ಪಬ್ಲಿಕ್ ಟಿವಿ ಡಿಜಿಟಲ್ ಸಿನಿಮಾ ವಿಭಾಗದ ಶರಣು ಹುಲ್ಲೂರು ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಬಿ.ಎಸ್.ಲಿಂಗದೇವರು ಅವರಿಗೆ ಜಂಟಿಯಾಗಿ ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ ದೊರೆತಿದೆ. ಶರಣು ಹುಲ್ಲೂರು (Sharanu Hullur) ಮತ್ತು ಬಿ.ಎಸ್.ಲಿಂಗದೇವರು (BS Lingadevaru) ಜೊತೆಯಾಗಿ ‘ವಿರಾಟಪುರ ವಿರಾಗಿ’ (Viratpura Viragi) ಚಿತ್ರಕ್ಕೆ ಸಂಭಾಷಣೆ ಬರೆದಿದ್ದರು. ಈ ಚಿತ್ರದ ಸಂಭಾಷಣೆಗಾಗಿ ಖ್ಯಾತ ಚಿತ್ರ ಸಾಹಿತಿ ಶ್ರೀಹುಣಸೂರು ಕೃಷ್ಣಮೂರ್ತಿ ಸ್ಮರಣಾರ್ಥ ಪ್ರಶಸ್ತಿ ಸಂದಿದೆ.
ಹಾನಗಲ್ಲ (Hanagalla) ಕುಮಾರಸ್ವಾಮಿಗಳ (Kumaraswamy) ಜೀವನವನ್ನು ಆಧರಿಸಿದ ಸಿನಿಮಾ ವಿರಾಟಪುರ ವಿರಾಗಿ. ಭಾರೀ ಬಜೆಟ್ ಸಿನಿಮಾಗಳೇ ಸೋಲಿನ ಹಾದಿ ಹಿಡಿದಿರುವ ಸಂದರ್ಭದಲ್ಲಿ ವಿರಾಟಪುರ ವಿರಾಗಿ ಸಿನಿಮಾ ಭಾರೀ ಯಶಸ್ಸು ಕಂಡಿತ್ತು. ಕಲಬುರಗಿ ನಗರವೊಂದರಲ್ಲೇ ನೂರು ಪ್ರದರ್ಶನಗಳನ್ನು ಕಂಡು ದಾಖಲೆ ಬರೆದಿತ್ತು. ಕರ್ನಾಟಕದಾದ್ಯಂತ ಮೂರು ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿತ್ತು.
ಸಿನಿಮಾ ಬಿಡುಗಡೆಗೆ ಮುನ್ನವೇ 75 ಸಾವಿರಕ್ಕೂ ಅಧಿಕ ಟಿಕೆಟ್ ಮಾರಾಟವಾಗಿ ಹೊಸ ದಾಖಲೆ ಬರೆದಿದ್ದ ಈ ಸಿನಿಮಾ 750ಕ್ಕೂ ಹೆಚ್ಚು ಶೋಗಳು ಹೌಸ್ ಫುಲ್ ಆಗಿವೆ. 62ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಕಲಬುರಗಿಯಲ್ಲೇ 82 ಶೋಗಳು ಹೌಸ್ ಫುಲ್ ಪ್ರದರ್ಶನ ಕಂಡಿತ್ತು. ಈ ವರ್ಷದಲ್ಲಿ ಹೆಚ್ಚು ಸದ್ದು ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ ಈ ಚಿತ್ರ ಕೂಡ ಕಾಣಿಸಿಕೊಂಡಿತ್ತು.
ಕನ್ನಡ ಚಿತ್ರರಂಗದ ಪ್ರಥಮ ಪ್ರಚಾರಕರ್ತ ದಿವಂಗತ ಶ್ರೀ ಡಿ.ವಿ. ಸುಧೀಂದ್ರ ಅವರು ತಮ್ಮ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಗೆ 25 ವರ್ಷ ತುಂಬಿದ ಸುಸಂದರ್ಭದಲ್ಲಿ ನಿರ್ಮಾಪಕರಿಗೆ ಮತ್ತು ಹಿರಿಯ ಪತ್ರಕರ್ತರಿಗೆ ಪ್ರಶಸ್ತಿ ನೀಡುವ ಪರಿಪಾಠ ಆರಂಭಿಸಿದರು. ಈಗ ಪ್ರಶಸ್ತಿಗಳ ಸಂಖ್ಯೆ 11ಕ್ಕೇರಿದೆ. ಸಂಸ್ಥೆಯ 48ನೇ ವಾರ್ಷಿಕೋತ್ಸವ ಹಾಗೂ 23ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ಜನವರಿ 27ರ ಶನಿವಾರ ಸಂಜೆ 5.30ಕ್ಕೆ ಚಾಮರಾಜಪೇಟೆಯ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ನಡೆಯಲಿದೆ. ಅಂದು ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.