ನವದೆಹಲಿ: ಚರಂಡಿಯಲ್ಲಿ ಕಾರು ಮುಳುಗಿದ ಪರಿಣಾಮ ರೇಡಿಯೋ ಮಿರ್ಚಿ ಸಂಸ್ಥೆಯ ಉದ್ಯೋಗಿಯೊಬ್ಬರು ಮೃತಪಟ್ಟಿರುವ ಘಟನೆ ದೆಹಲಿ ಸಮೀಪ ನೊಯ್ಡಾದಲ್ಲಿ ನಡೆದಿದೆ.
26 ವರ್ಷದ ತನಿಯಾ ಖನ್ನಾ ಮೃತ ದುರ್ದೈವಿ. ಈ ಘಟನೆ ಮಂಗಳವಾರ ತಡರಾತ್ರಿ ನೊಯ್ಡಾ ವಲಯ 94ರಲ್ಲಿ ಸಂಭವಿಸಿದೆ. ಈಕೆ ದೆಹಲಿಯ ರೇಡಿಯೋ ಮಿರ್ಚಿ ಕೇಂದ್ರದ ಮಾರ್ಕೆಟಿಂಗ್ ತಂಡದಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ತನಿಯಾ ಖನ್ನಾ ಮಂಗಳವಾರ ಮಧ್ಯರಾತ್ರಿ ಕೆಲಸ ಮುಗಿಸಿಕೊಂಡು ಕಾರಿನಲ್ಲಿ ಮನೆಗೆ ಹಿಂತಿರುಗುತ್ತಿದ್ದರು. ಆಗ ಕಾರು ನಿಯಂತ್ರಣ ಕಳೆದುಕೊಂಡು ತೆರೆದ ಚರಂಡಿಯಲ್ಲಿ ಸಿಲುಕಿಕೊಂಡಿದೆ. ಇದರಿಂದ ಕಾರು ಅಪಘಾತಕ್ಕೀಡಾಗಿ ಖನ್ನಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಕಾರು ವೇಗವಾಗಿ ಹೋಗಿ ತೆರೆದ ಚರಂಡಿಗೆ ಡಿಕ್ಕಿ ಹೊಡೆದಿದ್ದನ್ನು ಸಾರ್ವಜನಿಕರು ನೋಡಿದ್ದಾರೆ. ಕೂಡಲೇ ಅವರು ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಮೃತದೇಹವನ್ನು ಬುಧವಾರ ಬೆಳಗ್ಗೆ ಹೊರತೆಗೆದಿದ್ದಾರೆ. ನಂತರ ಮರಣೋತ್ತರ ಪರೀಕ್ಷೆಗಾಗಿ ಸಮೀಪದ ಆಸ್ಪತ್ರೆಗೆ ರವಾನಿಸಿದ್ದಾರೆ.
ಈ ಬಗ್ಗೆ ನಾವು ತನಿಯಾ ಖನ್ನಾ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದೇವೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.