ಪಾಟ್ನಾ: ವಿದ್ಯಾರ್ಥಿನಿಯರ ಮೇಲೆ ರ್‍ಯಾಗಿಂಗ್ ಎಸಗಿದ್ದಕ್ಕೆ 54 ವಿದ್ಯಾರ್ಥಿನಿಯರಿಗೆ ಬಿಹಾರದ ದರ್ಭಾಂಗ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ತಲಾ 25 ಸಾವಿರ ರೂ. ದಂಡ ವಿಧಿಸಿದೆ. 54 ವಿದ್ಯಾರ್ಥಿಗಳಿಗೆ ದಂಡ ವಿಧಿಸಿದ್ದನ್ನು ಒಪ್ಪಿಕೊಂಡ ಕಾಲೇಜು, ಎಲ್ಲ ವಿದ್ಯಾರ್ಥಿಗಳಿಂದ ಒಟ್ಟು 13.50 ಲಕ್ಷ ರೂ. ಹಣವನ್ನು ಸಂಗ್ರಹಿಸಿದೆ.
ಹಾಸ್ಟೆಲ್ ನಲ್ಲಿದ್ದ ಪ್ರಥಮ ವರ್ಷದ ಸೆಮಿಸ್ಟರ್ ಓದುತ್ತಿದ್ದ ಓರ್ವ ಸಂತ್ರಸ್ತೆ ನವೆಂಬರ್ 11 ರಂದು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ(ಎಂಸಿಐ)ಗೆ ತನಗೆ ಆಗುತ್ತಿರುವ ಅನ್ಯಾಯವನ್ನು ತೋಡಿಕೊಂಡು ಈ ಮೇಲ್ ಮೂಲಕ ದೂರನ್ನು ನೀಡಿದ್ದಳು.
Advertisement
ವಿದ್ಯಾರ್ಥಿನಿಯ ವಿವರವನ್ನು ಬಹಿರಂಗ ಪಡಿಸದೇ ಈ ದೂರಿನ ಪ್ರತಿಯನ್ನು ಕಾಲೇಜಿನ ಆಡಳಿತ ಮಂಡಳಿಗೆ ಕಳುಹಿಸಿ ವಿದ್ಯಾರ್ಥಿಗಳ ಮೇಲೆ ಕಠಿಣ ಕ್ರಮವನ್ನು ಕೈಗೊಳ್ಳುವಂತೆ ಎಂಸಿಐ ಆದೇಶಿಸಿತ್ತು.
Advertisement
ಎಂಸಿಐ ಆದೇಶದ ಅನ್ವಯ ಈಗ ಮೂರನೇ ಸೆಮಿಸ್ಟರ್ ಓದುತ್ತಿದ್ದ ಎಲ್ಲ ವಿದ್ಯಾರ್ಥಿನಿಯರಿಗೆ ದಂಡ ವಿಧಿಸಲಾಗಿದೆ. ಅಷ್ಟೇ ಅಲ್ಲದೇ ಪ್ರಥಮ ವರ್ಷ ಓದುತ್ತಿರುವ 26 ಮಂದಿ ಈ ಪ್ರಕರಣದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಅವರಿಗೂ ದಂಡವನ್ನು ವಿಧಿಸಿದೆ.
Advertisement
ರ್‍ಯಾಗಿಂಗ್ ಆಗುತ್ತಿರುವ ವಿಚಾರ ತಿಳಿದಿದ್ದರೂ ಅದನ್ನು ಸಂಬಂಧಪಟ್ಟವರ ಗಮನಕ್ಕೆ ತರದೇ ಘಟನೆಯನ್ನು ಮರೆಮಾಚಲು ಯತ್ನಿಸಿದ್ದಕ್ಕೆ ಪ್ರಥಮ ಸೆಮಿಸ್ಟರ್ ಓದುತ್ತಿದ್ದ 26 ವಿದ್ಯಾರ್ಥಿನಿಯರಿಗೆ ದಂಡ ಹಾಕಲಾಗಿದೆ. ಒಂದು ವೇಳೆ ನವೆಂಬರ್ 25ರ ಒಳಗಡೆ ಈ ದಂಡವನ್ನು ಪಾವತಿಸದೇ ಇದ್ದಲ್ಲಿ ಆ ವಿದ್ಯಾರ್ಥಿನಿಯರ ಮೇಲೆ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲು ಆಡಳಿತ ಮಂಡಳಿ ಮುಂದಾಗಿದೆ.
Advertisement