ಬೆಂಗಳೂರು: ಸ್ಯಾಂಡಲ್ವುಡ್ ನಟಿ ರಾಧಿಕಾ ಪಂಡಿತ್ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಮಗಳ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ರಾಧಿಕಾ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಐರಾ, ಯಶ್ ಹಾಗೂ ರಾಧಿಕಾ ಮದುವೆ ಫೋಟೋ ಮುಂದೆ ಕುಳಿತಿದ್ದಾಳೆ. ಈ ವೇಳೆ ರಾಧಿಕಾ, ಐರಾಳಿಗೆ ಅಪ್ಪ ಎಲ್ಲಿದ್ದಾರೆ ಎಂದು ಕೇಳಿದ್ದಾರೆ. ಆಗ ಐರಾ, ಯಶ್ ಚಿತ್ರದ ಮೇಲೆ ಕೈಯಿಟ್ಟು ತನ್ನ ಅಪ್ಪನನ್ನು ಗುರುತಿಸಿದ್ದಾಳೆ. ಬಳಿಕ ರಾಧಿಕಾ ಅಮ್ಮ ಎಲ್ಲಿ ಎಂದು ಕೇಳಿದ್ದಾರೆ. ಈ ವೇಳೆ ಐರಾ, ರಾಧಿಕಾ ಫೋಟೋವನ್ನು ತೋರಿಸಿದ್ದಾಳೆ. ಇಬ್ಬರ ಫೋಟೋ ತೋರಿಸಿದ ಬಳಿಕ ಐರಾ ಚಪ್ಪಾಳೆ ತಟ್ಟಿದ್ದಾಳೆ.
ಈ ವಿಡಿಯೋ ಪೋಸ್ಟ್ ಮಾಡಿ ರಾಧಿಕಾ ಅದಕ್ಕೆ, “ಗಡ್ಡವಿಲ್ಲದಿದ್ದರೂ ಐರಾ ತನ್ನ ತಂದೆಯನ್ನು ಗುರುತಿಸಿದ್ದಾಳೆ. ಈ ವಿಡಿಯೋವನ್ನು ಐರಾ 8 ತಿಂಗಳಿದ್ದಾಗ ಸೆರೆ ಹಿಡಿದಿದ್ದು, ಈಗ ಆಕೆಗೆ 10 ತಿಂಗಳು. ಸಮಯ ಎಷ್ಟು ಬೇಗ ಆಗುತ್ತದೆ” ಎಂದು ಬರೆದುಕೊಂಡಿದ್ದಾರೆ. ಸದ್ಯ ರಾಧಿಕಾ ಈ ವಿಡಿಯೋ ಅಪ್ಲೋಡ್ ಮಾಡಿ ಕೆಲವೇ ಗಂಟೆಗಳಲ್ಲಿ 3.17 ಲಕ್ಷಕ್ಕೂ ಅಧಿಕ ವೀವ್ಸ್ ಕಂಡಿದೆ. ಕೆಲವರು ‘ಕ್ಯೂಟ್ ಬೇಬಿ’ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಇತ್ತೀಚೆಗಷ್ಟೆ ರಾಕಿಂಗ್ ಸ್ಟಾರ್ ಯಶ್ ತಮ್ಮ ಮಗಳ ಜೊತೆ ಆಟವಾಡುತ್ತಿದ್ದ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ರಾಧಿಕಾ ಅವರು ಕೂಡ ತಮ್ಮ ಮಗಳ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡುತ್ತಿರುತ್ತಾರೆ. ಇದೀಗ ರಾಧಿಕಾ ಮಗಳ ಹೊಸ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಈ ವಿಡಿಯೋ ನೋಡಿ ಅಭಿಮಾನಿಗಳು ಕಮೆಂಟ್ ಮಾಡಿ ಐರಾಳಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.