Connect with us

Dakshina Kannada

ಮಂಗ್ಳೂರಲ್ಲಿ ಕ್ಷಿಪ್ರ ಕಾರ್ಯಪಡೆ ಘಟಕ ಸ್ಥಾಪನೆ : ಏನಿದು ಆರ್‌ಎಎಫ್? ಎಲ್ಲಿ ಸ್ಥಾಪನೆಯಾಗುತ್ತೆ?

Published

on

ನವದೆಹಲಿ: ಗಲಭೆ ಹಾಗೂ ದೊಂಬಿಯಂತಹ ಸಮಯದಲ್ಲಿ ತುರ್ತು ಪರಿಸ್ಥಿತಿ ನಿರ್ವಹಣೆಗೆಂದೇ ಇರುವ ಕ್ಷಿಪ್ರ ಕಾರ್ಯಪಡೆ(ಆರ್‌ಎಎಫ್) ತುಕಡಿಯನ್ನು ಮಂಗಳೂರಿನಲ್ಲಿ ಪ್ರಾರಂಭಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಸದ್ಯ ದೇಶದಲ್ಲಿರುವ ಒಟ್ಟು 10 ಆರ್‌ಎಎಫ್ ತುಕಡಿಗಳ ಪೈಕಿ, 5 ಹೊಸ ತುಕಡಿಗಳನ್ನು ಆಯೋಜಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಕಳೆದ ಜನವರಿಯಲ್ಲೇ 5 ಆರ್‌ಎಎಫ್ ಘಟಕವನ್ನು ಆರಂಭಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ಆದರೆ ಈಗ ಎಲ್ಲಿ ಸ್ಥಾಪನೆಯಾಗಲಿದೆ ಎನ್ನುವ ವಿವರವನ್ನು ಪ್ರಕಟಿಸಿದೆ.

ಕರ್ನಾಟಕದ ಮಂಗಳೂರು, ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ಉತ್ತರಪ್ರದೇಶದ ವಾರಾಣಸಿ, ರಾಜಸ್ಥಾನದ ಜೈಪುರ, ಬಿಹಾರ ಹಾಜಿಪುರ ಮತ್ತು ಹರಿಯಾಣದ ನುಹ್ ಜಿಲ್ಲೆಗಳಲ್ಲಿ ಹೊಸ ಆರ್‌ಎಎಫ್ ಘಟಕ ಪ್ರಾರಂಭವಾಗಲಿದೆ.

ಘಟಕ ಸ್ಥಾಪನೆ ಸಂಬಂಧ ಪಟ್ಟಂತೆ ಅಗತ್ಯವಾದ ಜಾಗ ಖರೀದಿ ಪ್ರಕ್ರಿಯೆ ನಡೆಯುತ್ತಿದ್ದು, ಈಗಾಗಲೇ ಕಾರ್ಯಚರಣೆ ನಡೆಸುತ್ತಿರುವ ಆರ್‌ಎಎಫ್ ಸಿಬ್ಬಂದಿಗಳು ಶೀಘ್ರವೇ ಹೊಸ ನೆಲೆಗಳಿಗೆ ವರ್ಗಾವಣೆಗೊಳ್ಳಲಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ. ಈಗಾಗಲೇ ದೇಶದ ಹೈದರಾಬಾದ್, ಅಹಮದಾಬಾದ್, ಅಲಹಾಬಾದ್, ಮುಂಬೈ, ದೆಹಲಿ, ಆಲಿಘರ್, ಕೊಯಮತ್ತೂರ್, ಜಮ್ಶೆಡ್‍ಪುರ್, ಭೋಪಾಲ್ ಹಾಗೂ ಮೀರತ್ ಪ್ರದೇಶಗಳಲ್ಲಿ ಆರ್‌ಎಎಫ್ ಪಡೆ ಕಾರ್ಯಾಚರಣೆ ನಡೆಸುತ್ತಿವೆ.

ಏನಿದು ಆರ್‌ಎಎಫ್?
ರ‍್ಯಾಪಿಡ್ ಆ್ಯಕ್ಷನ್ ಫೋರ್ಸ್ ಅರ್ಥಾತ್ ಕ್ಷಿಪ್ರ ಕಾರ್ಯಾಚರಣೆ ಪಡೆ. ದೊಂಬಿ, ಗಲಭೆ ಸೇರಿದಂತೆ ಮತ್ತಿತರ ತುರ್ತು ಪರಿಸ್ಥಿತಿಯನ್ನು ನಿರ್ವಹಿಸಲು ವಿಶೇಷ ತರಬೇತಿ ಹೊಂದಿದ ಅರೆಸೇನಾಪಡೆ ಘಟಕ. ಇಲ್ಲಿಯವರೆಗೂ ದೇಶದಲ್ಲಿ ಒಟ್ಟು 10 ಆರ್‌ಎಎಫ್ ತುಕಡಿಗಳಿವೆ. ಪ್ರತಿ ತುಕಡಿಯಲ್ಲಿ 1,000 ಸಿಬ್ಬಂದಿಗಳಿದ್ದು, ಅವರು ಅತ್ಯಾಧುನಿಕ ತಾಂತ್ರಿಕ ಉಪಕರಣಗಳು, ಮಾರಕವಲ್ಲದ ಶಸ್ತ್ರಾಸ್ತ್ರಗಳು, ಹೊಗೆಸೂಸುವ ಗ್ರೆನೇಡ್‍ಗಳು ಹಾಗೂ ಇನ್ನೂ ಮುಂತಾದ ತುರ್ತು ಶಸ್ತ್ರಾಸ್ತ್ರಗಳನ್ನು ಹೊಂದಿರುತ್ತಾರೆ.

ಮಂಗಳೂರಿನಲ್ಲಿ ಏಲ್ಲಿ?
ಮಂಗಳೂರಿನಲ್ಲಿ ಎಲ್ಲಿ ಎನ್ನುವುದು ಅಧಿಕೃತವಾಗಿ ಘೋಷಣೆಯಾಗಿಲ್ಲ. ಆರ್‌ಎಎಫ್ ಸ್ಥಾಪನೆ ಸಂಬಂಧ ಈ ಹಿಂದೆ ಬಜಪೆ ಮತ್ತು ಪರವೂರಿನಲ್ಲಿ ಜಾಗ ಗುರುತಿಸಿ 2 ವರ್ಷದ ಹಿಂದೆ ಸರ್ಕಾರ ಪ್ರಸ್ತಾವನೆ ಕಳುಹಿಸಲಾಗಿದೆ. ಈ ವಿಚಾರದ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಸುರೇಶ್ ಕುಮಾರ್ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

1 Comment

1 Comment

Leave a Reply

Your email address will not be published. Required fields are marked *