ ಪ್ರೇಮದ ಕಾಣಿಕೆ ಚಿತ್ರದ ಬಾನಿಗೊಂದು ಎಲ್ಲೆ ಎಲ್ಲಿದೆ ಗೀತೆಯನ್ನು ಈ ಚಿತ್ರದಲ್ಲಿ ರೀಮಿಕ್ಸ್ ಮಾಡಿ ಬಳಸಿಕೊಳ್ಳಲಾಗುತ್ತಿದೆ. ನಾವು ಏನು ಕೊಡ್ತಿವೋ ಅದು ನಮ್ಮೊಂದಿಗೆ ಇರುತ್ತದೆ. ಬಚ್ಚಿಟ್ಟದ್ದು ಬೇರೆಯವರ ಪಾಲಾಗುತ್ತದೆ. ಅದಕ್ಕಾಗಿ ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ ಎಂದು ಚಿತ್ರದ ಅಡಿಬರಹದಲ್ಲಿ ಹೇಳಲಾಗಿದೆ. ಅಂದ ಹಾಗೆ ರಾಘಣ್ಣ ಈ ಚಿತ್ರದಲ್ಲಿ 40 ವರ್ಷದ ಪ್ರಾಯದವರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರ ತಂದೆಯಾಗಿ ಭಗವಾನ್, ಹಿರಿಯಣ್ಣನಾಗಿ ಗುರುದತ್, ಕಿರಿಯಣ್ಣನಾಗಿ ಬಾಲ್‍ರಾಜ್, ಅಭಿ ಮುಂತಾದವರು ನಟಿಸುತ್ತಿದ್ದಾರೆ, ಚಿತ್ರಕ್ಕೆ ಕತೆ, ಚಿತ್ರಕತೆ ಬರೆದು ನಿರ್ದೇಶನದ ಚುಕ್ಕಾಣಿ ಹಿಡಿದಿರುವ ಫಣೀಶ್ ಭಾರದ್ವಾಜ್ ಅವರಿಗೆ ಇದು ಎರಡನೆ ಅವಕಾಶ. ಚಿತ್ರದ ಛಾಯಾಗ್ರಹಣವನ್ನು ಉದಯ್ ಬಲ್ಲಾಳ್ ಮಾಡಿದರೆ, ಸಂಕಲನ ಹರೀಶ್ ಕೊಮ್ಮೆ, ಸಂಭಾಷಣೆ ಶ್ರೀಹರ್ಷ ಅವರದು, ಬಿ.ಎಂ.ಚೇತನ್ ಅವರು ಚಿತ್ರಕ್ಕೆ ಬಂಡವಾಳ ಹಾಕಿ ನಿರ್ಮಾಣ ಮಾಡುತ್ತಿದ್ದು, ನಿರ್ಮಾಪಕರಾಗಿ ಅವರಿಗಿದು ಎರಡನೆ ಸಿನಿಮಾ.
Advertisement
Advertisement